ಅತಿಯಾದ ಶಿಸ್ತಿನ ಪಾಠದಿಂದ ಬೇಸತ್ತು ತಾಯಿಯ ಜೊತೆ ಸೇರಿ ತಂದೆಯನ್ನೇ ಹತ್ಯೆಗೈದ ಮಗ!

ಬೆಂಗಳೂರು: ತಂದೆಯ ಅತಿಯಾದ ಶಿಸ್ತಿನ ಪಾಠದಿಂದ ಬೇಸತ್ತ ಮಗ ತನ್ನ ತಾಯಿಯ ಜೊತೆಗೆ ಸೇರಿ ತಂದೆಯನ್ನೇ ಮುಗಿಸಿದ ಘಟನೆ ವಿವೇಕನಗರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮಾಜಿ ಸೈನಿಕ, ವಿವೇಕನಗರ ನಿವಾಸಿ ಬೋಲು ಅರಬ್ (47) ಹತ್ಯೆಗೀಡಾದ ವ್ಯಕ್ತಿಯಾಗಿದ್ದಾರೆ. ಇವರ ಮಗ ಸಮೀರ್(19) ಹಾಗೂ ತಾಯಿ ತಬಸ್ಸುಮ್ (36) ಹತ್ಯೆ ನಡೆಸಿದವರಾಗಿದ್ದಾರೆ. ಘಟನೆಯ ಬಳಿಕ ಪತ್ನಿ ಮತ್ತು ಮಗನನ್ನು ಪೊಲೀಸರು ಬಂಧಿಸಿದ್ದಾರೆ.
ಮಹಾರಾಷ್ಟ್ರ ಮೂಲದ ಬೋಲು ಅರಬ್ ನಿವೃತ್ತ ಸೈನಿಕರಾಗಿದ್ದು, 2003ರಲ್ಲಿ ತಬಸ್ಸುಮ್ ರನ್ನು ಮದುವೆಯಾಗಿ ಪುತ್ರನ ಜತೆ ವಿವೇಕನಗರದಲ್ಲಿ ವಾಸವಾಗಿದ್ದರು. ಪುತ್ರ ಸಮೀರ್ ನಗರದ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದ. ಬೋಲು ಅರಬ್ ಶಿಸ್ತಿನ ವ್ಯಕ್ತಿಯಾಗಿದ್ದರು. ಪತ್ನಿ ಮತ್ತು ಪುತ್ರನಿಗೂ ಶಿಸ್ತಿನಿಂದ ಇರುವಂತೆ ಎಚ್ಚರಿಕೆ ನೀಡುತ್ತಿದ್ದರು.
ವಿನಾಕಾರಣ ಮನೆಯಿಂದ ಹೊರಗೆ ಹೋಗುವಂತಿಲ್ಲ. ಇಂತಿಷ್ಟೇ ಊಟ ಮಾಡಬೇಕೆಂದು ನಿಯಮ ಮಾಡಿದ್ದರು. ಈ ಅತೀಯಾದ ಶಿಸ್ತಿನಿಂದ ಪುತ್ರ ಮತ್ತು ಪತ್ನಿ ಬೇಸತ್ತಿದ್ದರು. ಹೀಗಾಗಿ ತಾಯಿ–ಮಗ ಸೇರಿ, ಶನಿವಾರ ರಾತ್ರಿ ಊಟಕ್ಕೆ ನಿದ್ರೆ ಮಾತ್ರೆ ಬರೆಸಿ ಬೋಲು ಅರಬ್ ಗೆ ನೀಡಿದ್ದರು. ಊಟ ಮಾಡಿದ ಬಳಿಕ ಬೋಲು ಅರಬ್ ಗಾಢ ನಿದ್ದೆಗೆ ಜಾರಿದಾಗ ಕೊಲೆ ಮಾಡಿದ್ದಾರೆ.
ಬೋಲು ಅರಬ್ ಮೃತಪಟ್ಟಿರುವುದು ಖಚಿತವಾದ ಬಳಿಕ ಸಮೀರ್, 112 ಪೊಲೀಸ್ ಸಹಾಯವಾಣಿಗೆ ಕರೆ ಮಾಡಿ ಯಾರೋ ನಾಲ್ಕೈದು ಮಂದಿ ಮನೆಗೆ ನುಗ್ಗಿ ತಂದೆಯನ್ನು ಕೊಲೆ ಮಾಡಿ ಪರಾರಿಯಾದರು ಎಂದು ಹೇಳಿದ್ದಾನೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಬಳಿಕ ತಾಯಿ-ಮಗನ ವರ್ತನೆ ಬಗ್ಗೆ ಅನುಮಾನಗೊಂಡು ಇಬ್ಬರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಕೊಲೆ ರಹಸ್ಯ ಬಯಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD