ಆಟಗಳ ಮೂಲಕ ತುಳು ಪರಂಪರೆಯ ಬಗ್ಗೆ ಜಾಗೃತಿ ಮೂಡಲು ಸಾಧ್ಯ: ಶೈಲೇಶ್ ಆರ್.ಜೆ - Mahanayaka
1:26 AM Thursday 12 - December 2024

ಆಟಗಳ ಮೂಲಕ ತುಳು ಪರಂಪರೆಯ ಬಗ್ಗೆ ಜಾಗೃತಿ ಮೂಡಲು ಸಾಧ್ಯ: ಶೈಲೇಶ್ ಆರ್.ಜೆ

tulunadu
08/08/2022

ಬೆಳ್ತಂಗಡಿ: ‘ತುಳುನಾಡಿನ ಹಲವು ಸಾಂಪ್ರದಾಯಿಕ ಆಟಗಳಲ್ಲಿ ಚೆನ್ನಮಣೆ ಆಟ ಪ್ರಮುಖವಾದುದು. ಇಂತಹ ಆಟಗಳ ಮೂಲಕ ತುಳು ಪರಂಪರೆಯ ಬಗ್ಗೆ ಜಾಗೃತಿ ಮೂಡಲು ಸಾಧ್ಯ ಎಂದು ತುಳುನಾಡು ಒಕ್ಕೂಟದ ಸ್ಥಾಪಕಾಧ್ಯಕ್ಷ ಶೈಲೇಶ್ ಆರ್.ಜೆ ಹೇಳಿದರು.

ಅವರು ಭಾನುವಾರ ಬೆಳ್ತಂಗಡಿ ಡಾ.ಬಿ.ಆರ್. ಅಂಬೇಡ್ಕರ್ ಭವನದಲ್ಲಿ  ತುಳುನಾಡು ಒಕ್ಕೂಟ ನೇತೃತ್ವದಲ್ಲಿ 2ನೇ ವರ್ಷದ ‘ಚೆನ್ನಮಣೆ ಗೊಬ್ಬುದ ಪಂಥೊ’  ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಕೆಲವಾರು ವರ್ಷಗಳ ಹಿಂದೆ ತುಳುನಾಡಿನ ವಿಚಾರ, ತುಳು ಸಂಪ್ರದಾಯದ ಕುರಿತು ಮಾತನಾಡುವಾಗ ತಮಾಷೆ ಮಾಡುವ ವಾತಾವರಣವಿತ್ತು. ಆದರೆ ಇಂದು ತುಳು ವಿಚಾರಗಳ ಕುರಿತು ಜನ ಜಾಗೃತಿ ಆಗಿದ್ದಾರೆ. ತುಳು ನಮ್ಮ ಮಣ್ಣಿನ ಭಾಷೆ. ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ತುಳು ಭಾಷೆಯನ್ನು ಕಲಿಸುವ ಕೆಲಸ ಅಗತ್ಯವಾಗಿ ಆಗಬೇಕಾಗಿದೆ’ ಎಂದರು.

ಕೊಯ್ಯೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ರಾಧಾಕೃಷ್ಣ ಮಾತನಾಡಿ, ‘ತುಳುನಾಡಿನ ಸಾಂಪ್ರದಾಯಿಕ ಅನೇಕ ಆಟಗಳು ಭೂಮಿಯಿಂದ ಬಂದ ಕಲೆಯಾಗಿದೆ. ಅವು ನಮ್ಮ ವ್ಯವಸಾಯದ ಮೂಲದಿಂದ ಬಂದವುಗಳು. ಹಾಗಾಗಿ ಅವುಗಳಲ್ಲಿ ಅನುಭವ ಸಿಗುತ್ತಿತೇ ಹೊರತು ಬದುಕು ಬರಡಾಗುತ್ತಿರಲಿಲ್ಲ. ಇಂದಿನ ಅನೇಕ ಆಟಗಳು ಜೂಜಿನ ಆಟಗಳಾಗಿ ಬೆಳೆದುಬಿಟ್ಟಿರುವುದು ದುರಂತ ’ ಎಂದರು.

ಕಾರ್ಯಕ್ರಮದ ಅತಿಥಿಗಳಾದ ವಕೀಲ ಗೋಪಾಲಕೃಷ್ಣ ಬಿ, ಅಶ್ವಿನಿ ಎ ಹೆಬ್ಬಾರ್ ಮುಂಡಾಜೆ, ತುಳು ಸಾಹಿತ್ಯ ಅಕಾಡೆಮಿ ಸದಸ್ಯ ಚೇತಕ್ ಪೂಜಾರಿ, ದೈವ ಪಾತ್ರಿ ರವೀಶ್ ಪಡುಮಲೆ, ಬೆಂಗಳೂರು ಉದ್ಯಮಿ ನಟೇಶ್ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ತುಳುನಾಡು ಒಕ್ಕೂಟದ ಅಧ್ಯಕ್ಷ ಶೇಖರ್ ಗೌಡತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ವಸಂತ ಹೇಬೆಬೈಲು, ರಮೇಶ್ ದೋಂಡೋಲೆ, ಹೇಮಂತ್ ನಾವೂರು, ಶುಭಲಕ್ಷ್ಮೀ ಕಾರ್ಕಳ ಇವರನ್ನು ಸನ್ಮಾನಿಸಲಾಯಿತು.

ತುಳುನಾಡು ಒಕ್ಕೂಟದ ಕಾರ್ಯದರ್ಶಿ ರಾಜು ಬಿ.ಹೆಚ್. ಕಾರ್ಯಕ್ರಮ ನಿರೂಪಿಸಿದರು. ಹೇಮಾವತಿ ಕೆ. ಸ್ವಾಗತಿಸಿದರು. ನವೀನ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ