ಗಾಝಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ: ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿ ಹತ್ಯೆ
ಅಕ್ಟೋಬರ್ 7 ರಂದು ಇಸ್ರೇಲ್ ಮೇಲೆ ಅನಿರೀಕ್ಷಿತ ದಾಳಿಗೆ ಕಾರಣಕರ್ತ ಎನ್ನಲಾದ ಉನ್ನತ ಹಮಾಸ್ ಕಮಾಂಡರ್ ಇಬ್ರಾಹಿಂ ಬಿಯಾರಿ ಅವರನ್ನು ಗಾಜಾ ಮೇಲಿನ ವೈಮಾನಿಕ ದಾಳಿಯಲ್ಲಿ ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆ (ಐಡಿಎಫ್) ಪ್ರಕಟಿಸಿದೆ.
ಐಡಿಎಫ್ ಫೈಟರ್ ಜೆಟ್ ಗಳು ಹಮಾಸ್ ನ ಕೇಂದ್ರ ಜಬಾಲಿಯಾ ಬೆಟಾಲಿಯನ್ ಕಮಾಂಡರ್ ಇಬ್ರಾಹಿಂ ಬಿಯಾರಿಯನ್ನು ಹತ್ಯೆ ಮಾಡಿದೆ. ಅಕ್ಟೋಬರ್ 7 ರಂದು ನಡೆದ ಇಸ್ರೇಲ್ ಮೇಲಿನ ದಾಳಿಗೆ ಕಾರಣರಾದ ನಾಯಕರಲ್ಲಿ ಬಿಯಾರಿ ಕೂಡ ಒಬ್ಬರು” ಎಂದು ಐಡಿಎಫ್ ಸಾಮಾಜಿಕ ಮಾಧ್ಯಮ ಪ್ಲಾಟ್ ಫಾರ್ಮ್ ಎಕ್ಸ್‌ನಲ್ಲಿ ಹೇಳಿದೆ.
ಸೇನೆಯ ಪ್ರಕಾರ, ವೈಮಾನಿಕ ದಾಳಿಯಲ್ಲಿ ಬಿಯಾರಿ ಜೊತೆಗೆ ಹೆಚ್ಚಿನ ಸಂಖ್ಯೆಯ ಹಮಾಸ್ ಬಂಡುಕೋರರು ಸಾವನ್ನಪ್ಪಿದ್ದಾರೆ. ಇದು ಈ ಪ್ರದೇಶದಲ್ಲಿ ಹಮಾಸ್ ನ ಕಮಾಂಡ್ ಮತ್ತು ನಿಯಂತ್ರಣವನ್ನು ಹಾನಿಗೊಳಿಸಿದೆ. ದಾಳಿಯ ನಂತರ ಭೂಗತ ಬಂಡುಕೋರರ ಮೂಲಸೌಕರ್ಯವೂ ಕುಸಿದಿದೆ ಎನ್ನಲಾಗಿದೆ.
ಇಬ್ರಾಹಿಂ ಬಿಯಾರಿ ಯಾರು..?
ಬಿಯಾರಿ ಹಮಾಸ್ ನ ಕೇಂದ್ರ ಜಬಾಲಿಯಾ ಬೆಟಾಲಿಯನ್ ನ ಕಮಾಂಡರ್ ಆಗಿದ್ದರು. ಐಡಿಎಫ್ ಪ್ರಕಾರ, ಅಕ್ಟೋಬರ್ 7 ರಂದು ವಿನಾಶಕಾರಿ ದಾಳಿ ನಡೆಸಲು ಹಮಾಸ್ ಗುಂಪಿನ ‘ನುಖ್ಬಾ’ (ಗಣ್ಯ) ಪಡೆಗಳನ್ನು ಇಸ್ರೇಲ್ ಗೆ ಕಳುಹಿಸಲು ಬಿಯಾರಿ ಕಾರಣನಾಗಿದ್ದರು. ಇದು 1,400 ಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಯಿತು.
13 ಇಸ್ರೇಲಿಗಳ ಸಾವಿಗೆ ಕಾರಣವಾದ 2004 ರ ಅಶ್ದೋಡ್ ಬಂದರು ದಾಳಿಯಲ್ಲಿ ಬಿಯಾರಿ ಭಾಗಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಅವರು ಎರಡು ದಶಕಗಳಿಂದ ಇಸ್ರೇಲ್ ಕಡೆಗೆ ರಾಕೆಟ್ ದಾಳಿಗಳನ್ನು ನಿರ್ದೇಶಿಸಿದ್ದಾರೆ ಮತ್ತು ಗಾಜಾದಲ್ಲಿ ಐಡಿಎಫ್ ಪಡೆಗಳ ಮೇಲೆ ದಾಳಿ ನಡೆಸುವ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಮಿಲಿಟರಿ ತಿಳಿಸಿದೆ.