ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01 - Mahanayaka
3:30 AM Wednesday 11 - December 2024

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

kanada katada
11/10/2021

  • ಸತೀಶ್ ಕಕ್ಕೆಪದವು

ಭಾರತದ ಭವ್ಯ ಇತಿಹಾಸದಲ್ಲಿ ಕರ್ನಾಟಕಕ್ಕೆ ಅದರಲ್ಲೂ ವಿಶೇಷವಾಗಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ/ತುಳುನಾಡು ವಿಭಿನ್ನವಾದ ಇತಿಹಾಸವನ್ನು ಹೊಂದಿದೆ. ಬಹುತ್ವ ಬಯಸುವ ಬಹುಜನರು ಕೃಷಿ ಆಧಾರಿತ ಬದುಕು ಕಟ್ಟಿಕೊಂಡ ಸಂಸ್ಕೃತಿ ಕಾಣಸಿಗುತ್ತವೆ. ಜೊತೆ ಜೊತೆಗೆ ಶ್ರೇಣೀಕೃತ ಸಾಮಾಜಿಕ ವ್ಯವಸ್ಥೆಯಲ್ಲಿ ಸಾವಿರಾರು ವರ್ಷಗಳಿಂದ ಪ್ರಟಿಭಟಿಸಿದ ಕೂಗು ಸಂದಿ ಪಾಡ್ದನಗಳಲ್ಲಿ ಪ್ರತಿಧ್ವನಿಸುತ್ತದೆ. ಕಣ್ಣಿಗೆ ಗೋಚರಿಸದೆ ಅನುಭವಿಸುತ್ತಿರುವ ಜಾತೀಯತೆ, ಅಸಮಾನತೆ, ಅಸ್ಪೃಶ್ಯತೆ, ಊಳಿಗಮಾನ್ಯ ವ್ಯವಸ್ಥೆಗಳ ವಿರುದ್ಧ ತಿರುಗಿ ನಿಂತ ಅಪ್ರತಿಮ ಸಾಧಕರ ಚರಿತ್ರೆ ತುಳುನೆಲದಲ್ಲಿದೆ.

“ಸತ್ಯವನ್ನು ಸತ್ಯವೆಂದೇ ಹೇಳು, ಸುಳ್ಳನ್ನು ಸುಳ್ಳೆಂದೇ ಹೇಳು ” ಎಂಬುದಾಗಿ ಜಗತ್ತಿಗೆ ಸಾರಿದ ಭಗವಾನ್ ಬುದ್ಧರ ಮಾನವತೆ,ಅನುಕಂಪದ ನೀತಿಯನ್ನು ಮೈಗೂಡಿಸಿಕೊಂಡು ಇತಿಹಾಸ ನಿರ್ಮಿಸಿದ ತುಳುನಾಡ ಸತ್ಯಗಳ ಸಾಧನೆ ಮತ್ತು ಎದುರಿಸಿದ ಸವಾಲುಗಳು ತುಳುನೆಲದ ಬಗೆ ಬಗೆಯ ಪಾಡ್ದನ, ಸಂದಿ, ಕಬಿತೆ, ಎದುರು ಕತೆಗಳೆಂಬ ಒಗಟುಗಳಾಗಿ ತುಳುನಾಡಿನ ಇತಿಹಾಸ ಮತ್ತು ಸಂಸ್ಕೃತಿಗೆ ಸಾಕ್ಷಿಯಾಗಿವೆ. ತುಳುನಾಡ ಸರ್ವ ಸತ್ಯ ದೈವಗಳು ಒಂದು ಕಾಲ ಘಟ್ಟದಲ್ಲಿ ಮಾನವ ರೂಪದಲ್ಲಿಯೇ ತಾಯಿ ಗರ್ಭದಿಂದಲೇ ಜನಿಸಿ ಮಾನವಕುಲಕ್ಕಾಗುವ ಅನ್ಯಾಯ, ಮೋಸ, ವಂಚನೆ, ಅಪಮಾನ, ಅವಮಾನಗಳ ಎದುರು ಧ್ವನಿಯೆತ್ತಿ ಹೋರಾಟ ನಡೆಸಿ ಮಾಯ ಮಯಕದ ಕಥನದಲ್ಲಿ ಬಲಿಯಾಗಿ ಮಣ್ಣಮರೆಯಲ್ಲಿ ಮಣ್ಣಾಗಿ ಸತ್ಯಗಳೆನಿಸಿರುವುದೇ ಇಂದಿನ ಇತಿಹಾಸ.

ತುಳುನಾಡಿನ ಕಲ್ಲುಟಿ– ಕಲ್ಕುಡ, ಕೋಟಿ– ಚೆನ್ನಯ, ಕಲಲ– ಮುದ್ದ, ಪೆರ್ನೆ– ದೆಯ್ಯು, ಕಾಂತಬಾರೆ– ಬುದಬಾರೆ, ಕಾನದ–ಕಟದ, ಕೊರಗ ತನಿಯ, ಕೋಟೆದ ಬಬ್ಬು, ಬೆಲಟ ಅಂಗರ…… ಹೀಗೆ ಸತ್ಯ ದೈವಗಳ ಪಟ್ಟಿ ದೀರ್ಘವಾಗಿ ಕಾಣಬಹುದಾಗಿದೆ. ಒಂದೊಂದು ಸತ್ಯ ದೈವಗಳ ಹಿಂದೆ ಪುಟಗಟ್ಟಲೆ ಪಾಡ್ದನಗಳ ಸರಮಾಲೆಗಳೇ ಇವೆ. ಹಾಗಾಗಿ ತುಳುನಾಡ ಇತಿಹಾಸ ಹಾಗು ಸಂಸ್ಕೃತಿಯು ಮಣ್ಣಲ್ಲಿ ಮಣ್ಣಾಗಿ ಮರೆಯಾಗುತ್ತಿರುವ ಕಾಲದಲ್ಲಿ ಹಿರಿಯರಿಂದ, ಅನುಭವಿಗಳಿಂದ ಅರಿತು, ಸಂಗ್ರಹಿಸಿ, ಐತಿಹಾಸಿಕ ಹಿನ್ನೆಲೆ, ಸಾಮಾಜಿಕ ಸ್ಥಿತಿಗತಿ, ಮಾನವ ಶಾಸ್ತ್ರೀಯ ಅದ್ಯಯನ, ವೈಜ್ಞಾನಿಕ ವೈಚಾರಿಕ ಚಿಂತನೆಗಳ ಮೂಲಕ ಅದ್ಯಯನ ನಡೆಸಿದಾಗ ಮಾತ್ರ ಈ ನೆಲದ ನೈಜ ಇತಿಹಾಸ ಮುಂದಿನ ಜನಾಂಗಕ್ಕೆ ದಕ್ಕಬಹುದಾಗಿದೆ. ಡಾಕ್ಟರ್ ಬಾಬಾ ಸಾಹೇಬ್ ಭೀಮ್ ರಾವ್ ಅಂಬೇಡ್ಕರ್ ರವರ ಮಾತು ” ಇತಿಹಾಸ ಅರಿಯದವರು ಇತಿಹಾಸ ಸೃಷ್ಟಿಸಲಾರರು ” ಎಂಬಂತೆ ಸ್ವಾಭಿಮಾನ, ಆತ್ಮ ಗೌರವ, ಅಸ್ಮಿತೆಗಳಿಗಾಗಿ ಸತ್ಯಗಳ/ ದೈವಗಳ ಚಾರಿತ್ರಿಕ ಇತಿಹಾಸ ಪ್ರಜ್ಞೆ ಬೆಳೆಸಿಕೊಳ್ಳುವ ಅನಿವಾರ್ಯತೆ ಸಾಗರದಷ್ಟಿದೆ. ಈ ಹಿನ್ನೆಲೆಯಿಂದ ಕಂಡಾಗ ತುಳುನಾಡಿನ ಅವಳಿ ವೀರರ ಸಾಲಿನಲ್ಲಿ ಅಪ್ರತಿಮ ಸಾಧಕರೆನಿಸಿ ಇತಿಹಾಸ ನಿರ್ಮಿಸಿದ ಅವಳಿ ವೀರರು – ಕಾನದ ಕಟದರ ಜನನ ಮರಣಗಳ ನಡುವಣ ಸವಾಲು ಸಾಧನೆಗಳ ಸಿಂಹಾವಲೋಕನದ ಸುವರ್ಣ ಕಾಲ ನಮ್ಮ ಮುಂದಿದೆ.

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ ಕಟದರ ಜೀವನ ಗಾಥೆ ಕುರಿತು ಮಂಗಳೂರಿನ ಖ್ಯಾತ ಲೇಖಕರಾದ ಸತೀಶ್ ಕಕ್ಕೆಪದವು ಅವರು ಪ್ರತೀ ಸೋಮವಾರ ಬರೆಯಲಿದ್ದಾರೆ. ಮುಂದಿನ ಸಂಚಿಕೆಯಿಂದ ಕಾನದ ಕಟದರ ಜೀವನ ಮತ್ತು ಸಾಮಾಜಿಕ ಹೋರಾಟಗಳ ಕುತೂಹಲಕಾರಿ ಹಾಗೂ ಸಮಾಜ ಪರಿವರ್ತನೆಗೆ ಸಹಕಾರಿಯಾಗುವ ವಿಚಾರಗಳನ್ನು ಓದುಗರು ನಿರೀಕ್ಷಿಸುತ್ತಿರಿ..

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಇತ್ತೀಚಿನ ಸುದ್ದಿ