ಕಾರಿಗೆ ಟಿಪ್ಪರ್ ಡಿಕ್ಕಿ: ಕೆಲಸ ಮುಗಿಸಿ ಮನೆಗೆ ತೆರಳುತ್ತಿದ್ದ ಕಾರ್ಮಿಕರ ಪೈಕಿ ಓರ್ವ ಸಾವು
11/08/2023
ಕಾರಿಗೆ ಟಿಪ್ಪರ್ ಡಿಕ್ಕಿ ಹೊಡೆದು ಕಾರಿನಲ್ಲಿದ್ದವರ ಪೈಕಿ ಓರ್ವ ಮೃತಪಟ್ಟ ಘಟನೆಯು ಮಂಗಳೂರು ನಗರದ ಹೊರವಲಯದ ಮೂರುಕಾವೇರಿ ಸಮೀಪದ ಮಾರಿಗುಡಿ ಬಳಿ ನಡೆದಿದೆ.
ಮೃತರನ್ನು ರಾಮಣ್ಣ ಎಂದು ಗುರುತಿಸಲಾಗಿದೆ. ಐಕಳ ಕಡೆಯಿಂದ ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಟಿಪ್ಪರ್ ಮೂರುಕಾವೇರಿ ಸಮೀಪದ ಮಾರಿಗುಡಿ ಬಳಿ ಕಾರ್ನಾಡ್ ಕಡೆಯಿಂದ ಬೆಳುವಾಯಿ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಕೂಡಲೇ ಸ್ಥಳೀಯರು ಆಸ್ಪತ್ರೆಗೆ ದಾಖಾಲಿಸಿದ್ದು ಓರ್ವ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಕಾರಿನಲ್ಲಿದ್ದವರು ಕಟ್ಟಡ ಕಾರ್ಮಿಕರು ಎಂದು ತಿಳಿದು ಬಂದಿದೆ.
ಇವರು ಕೆಲಸ ಮುಗಿಸಿ ಮೂಡಬಿದಿರೆಯ ಬೆಳುವಾಯಿ ಕಡೆಗೆ ಹೋಗುತ್ತಿದ್ದರು. ಸ್ಧಳಕ್ಕೆ ಮಂಗಳೂರು ಉತ್ತರ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.