11:46 PM Wednesday 12 - March 2025

ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಪೋಟ: 11 ಪರ್ವತಾರೋಹಿಗಳು ಸಾವು

05/12/2023

ಇಂಡೋನೇಷ್ಯಾದ ಮರಾಪಿಯಲ್ಲಿ ಜ್ವಾಲಾಮುಖಿ ಸ್ಪೋಟಗೊಂಡು 11 ಪರ್ವತಾರೋಹಿಗಳು ಸಾವನ್ನಪ್ಪಿದ್ದಾರೆ.
22 ಮಂದಿ ನಾಪತ್ತೆಯಾಗಿದ್ದಾರೆ.

ಪಶ್ಚಿಮ ಸುಮಾತ್ರದ ಅಗಮ್ ಪ್ರಾಂತ್ಯದಲ್ಲಿರುವ ಮೌಂಟ್ ಮರಾಪಿಯ 2900 ಮೀಟರ್ ಎತ್ತರದ ಪರ್ವತವನ್ನು ಹತ್ತಲು 75 ಪರ್ವತಾರೋಹಿಗಳು ಶನಿವಾರ ಪ್ರಾರಂಭಿಸಿದ್ದರು. ದಿಢೀರ್ ಜ್ವಾಲಾಮುಖಿ ಸ್ಪೋಟಗೊಂಡು ದಟ್ಟ ಹೊಗೆ ಆವರಿಸಿತ್ತು. ಸುಮಾರು 3000 ಮೀಟರ್ ಎತ್ತರದವರೆಗೂ ಬೂದಿ ಹಾರಿದ್ದು, ದಟ್ಟ ಪದರ ಆವರಿಸಿದೆ. ಸುತ್ತಲಿನ ಪಟ್ಟಣ, ಗ್ರಾಮಗಳು ಜ್ವಾಲಾಮುಖಿಯ ಅವಶೇಷಗಳಿಂದ ಮುಚ್ಚಿಹೋಗಿವೆ.

ಈ ಘಟನೆಯಲ್ಲಿ ಎಂಟು ಮಂದಿಗೆ ಸುಟ್ಟ ಗಾಯವಾಗಿದ್ದು, ಓರ್ವನ ಕೈಕಾಲು ಮುರಿದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ರಕ್ಷಣಾ ಕಾರ್ಯಾಚರಣೆ ಮುಂದುವರಿಸಲಾಗಿದೆ.
ರಕ್ಷಣಾ ಕಾರ್ಯಕರ್ತರು ಪರ್ವತಾರೋಹಿಗಳ ಮೃತದೇಹಗಳನ್ನು ಪತ್ತೆ ಹಚ್ಚಿದ್ದು ನಾಪತ್ತೆಯಾಗಿರುವ ಹಲವು ಪರ್ವತಾರೋಹಿಗಳ ಪತ್ತೆಗಾಗಿ ತೀವ್ರ ಶೋಧ ಮುಂದುವರಿಸಲಾಗಿದೆ ಎಂದು ಪಶ್ಚಿಮದ ಸುಮಾತ್ರದ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಮುಖ್ಯಸ್ಥ ಅಬ್ದುಲ್ ಮಲಿಕ್ ತಿಳಿಸಿದ್ದಾರೆ.

ಪೊಲೀಸರು, ಸೈನಿಕರು ಸೇರಿ 168 ಮಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದು, ಸ್ಪೋಟದ ಬಳಿಕ ಪರ್ವತಾರೋಹಿಗಳು ಸಂಚರಿಸುವ ಎರಡು ಮಾರ್ಗಗಳನ್ನು ಮುಚ್ಚಲಾಗಿದೆ. ಶಿಖರಕ್ಕೆ ಹತ್ತಿರವಾಗಿರುವ ರುಬೈ ಮತ್ತು ಕುಮಾಂತಿಯಾಂಗ್ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗಿದೆ.

ಇತ್ತೀಚಿನ ಸುದ್ದಿ

Exit mobile version