ಈದ್ ಮಿಲಾದ್ ಹಬ್ಬದಂದು ಹಸಿ ಮೀನು ವ್ಯಾಪಾರ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ: ವಿವಾದಕ್ಕೆ ಕಾರಣವಾದ ಬ್ಯಾನರ್! - Mahanayaka
9:56 AM Wednesday 15 - January 2025

ಈದ್ ಮಿಲಾದ್ ಹಬ್ಬದಂದು ಹಸಿ ಮೀನು ವ್ಯಾಪಾರ ಮಾಡದಂತೆ ವ್ಯಾಪಾರಿಗಳಿಗೆ ಎಚ್ಚರಿಕೆ: ವಿವಾದಕ್ಕೆ ಕಾರಣವಾದ ಬ್ಯಾನರ್!

eid milad
25/09/2023

ಮಂಗಳೂರಲ್ಲಿ ಪೋಸ್ಟರ್ ವೊಂದು ವಿವಾದ ಸೃಷ್ಟಿಸಿದೆ. ಸೆಪ್ಟೆಂಬರ್ 28ರ ಈದ್ ಮಿಲಾದ್ ಹಬ್ಬದ ನೆಪದಲ್ಲಿ ಮಂಗಳೂರು ನಗರದ ಬಂದರು ಮೀನುಗಾರಿಕಾ ದಕ್ಕೆಯಲ್ಲಿ ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಿನಲ್ಲಿ ಬ್ಯಾನರ್ ವೊಂದನ್ನು ಹಾಕಲಾಗಿದೆ. ಅದರಲ್ಲಿ ಅಂದು ಮುಂಜಾನೆ 3:45ರಿಂದ ಯಾವುದೇ ಮೀನು ವ್ಯಾಪಾರಿಗಳು ವ್ಯಾಪಾರ ಮಾಡದೇ ಕಡ್ಡಾಯ ರಜೆ ಹಾಕಬೇಕು. ತಪ್ಪಿದಲ್ಲಿ ಅಂತಹವರ ವಿರುದ್ಧ ಸಂಘದ ವತಿಯಿಂದ ಒಂದು ತಿಂಗಳ ಕಾಲ ನಿಷೇಧ ಹೇರಲಾಗುವುದು ಎಂದು ಬ್ಯಾನರಿನಲ್ಲಿ ಎಚ್ಚರಿಸಲಾಗಿದೆ.

ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಅಂತಹ ಮೀನು ವ್ಯಾಪಾರಿಗಳ ವಿರುದ್ಧ ಒಂದು ತಿಂಗಳ ಕಾಲ ಬಂದರು ದಕ್ಕೆಯಲ್ಲಿ ವ್ಯಾಪಾರ ಮಾಡದಂತೆ ಹಸಿ ಮೀನು ವ್ಯಾಪಾರಸ್ಥರ ಸಂಘವು ಕಾನೂನು ಕ್ರಮ ತೆಗೆದುಕೊಳ್ಳುತ್ತದೆ. ಅಲ್ಲದೇ ದಂಡನೆಯನ್ನೂ ವಿಧಿಸಲಾಗುತ್ತದೆ. ಇತರ ಯಾವುದೇ ಸಹಾಯ, ಸಹಕಾರದಿಂದ ವಂಚಿತರಾಗಬೇಕಾಗುತ್ತದೆ ಎಂದು ಹಸಿ ಮೀನು ವ್ಯಾಪಾರಸ್ಥರ ಸಂಘದ ಹೆಸರಲ್ಲಿ ಬ್ಯಾನರ್ ಹಾಕಿರುವುದು ವಿವಾದಕ್ಕೆ ಗ್ರಾಸವಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆ ಶುರುವಾಗಿದೆ.


ADS

ಅತ್ತ ಈ ಪೋಸ್ಟರ್ ಗೆ ವಿಶ್ವ ಹಿಂದೂ ಪರಿಷದ್ ಖಂಡನೆ ವ್ಯಕ್ತಪಡಿಸಿದ್ದು,  ಮುಂದೆ ಬರಲಿರುವ ಮುಸ್ಲಿಮರ ಹಬ್ಬ ಈದ್ ಮಿಲಾದ್ ಹಿಂದೂ ಮೀನು ವ್ಯಾಪಾರಸ್ಥರು ಮೀನುಗಾರಿಕಾ ಬಂದರಿನಲ್ಲಿ ವ್ಯಾಪಾರ ನಡೆಸಿದರೆ ಅವರ ಮೇಲೆ  ಒಂದು ತಿಂಗಳ ಕಾಲ ವ್ಯಾಪಾರ ನಿರ್ಬಂಧ ಹಾಗೆ ದಂಡ ವಿಧಿಸುವಂತಹ ಬ್ಯಾನರ್ ನ್ನು ಧಕ್ಕೆಯ ಹಸಿ ಮೀನು ವ್ಯಾಪಾರಸ್ಥರು ಹಾಕಿದ್ದು ಖಂಡನೀಯ. ಪ್ರಜಾಪ್ರಭುತ್ವ ದೇಶದಲ್ಲಿ ಇದು ಸಂವಿಂಧಾನ ವಿರೋಧಿಯಾಗಿದೆ.  ಹಿಂದೂ ಮೀನು ವ್ಯಾಪಾರಸ್ಥರ ಮೇಲೆ ನಡೆಯುವ ಈ ದೌರ್ಜನ್ಯಕ್ಕೆ ವಿಶ್ವ ಹಿಂದೂ ಪರಿಷದ್ ಖಂಡನೆ ಮಾಡುತ್ತದೆ. ಅಲ್ಲದೆ ಜಿಲ್ಲಾಡಳಿತ ತಕ್ಷಣ  ಹಸಿ ಮೀನು ವ್ಯಾಪಾರಸ್ಥ ಸಂಘದ ಅಧ್ಯಕ್ಷರ ಮೇಲೆ ಹಾಗು ಈ ಬ್ಯಾನರ್ ಅಳವಡಿಸಿದವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ವಿಶ್ವ ಹಿಂದೂ ಪರಿಷದ್ ಜಿಲ್ಲಾ ಕಾರ್ಯದರ್ಶಿ ಶಿವಾನಂದ್ ಮೆಂಡನ್ ಆಗ್ರಹಿಸಿದ್ದಾರೆ.

ಇತ್ತ ಡಿವೈಎಫ್ ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಕೂಡಾ ಈ ಪೋಸ್ಟರ್ ಕುರಿತು ಪ್ರಕಟಣೆಯಲ್ಲಿ ಪ್ರತಿಕ್ರಿಯೆ ನೀಡಿದ್ದು, ಗಣೇಶ ಚತುರ್ಥಿ, ಬಾರ್ಕೂರು (ಮೊಗವೀರರ ಕುಲದೇವತೆ) ಜಾತ್ರೆ, ಉಚ್ಚಿಲ (ಮೊಗವೀರರ ಪ್ರಧಾನ ದೇವಳ) ದೇವಸ್ಥಾನದ ಜಾತ್ರೆ, ಈದ್ ಮಿಲಾದ್, ರಮ್ಜಾನ್, ಬಕ್ರೀದ್, ಕ್ರೈಸ್ತರ ಕ್ರಿಸ್ ಮಸ್, ಗುಡ್ ಫ್ರೈಡೆ ಹಬ್ಬಗಳ ದಿನ ಮಂಗಳೂರಿನ ಮೀನುಗಾರಿಕಾ ಬಂದರಿಗೆ ಕಡ್ಡಾಯ ರಜೆ. ಇದು ಮೀನುಗಾರಿಕಾ ಬಂದರಿನ ಎಲ್ಲಾ ವಿಭಾಗದ ಮೀನುಗಾರರು ಒಟ್ಟಾಗಿ ಕಳೆದ 15 ವರ್ಷಗಳಿಂದ ಅನುಸರಿಸುತ್ತಿರುವ ನಿಯಮ. ಮೊದಲು ಮಂಗಳೂರು ಮೀನುಗಾರಿಕಾ ಬಂದರು ವರ್ಷದ 365 ದಿನವೂ ಕಾರ್ಯಾಚರಿಸುತ್ತಿತ್ತು. ಮೀನುಗಾರರಿಗೆ ಹಬ್ಬದ ದಿನವೂ ರಜೆ, ವಿಶ್ರಾಂತಿ ಇರಲಿಲ್ಲ. ಹಬ್ಬದ ದಿನ ಅರ್ಧದಷ್ಟು ವ್ಯಾಪಾರಿಗಳು, ಮೀನುಗಾರರು ರಜೆ ಹಾಕಿದರೆ ಮೀನು ವ್ಯಾಪಾರದಲ್ಲಿ ಏರು ಪೇರು ಉಂಟಾಗಿ ಆ ದಿನಗಳಂದು ಮೀನುಗಾರರು ದೊಡ್ಡ ನಷ್ಟ ಅನುಭವಿಸವಂತಾಗುತ್ತಿತ್ತು. ಅದಕ್ಕಾಗಿ ಮೀನುಗಾರಿಕೆಯ ಎಲ್ಲಾ ವಿಭಾಗದವರು ಒಂದಾಗಿ ತೆಗೆದು ಕೊಂಡ ನಿರ್ಧಾರ. ತಮ್ಮ ಸದಸ್ಯರಿಗೆ ಕಡ್ಡಾಯ ಪಾಲಿಸುವಂತೆ ನಿಯಮ ಮಾಡಿದ್ದಾರೆ.

ಈಗ ಮಂಗಳೂರು ಮೀನುಗಾರಿಕಾ ಧಕ್ಕೆ ಯಲ್ಲಿ ಈದ್ ಮಿಲಾದ್ ಕಡ್ಡಾಯ ರಜೆಯ ಹಿನ್ನಲೆಯಲ್ಲಿ ಹಾಕಿರುವ ಬ್ಯಾನರ್ ಅನ್ನು ಮುಂದಿಟ್ಟು ಗೊಂದಲ ಸೃಷ್ಟಿಸಲು ಯತ್ನಿಸುತ್ತಿರುವ, ಮತೀಯ ಬಣ್ಣ ಕಟ್ಟಲು ಶ್ರಮ ಪಡುತ್ತಿರುವವರಿಗೆ ಇದೆಲ್ಲಾ ತಿಳಿಯದ ವಿಚಾರ ಏನಲ್ಲ. ಉದ್ದೇಶ ಪೂರ್ವಕವಾಗಿಯೇ ಮಾಡುತ್ತಿದ್ದಾರೆ. ಜನತೆ ಇಂತಹ ದುರುದ್ದೇಶಗಳನ್ನು ವಿಫಲಗೊಳಿಸಬೇಕು. ಮಂಗಳೂರು ಮೀನುಗಾರಿಕಾ ಬಂದರಿನಲ್ಲಿ ಎಲ್ಲಾ ಧರ್ಮದ ಮೀನುಗಾರರು ಸೋದರರಂತೆ ಬಾಳುತ್ತಾರೆ. ಎಲ್ಲರ ಹಬ್ಬಗಳನ್ನು ಎಲ್ಲರೂ ಸಂಭ್ರಮಿಸುತ್ತಾರೆ. ಹುಳಿ ಹಿಂಡುವ ಕೆಲಸ ಬುದ್ದಿವಂತರಿಗೆ ಒಳ್ಳೆಯದಲ್ಲ ಎಂದು ಮುನೀರ್ ಕಾಟಿಪಳ್ಳ ಪ್ರತಿಕ್ರಿಯಿಸಿದ್ದಾರೆ.

ಇತ್ತೀಚಿನ ಸುದ್ದಿ