“ಅನಾಥ ಮಕ್ಕಳೆದರು ನಿಮ್ಮ ಸ್ವಂತ ಮಕ್ಕಳನ್ನು ಮುದ್ದಿಸದಿರಿ” ಎಂದ ಪ್ರವಾದಿ ಮಹಮ್ಮದ್(ಸ) ಅವರ ಜನ್ಮದಿನ ಇಂದು
ಇಂದು ಈದ್ ಮಿಲಾದ್. ಇಸ್ಲಾಮ್ ಧರ್ಮದ ಪ್ರಕಾರ ಅಲ್ಲಾಹನ ಕೊನೆಯ ಪ್ರವಾದಿ ಮಹಮ್ಮದ್ (ಸ) ಅವರ ಜನ್ಮದಿನ ಇಂದು ಎಂದು ವಿಶ್ವದಾದ್ಯಂತ ಆಚರಿಸಲಾಗುತ್ತಿದೆ. ಪ್ರವಾದಿಯವರು ಮಾನವೀಯತೆಯನ್ನು ಸಾರಿದವರು. ಬಡವ-ಶ್ರೀಮಂತ, ಬಿಳಿಯ-ಕರಿಯ(ವರ್ಣಗಳ ಬೇಧ), ಅನಾಥರು ಮೊದಲಾದ ಸಾಮಾಜಿಕ ಅಸಮಾನತೆಯನ್ನು ತೊಡೆದು ಹಾಕಿದವರು. ಕಾರ್ಮಿಕರ ಹಕ್ಕುಗಳನ್ನು ಪ್ರತಿಪಾದಿಸಿದವರು. ಒಂದು ಧರ್ಮ ಅದು ಧರ್ಮವಾಗುವುದು ಯಾವುದೇ ಬೇಧ ಭಾವಗಳಿಲ್ಲದ ಸಂದರ್ಭದಲ್ಲಿ ಮಾತ್ರ. ಇಸ್ಲಾಮ್ ನಲ್ಲಿ ಯಾವುದೇ ಬೇಧ ಭಾವಗಳಿಗೆ ಅವಕಾಶವಿಲ್ಲ. ಅಂತಹ ಧರ್ಮವನ್ನು ಪ್ರವಾದಿಯವರು ಪ್ರತಿಪಾದಿಸಿದ್ದರು.
“ಅನಾಥ ಮಕ್ಕಳ ಎದುರು ನಿಮ್ಮ ಸ್ವಂತ ಮಕ್ಕಳನ್ನು ಮುದ್ದಿಸದಿರಿ” ಎಂಬ ಅವರ ತತ್ವವು ಸಮಾನ ಸಮಾಜದ ಪ್ರೇರಕ ಶಕ್ತಿಯಾಗಿದೆ. ನಾವು ಇಂದಿಗೂ ನಮ್ಮ ಸಮಾಜದಲ್ಲಿ, ಆಡಂಬರದಿಂದ ಬದುಕುವವರನ್ನು ಕಾಣುತ್ತಿದ್ದೇವೆ. ನಾವು ಅವನಿಗಿಂತ ಮೇಲು ಎಂದು ತೋರಿಸಿಕೊಳ್ಳುವ ಪ್ರವೃತ್ತಿಗಳು ಎಲ್ಲಾ ಸಮಾಜಗಳಲ್ಲಿಯೂ ಇವೆ. ಬಡವನ ಎದುರು ಶ್ರೀಮಂತಿಕೆಯ ಆಡಂಬರ ಮಾಡುವವರು ಎಲ್ಲಾ ಸಮಾಜದಲ್ಲಿಯೂ ಇದ್ದಾರೆ. ಇಲ್ಲದವರ ಎದುರು ಇರುವವರು ಮಾಡುವ ಆಡಂಬರದ ಬದುಕನ್ನು ಪ್ರವಾದಿಯವರು ಒಪ್ಪಿರಲಿಲ್ಲ. ಅನಾಥ ಮಕ್ಕಳ ಎದುರು ನಿಮ್ಮ ಸ್ವಂತ ಮಕ್ಕಳನ್ನು ಮುದ್ದಿಸಬೇಡಿ. ನೀವು ಹಾಗೆ ಮುದ್ದಿಸುವುದರಿಂದಾಗಿ ಆ ಅನಾಥ ಮಗುವಿನ ಮನಸ್ಸಿಗೆ ತುಂಬಾ ನೋವಾಗುತ್ತದೆ ಎಂಬ ಆ ಮಾತು ಎಷ್ಟೊಂದು ಮೌಲ್ಯಯುವಾಗಿದೆ ನೋಡಿ.
“ದುಡಿದವನ ಬೆವರ ಹನಿ ಆರುವ ಮೊದಲೇ ಆತನ ಸಂಬಳ ನೀಡಿ” ಎಂಬ ಪ್ರವಾದಿ ಅವರ ಕಾರ್ಮಿಕರ ಪರವಾದ ತತ್ವವು ಕಾರ್ಮಿಕರ ಪರವಾಗಿದೆ. ಕಷ್ಟಪಟ್ಟು ದುಡಿಯುವವರ ಸಂಬಳವನ್ನು ಕೊಡದೇ ಇಂದಿಗೂ ಬಹಳಷ್ಟು ಸಂಸ್ಥೆಗಳು ಅವರನ್ನು ಸತಾಯಿಸುತ್ತವೆ. ಸಂಬಳ ಕೇಳಿದರೆ, ಬೈದು ಕಳುಹಿಸುತ್ತವೆ. ಕೆಲಸದಿಂದ ವಜಾಗೊಳಿಸುತ್ತವೆ. ರಾಜಸ್ಥಾನದಲ್ಲಿ ನಡೆದ ಘಟನೆಯೊಂದರಲ್ಲಿ ಸಂಬಳ ಕೇಳಿದ್ದಕ್ಕೆ ದಲಿತ ಯುವಕನೊಬ್ಬನನ್ನು ಸಜೀವ ದಹನ ಮಾಡಿ, ಫ್ರೀಜರ್ ನಲ್ಲಿ ಮೃತದೇಹವನ್ನು ಬಚ್ಚಿಟ್ಟಿದ್ದರು. ಇಂತಹದ್ದೆಲ್ಲ, ಘಟನೆಗಳು ಕಾರ್ಮಿಕ ವಿರೋಧಿಯಾಗಿದೆ. ಆದರೆ, ಪ್ರವಾದಿಯವರು, ದುಡಿದವನ ಬೆವರು ಆರುವ ಮೊದಲೇ ವೇತನ ನೀಡಬೇಕು ಎಂದು ಹೇಳುತ್ತಾರೆ. ಅವರ ಕಾರ್ಮಿಕರ ಪರವಾದ ನಿಲುವು ನಿಜಕ್ಕೂ ಅದ್ಭುತವೇ ಸರಿ.
ಪ್ರವಾದಿಯವರ ತತ್ವಗಳು, ಮಾನವತೆಯ ಪರವಾಗಿದೆ. ಅಲ್ಲಾಹನ ಕರುಣೆ ನಿಮ್ಮದಾಗಬೇಕಾದರೆ, ನೀವು ಇನ್ನೊಬ್ಬರ ಮೇಲೆ ಕರುಣೆ, ಪ್ರೀತಿ ತೋರಿಸಬೇಕು ಎಂದು ಪ್ರವಾದಿಯವರು ಹೇಳುತ್ತಾರೆ. “ಭೂಮಿಯಲ್ಲಿರುವವರ ಮೇಲೆ ಕರುಣೆ ತೋರಿಸಿರಿ, ಆಕಾಶದಲ್ಲಿರುವವನು ನಿಮ್ಮ ಮೇಲೆ ಕರುಣೆ ತೋರಿಸುವನು” ಎಂಬ ಪ್ರವಾದಿ ಅವರ ಮಾತುಗಳು ಭೂಮಿಯಲ್ಲಿರುವ ಪ್ರತಿ ಜೀವಿಯ ಮೇಲೆಯೂ ಕರುಣೆಯನ್ನು ತೋರಿಸಬೇಕು ಎಂಬ ನೀತಿಯನ್ನು ಹೇಳಿದೆ.