ತುಳು ಪೀಠ: ನಮ್ಮ ಭಾಷೆ, ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳಲು ಕಾರ್ಯಪ್ರವೃತ್ತರಾಗಬೇಕಿದೆ: ಡಾ.ಡಿ.ವೀರೇಂದ್ರ ಹೆಗ್ಗಡೆ ಕರೆ
ತುಳುವನ್ನು ಸಂವಿಧಾನದ ಎಂಟನೇ ಪರಿಚ್ಛೇದಕ್ಕೆ ಸೇರಿಸುವ ಪ್ರಯತ್ನ ನಡೆದೇ ಇದೆ. ಹಾಗೆಂದು ನಾವು ಅದಕ್ಕೆ ಸೀಮಿತವಾಗದೇ ನಮ್ಮ ಭಾಷೆ, ಮೂಲ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠ, ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ತುಳು ಸ್ನಾತಕೋತ್ತರ ಅಧ್ಯಯನ ವಿಭಾಗದ ಸಹಯೋಗದೊಂದಿಗೆ ನಡೆಯುತ್ತಿರುವ ತುಳು ವೆಬಿನಾರ್ನ ನೂರನೇ ಸಂಚಿಕೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡಿದ ಅವರು, ಎಲ್ಲಿದ್ದರೂ ಸತ್ಯ, ಧರ್ಮ, ಸಹಬಾಳ್ವೆಯ ದಾರಿಯಲ್ಲಿ ನಡೆಯಲು ಹೇಳಿಕೊಟ್ಟಿರುವ ತುಳು ಭಾಷೆ, ಸಂಸ್ಕೃತಿಯ ಬಗ್ಗೆ ಶ್ರೀ ಧರ್ಮಸ್ಥಳ ಸಂಸ್ಕೃತಿ ಸಂಶೋಧನಾ ಪ್ರತಿಷ್ಠಾನ ಕೆಲಸ ಮಾಡುತ್ತಿದೆ. ತುಳುನಾಡಿನ ಜಾನಪದ ಔಷಧಿಗಳು, ಬೆಳೆಗಳ ಕುರಿತಂತೆ ಇನ್ನಷ್ಟೂ ಅಧ್ಯಯನ ಪೀಠದ ಮೂಲಕ ನಡೆಯಬೇಕಾಗಿದೆ, ಎಂದರು.
ತುಳು ಭಾಷೆ ಬೆಳೆದು ಬಂದ ದಾರಿಯ ಕುರಿತು ವಿಶೇಷ ಉಪನ್ಯಾಸ ನೀಡಿದ ತುಳು-ಕನ್ನಡ ವಿದ್ವಾಂಸ, ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ, ತುಳು ತಮಿಳಿನ ಉಪಭಾಷೆಯಾಗಿದ್ದಿರಬಹುದು ಎಂದು ಭಾವಿಸಿದ್ದ ಸಮಯದಲ್ಲಿ ಭಾಷಾ ವಿಜ್ಞಾನಿ ರಾಬರ್ಟ್ ಕಾಲ್ಡ್ವೆಲ್ (1856) ಅವರಿಂದಾಗಿ ತುಳು ಒಂದು ಸ್ವತಂತ್ರ್ರ ಮತ್ತು ಸಮೃದ್ಧ ಭಾಷೆ ಎಂಬುದು ತಿಳಿದುಬಂತು. ಬಾಸೆಲ್ ಮಿಷನ್ 1886 ರಲ್ಲಿ ಮೊದಲ ತುಳು ಶಬ್ದಕೋಶ ಹೊರತಂದಿತು. ರಷ್ಯನ್ ಸಂಶೋಧಕ ಎಂ.ಎಸ್.ಆಂಡ್ರೊನೋವ್ ಮತ್ತು ಪಿ.ಎಸ್.ಸುಬ್ರಹ್ಮಣ್ಯಮ್ ʼತುಳು ಇತರ ದ್ರಾವಿಡ ಭಾಷೆಗಳಿಗಿಂತ ವಿಭಿನ್ನʼ ಎಂದು ನಿರೂಪಿಸಿದರು.
ಲಕ್ಷ್ಮೀನಾರಾಯಣ ಭಟ್ ಮತ್ತು ಡಾ. ಡಿ.. ಶಂಕರ ಭಟ್ ಅವರ ಸಂಶೋಧನೆಗಳು ವಿದೇಶಗಳಲ್ಲೂ ತುಳುವಿನ ಸ್ಥಾನಮಾನ ಹೆಚ್ಚಿಸಿದವು. ತುಳುವಿನ ಬೆಳವಣಿಗೆಯಲ್ಲಿ ಆರಂಭದಲ್ಲಿ ವಿದೇಶೀ ಸಂಶೋಧಕರ, ಬಳಿಕ ದೇಶೀಯ ಭಾಷಾಭಿಮಾನಿಗಳ ಕೊಡುಗೆ ಅಪಾರ, ಎಂದರು.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಮಾತನಾಡಿ, ಅಕಾಡೆಮಿ ಐದು ಚಾಲೆನ್ಗಳ ಮೂಲಕ ತುಳು ಜ್ಞಾನದ ಪ್ರಸರಣ ಮತ್ತು ದಾಖಲೀಕರಣ ನಡೆಸಲಿದೆ. “ಸುಮಾರು 14 ಪುಸ್ತಕಗಳನ್ನು ಸಧ್ಯದಲ್ಲೇ ಪ್ರಕಟಿಸಲಾಗುವುದು. ಬರುವ ಫೆಬ್ರವರಿಯಲ್ಲಿ ರೂ. 9 ಕೋಟಿ ವೆಚ್ಚದ ʼತುಳು ಭವನʼ ಲೋಕಾರ್ಪಣೆಯಾಗಲಿದೆ. ಸುಮಾರು 350 ಶಿಕ್ಷಕರು ತುಳು ಕಲಿತು ಕಲಿಸಲು ಸಿದ್ಧರಾಗಿದ್ದಾರೆ. ತುಳು ಲಿಪಿಗೆ ರಾಷ್ಟ್ರ ಮಾನ್ಯತೆ ಸಿಕ್ಕಿದೆ. ಇತರ ವಿವಿಗಳಲ್ಲೂ ತುಳು ಸ್ನಾತಕೋತ್ತರ ಕೋರ್ಸ್ ನಡೆಸುವ ಕುರಿತು ಪ್ರಯತ್ನ ಸಾಗಿದೆ,” ಎಂದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಡಾ. ಕಿಶೋರ್ ಕುಮಾರ್ ಸಿ.ಕೆ, ಜ್ಞಾನವೇ ಬೆಳಕು ಎಂಬಂತೆ ವೆಬಿನಾರ್ ಸರಣಿ ನೂರು ಕಂತು ತಲುಪಿರುವುದು ವಿವಿಗೂ ಹೆಮ್ಮೆಯ ಸಂಗತಿ, ಎಂದರು.
ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಪಿ ಸುಬ್ರಹ್ಮಣ್ಯ ಯಡಪಡಿತ್ತಾಯ ಅವರು, ತುಳು ಪೀಠದ ಮೂಲಕ ಹೆಚ್ಚಿನ ಸಂಶೋಧನೆ, ಅಧ್ಯಯನಕ್ಕೆ ಅವಕಾಶ ಮಾಡಿಕೊಡಲಾಗುವುದು. ತುಳು ಸಾಹಿತ್ಯದ ಡಿಜಿಟಲೀಕರಣಕ್ಕೆ ಮುಂದಿನ ತಿಂಗಳಿನಿಂದಲೇ ಚಾಲನೆ ನೀಡಲಾಗುವುದು ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ತುಳು ಪೀಠದ ಸಂಯೋಜಕ ಡಾ. ಮಾಧವ ಎಂ.ಕೆ., ವೆಬಿನಾರ್ ನಲ್ಲಿ ಸಂಪನ್ಮೂಲ ವ್ಯಕ್ತಿಗಳು ಆಡಿದ ಮಾತನ್ನು ನಾಲ್ಕು ಕೃತಿಗಳ ರೂಪಕ್ಕೆ ಇಳಿಸಲಾಗುತ್ತಿದೆ. ಇದು ವಿದ್ಯಾರ್ಥಿಗಳಿಗೆ ಆಕರ ಗ್ರಂಥವಾಗಲಿದೆ. ಸಮಾಜದ ಎಲ್ಲರಿಗೂ ಜ್ಞಾನ ತಲುಪಬೇಕು ಎಂಬ ಉದ್ದೇಶದಿಂದ ವೆಬಿನಾರ್ ಸರಣಿಯಲ್ಲಿ ಎಲ್ಲಾ ವರ್ಗದ ಜನರಿಗೂ ಅವಕಾಶ ನೀಡಲಾಗಿದೆ ಎಂದರು.
ವಿಜಯಲಕ್ಷ್ಮಿ ಕಟೀಲು ಕಾರ್ಯಕ್ರಮ ನಿರೂಪಿಸಿದರು. ಸುರೇಶ್ ರಾವ್ ಅತ್ತೂರು ಸ್ವರಚಿತ ಪ್ರಾರ್ಥನೆ ಹಾಡಿದರು. ವಿಶ್ವವಿದ್ಯಾನಿಲಯ ಸಂಧ್ಯಾ ಕಾಲೇಜಿನ ಪ್ರಾಂಶುಪಾಲೆ ಡಾ. ಸುಭಾಷಿಣಿ ಶ್ರೀವತ್ಸ ಧನ್ಯವಾದ ಸಮರ್ಪಿಸಿದರು.
ಪೀಠದ ಕಷ್ಟ, ವಿಶ್ವ ತುಳು ಸಮ್ಮೇಳನದ ಸುಖ !
ವಿದ್ವಾಂಸ ಡಾ. ಬಿ ಎ ವಿವೇಕ ರೈ, ಮಂಗಳೂರು ವಿವಿಯಲ್ಲಿ ಸುಮಾರು 30 ವರ್ಷಗಳ ಹಿಂದೆ ತುಳು ಪೀಠ ಸ್ಥಾಪಿಸಲು ಪಟ್ಟ ಶ್ರಮ, ಆಗ ನೆರವಿಗೆ ಬಂದ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಅಂದಿನ ಸರಕಾರವನ್ನು ನೆನಪಿಸಿಕೊಂಡರು. ಇದೇ ವೇಳೆ ಅವರು 2009 ರ ಡಿಸೆಂಬರ್ 9- 13 ರವರೆಗೆ ಧರ್ಮಸ್ಥಳದಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಸಂದರ್ಭವನ್ನು ಸಂತಸದಿಂದ ನೆನಪಿಸಿಕೊಂಡರು. “ವಿದೇಶಗಳಲ್ಲಿ ಹೊಸಬರಿಂದ ತುಳು ಭಾಷೆ, ಸಂಸ್ಕೃತಿ ರಕ್ಷಣೆಗಾಗಿ ನಡೆಯುತ್ತಿರುವ ಕೆಲಸಗಳ ದಾಖಲೀಕರಣ ಆಗಬೇಕು. ತುಳು ಪುಸ್ತಕಗಳ ಡಿಜಿಟಲೀಕರಣದಿಂದ ಸಾಹಿತ್ಯ ಇನ್ನಷ್ಟು ಜನರಿಗೆ ತಲುಪಲು ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka