ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13 - Mahanayaka
2:42 AM Thursday 19 - September 2024

ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13

kanada katada
08/01/2022

  • ಸತೀಶ್ ಕಕ್ಕೆಪದವು

ಬೆಳ್ಳಿ ಮುಟ್ಟಲೆಯನ್ನು ತಲೆಗೇರಿಸಿ ಬಂಗಾಡಿ ಇಳಿದ ಕಾನದ ಕಟದರಿಗೆ “ಉಳ್ಳವರ ಬಾಗಿಲಲ್ಲಿ ಚಾಕಿರಿಮಾಡಿ, ಊಳಿಗಮಾಡಿ, ಬೇಡುವವರಾಗುವುದು ಸಾಕು, ನಾವೂ ದುಡಿಯಬೇಕು, ಹೊಲ/ಗದ್ದೆಗಳನ್ನು ನಿರ್ಮಿಸಿ ಹೊಲದೊಡೆಯರಾಗಬೇಕು,ಆರ್ಥಿಕವಾಗಿ ಸಬಲರಾಗಬೇಕು, ಬೇಡುವ ಸಮಾಜವನ್ನು ನೀಡುವ ಸಮಾಜವನ್ನಾಗಿ ಪರಿವರ್ತಿಸಬೇಕು” ಇಂತಹ ಸಾವಿರಾರು ಆಲೋಚನೆಗಳು ಒಮ್ಮಿಂದೊಮ್ಮೆಗೆ ಸಾಗಿದುವು.

ಹೌದು, ಇದೇ ಸರಿಯಾದ ಸಂದರ್ಭ ಬಗೆದ ಅವಳಿ ವೀರರಾದ ಕಾನದ ಕಟದರು ಕೋಡಿ ಕೊಡಂಗೆ ಬೋರು ಗುಡ್ಡೆಯನ್ನು ಇರುಳು- ಹಗಲಾಗುವುದರ ಮುನ್ನವೇ

ಮೂರು ಮುಡಿ ಭತ್ತ ಬೆಳೆಯುವಷ್ಟು ಜಾಗವನ್ನು ಅಗೆದು ಗದ್ದೆಗಳನ್ನು ನಿರ್ಮಾಣ ಮಾಡುತ್ತಾರೆ. ಗದ್ದೆಯ ಸುತ್ತಲೂ ಬೇಲಿ, ಗದ್ದೆಯ ಮೂಲೆಯಲ್ಲಿ ಕೆರೆ ಮಾಡುತ್ತಾರೆ. ಎತ್ತರದ ಬೆಟ್ಟದಿಂದ ಕಾಲುವೆಯೊಂದು ಹರಿಯುವುದರಿಂದ ನೀರನ್ನು ಗದ್ದೆಗೆ ಹರಿಸಲು ತೋಡು ನಿರ್ಮಿಸುತ್ತಾರೆ. ಕಾಲುವೆಯ ಮೇಲಂಚಿನಲ್ಲಿ


Provided by

ಗುಡಿಸಲೊಂದನ್ನು ನಿರ್ಮಿಸುತ್ತಾರೆ. ಮನೆಯ ಪಕ್ಕದಲ್ಲಿ ನೆಟ್ಟಿರುವ ವೀಳ್ಯದೆಲೆ ದಂಡು ಇಂದಿಗೂ “ಕಲಸೆ” ರೂಪದಲ್ಲಿ ಕಾಣಸಿಗುವುದು ಕಾನದ ಕಟದರ ಸಾಧನೆಯ ಅಜರಾಮರತೆಗೆ ಸಾಕ್ಷಿಯಾಗಿದೆ.

ಗದ್ದೆಗಳನ್ನು ನಿರ್ಮಿಸಿ ಸಂತೃಪ್ತರಾಗಿರುವ ಕಾನದ ಕಟದರು ಗದ್ದೆಗಳನ್ನು ಉಳುಮೆ ಮಾಡುವ ಯೋಚನೆ ಮಾಡುತ್ತಾರೆ.

ಅಕ್ಕ ಪಕ್ಕದ ಇತರ ಜಾತಿಯವರಲ್ಲಿ ಉಳುವೆತ್ತುಗಳನ್ನು ಬಯಸಿದಾಗ ಜಾತೀಯತೆಯ, ಅಸೂಯೆಯ ಕಾರಣದಿಂದಾಗಿ ಯಾರೂ ಸಮ್ಮತಿಸುವುದಿಲ್ಲ. ಇದು ಕಾನದ ಕಟದರಿಗೆ ಸ್ಪೂರ್ತಿದಾಯಕವಾಗಿ ಪರಿಣಮಿಸುತ್ತದೆ. ಇಷ್ಟು ಮಾತ್ರವಲ್ಲದೆ ತಮ್ಮ ಬದುಕಿನುದ್ದಕ್ಕೂ ಸಾಧನೆಯ

ಮೆಟ್ಟಿಲುಗಳನ್ನೇ ಹತ್ತಿದ ಕಾನದ ಕಟದರು ತುಳುನಾಡಿನ ಜನಮಾನಸದಲ್ಲಿ ಬೇರೂರಿರುವ ಮೂಢನಂಬಿಕೆಗೆ ಪ್ರತಿಯಾಗಿ ಯೋಜನೆಯನ್ನು ರೂಪಿಸಿದರು. “ಮುಂಡೊಡು ಕೊಡ್ಯೆ, ನಾಲ್ ಕಾರ್ ಮಂಗಲೆ, ಬೀಲೊಡು ಬುಲಯೆ” ಲಕ್ಷಣಗಳುಳ್ಳ ಕಾರಿ ಕಬಿಲೆ ಎತ್ತುಗಳ ಜೋಡಿಯನ್ನು ಮಾಡಿದವರು  ಯಾರೂ ಇಲ್ಲ , ಮಾಡುವುದೂ ಇಲ್ಲ ಎಂಬ ನಂಬಿಕೆಯನ್ನು ಮುರಿಯಬೇಕು ಎಂಬುದಾಗಿ ಯೋಚಿಸುತ್ತಾರೆ. ಇತಿಹಾಸದ ಪುಟಗಳಲ್ಲಿ ಕಾನದ ಕಟದರ ಸಾಧನೆಯ ಬರೆಹಗಳನ್ನು ಬರೆಯುತ್ತಾರೆ.

“ಬಾರೀ ಎರ್ಲೆನ ಸಂತೆ ಸುಬ್ರಹ್ಮಣ್ಯೊದ ಜಾತ್ರೆ, ಸೇರಿಜನ ಗದ್ದಲೊದ ರಂಪು…….” ಕವಿ ಬರಹ ಹೊಗಳಿದರೆ, “ಕುಲ್ಕುಂದದ ಜಾತ್ರೆ ಉಂದು ಒರ್ಸೊಗೊರ ಜಾತ್ರೆ, ತಿಂಗೊಲೊಂಜಿ ಪಗೆಲ್ ರಾತ್ರೆ , ಜಾನುವಾರು ಜಾತ್ರೆ…..” ಪದ ರಂಗಿತಗಳು ಕುಲ್ಕುಂದದ ಜಾತ್ರೆಯ ಸೊಬಗನ್ನು ಬನ್ನಿಸಿವೆ.

ತುಳು ನಾಡಿನಾದ್ಯಂತ ಬಹುತೇಕ ಕೃಷಿ ಕುಟುಂಬ ಇದ್ದುದರಿಂದ ಹಳ್ಳಿ ಹಳ್ಳಿಗಳಿಂದ ಜಾನುವಾರು ಜಾತ್ರೆಯಲ್ಲಿ ಪಾಲ್ಗೊಂಡು ತಮಗೆ ಬೇಕೆನಿಸುವ ಜಾನುವಾರುಗಳನ್ನು ಖರೀದಿಸುವುದನ್ನು ಕಾಣಬಹುದಾಗಿತ್ತು. ಇದರ ಮೇಲ್ವಿಚಾರಕ/ ಒಡೆಯನನ್ನು “ಎರುಕನಡ”

ಇದನ್ನೂ ಓದಿ:  “ಜೈನಕಾಶಿ ಮೂಡುಬಿದಿರೆಯ ಇಟ್ಟೆಕೊಪ್ಪ ಪೆರಿಯ ಮಂಜವೇ ಕಾನದ ಕಟದರ ಆದಿಮೂಲ”

ಎಂಬುದಾಗಿ ಗುರುತಿಸಿದ್ದರು. ಇನ್ನೂ ಕೆಲವರು “ಎರುಬೇರಕನಡೆರ್” ಎಂಬುದಾಗಿಯೂ ಕರೆಯುವ ರೂಢಿ ಇತ್ತು. ಒಂದು ತಿಂಗಳ ಜಾನುವಾರು ಜಾತ್ರೆಯು ಮುಗಿದು ಪೈರ್ ಮಂದೆಯ ಸಹಿತ ಎರುಬೇರಕನಡ/ ಎರುಕನಡ ಸೋದರರು ಊರೂರು ಅಲೆದಾಡಿ ಜಾನುವಾರು ವ್ಯಾಪಾರ ಮಾಡುತ್ತಿದ್ದರು. ಗುತ್ತು ಬರ್ಕೆ ಮಾಗನೆ ಸೀಮೆಯಡಿಯಲ್ಲಿ ಬದುಕುತ್ತಿದ್ದ ಧನಿಕರು/ ಹೊಲದ ಒಡೆಯರು ತಮಗೆ ಆಗಬಹುದು ಎನಿಸುವ ಎತ್ತು, ಕೋಣ, ಎಮ್ಮೆ ಇತ್ಯಾದಿ ಜಾನುವಾರುಗಳನ್ನು ಖರೀದಿಸುವುದು, ಅದಲು ಬದಲು ಮಾಡಿಕೊಳ್ಳುವುದು, ಕೊಂಡುಕೊಳ್ಳುವನ್ವಯ ವ್ಯಾಪಾರ ವಹಿವಾಟು ಮಾಡಿಕೊಳ್ಳುತ್ತಿದ್ದರು. ಊರಿಂದ ಊರಿಗೆ ಜಾನುವಾರು ಟೆಂಟ್/ ಡೇರೆ ಬದಲಾಯಿಸುತ್ತ ವ್ಯಾಪಾರ ನಡೆಸುತ್ತಿದ್ದರು. ಇವತ್ತು ಅವೆಲ್ಲವೂ ಮರೆಯಾಗಿದೆ. ಕಾನದ ಕಟದರು ಕಾರಿ ಕಬಿಲನ ಜೋಡಿ ಮಾಡುವ ಉದ್ದೇಶದಿಂದ ಕುಲ್ಕುಂದದತ್ತ ಸಾಗಿ ಬರುತ್ತಾರೆ. ಬಂದು ನೋಡುತ್ತಿದ್ದಂತೆ ಜಾನುವಾರುಗಳಿಂದ, ಖರೀದಿಸಲು ಬಂದು ಸಂಭ್ರಮಿಸುತ್ತಿದ್ದ ಜನರಿಂದ ಕುಲ್ಕುಂದ ಪಡ್ಪು ತುಂಬಿ ತುಳುಕುತ್ತಿತ್ತು. ಕೊಡ್ಯೆ, ಕೊಕ್ಕೆ ,ಮೈರೆ,ಮೋಡೆ, ಬೊಳ್ಳಿ , ಗೆಂದೆ, ಕಾರಿ ಕಬಿಲೆ ಮೊದಲಾದ ಜಾನುವಾರುಗಳ ನಡುವೆ ಎರುಕನಡನು ಎತ್ತರದ ಸ್ಥಳವೊಂದನ್ನು ಅಲಂಕರಿಸಿ ಮೀಸೆ ನೇವರಿಸಿಕೊಂಡು ವ್ಯಾಪಾರ ವ್ಯವಹಾರ ನಡೆಸುತ್ತಿದ್ದ ಜಾತ್ರೆಯ ಪಡ್ಪು ಸುತ್ತ ತಿರುಗುತ್ತ , ಅನೇಕ ಜಾನುವಾರುಗಳನ್ನು ಮುಟ್ಟಿ ತಟ್ಟಿ , ಸ್ಪರ್ಶಿಸಿ ಅವುಗಳ ಸೌಂದರ್ಯದ ಸೊಬಗನ್ನು ಸವಿಯುತ್ತ ಕೊನೆಗೊಂದು ಕಡೆಯಿಂದ ಹಣೆಯಲ್ಲಿ ನಾಮ, ನಾಲ್ಕು ಕಾಲುಗಳ ತುದಿಯಲ್ಲಿ ಬಿಳಿ ಬಣ್ಣದ ಮಚ್ಚೆಗಳು, ಬಾಲದ ತುದಿಯಲ್ಲಿನ ಗೊಂಚಲು ಬಿಳಿ ಬಣ್ಣದಿಂದ ಕೂಡಿರುವುದನ್ನು ಗಮನಿಸಿ ಇದುವೇ “ಕಾರಿ” ಎಂಬುದನ್ನು ಕಾನದನು ನಿರ್ಧರಿಸುತ್ತಾನೆ. ಇನ್ನೊಂದೆಡೆ ಇದೇ ಲಕ್ಷಣಗಳುಳ್ಳ ಎತ್ತನ್ನು ಕಟದನೂ ಆಯ್ಕೆ ಮಾಡುತ್ತಾನೆ. ತುಂಬಿ ತುಳುಕುವ ಜಾನುವಾರು ಜಾತ್ರೆಯ ನಡುವೆ “ಕಾರಿ ಕಬಿಲೆ” ಜೋಡಿ ಮಾಡಿ ಎರುಕನಡನ ಎದುರಿಗೆ ಬರಮಾಡಿಕೊಂಡು ಮುಂದೆ ನಿಲ್ಲುತ್ತಾರೆ.

ಧನಿಕರ ಮುಂಡಾಸು ಹೆಗಲಿನ ಸಾಲುಗಳು, ದಗದಗಿಸುವ ನಗು, ದರ್ಪದ ಮಾತುಗಳು, ಅಹಂನ ಪ್ರತಿರೂಪಗಳನ್ನೇ ಜಾತ್ರೆಯುದ್ದಕ್ಕೂ ಕಾಣುತ್ತಿದ್ದ ಎರುಕನಡನಿಗೆ ದಷ್ಟ ಪುಷ್ಟವಾಗಿ ಬೆಳೆದು ನಿಂತ ಕಾನದ ಕಟದರು ತಲೆಗೇರಿಸಿರುವ “ಮುಟ್ಟಲೆ”ಯು ಶ್ರಮಿಕ ವರ್ಗದವರೆಂಬುದನ್ನು, ಕೆಳ ಸ್ಥರದ ವ್ಯಕ್ತಿಗಳೆಂಬುದನ್ನು ಸ್ಪಷ್ಟಪಡಿಸುತ್ತಿತ್ತು. ಆದರೂ ಎದುರು ಬದುರಾದ ಎರುಕನಡ – ಕಾನದ ಕಟದರು ಕಾರಿ ಕಬಿಲ ಜೋಡಿ ಮಾಡುವ ಹಂಬಲವನ್ನು ವ್ಯಕ್ತಪಡಿಸುತ್ತಾರೆ.

ಒಮ್ಮೆಗೆ ಬಿದ್ದು ಬಿದ್ದು ನಕ್ಕ ಎರುಕನಡ “ಇದುವರೆಗೆ ಕಾರಿ ಕಬಿಲ ಜೋಡಿ ಮಾಡಿದವರಿಲ್ಲ, ಮಾಡುವುದೂ ಸಲ್ಲದು, ಅಂತಹುದರಲ್ಲಿ ಗತಿಯಿಲ್ಲದ, ಮತಿಯಿಲ್ಲದ, ಎಲ್ಲೋ ಚಾಕಿರಿ ಮಾಡುವ ಜನರು ಬೇರ/ ವ್ಯವಹಾರ ಮಾಡಲು ಬಂದಿರುವಿರೆನೋ ?, ಅಪಹಾಸ್ಯ ! ಅಷ್ಟೇ ಅಲ್ಲದೆ ಅದಕ್ಕಾಗುವ ಬೆಲೆಯನ್ನು ಕೊಡಲು ಹಣವಾದರೂ ನಿಮ್ಮಲ್ಲಿ ಇದೆಯೇನೋ?, ಬಿಕ್ಷುಕ ಅಲೆಮಾರಿಗಳೇ” ಎಂಬುದಾಗಿ ವ್ಯಂಗ್ಯವಾಗಿ ಕಾನದ ಕಟದರನ್ನು ಅಪಮಾನಿಸುತ್ತಾನೆ. ಕಟದನು ಸಿಟ್ಟಿನಿಂದ ಸಿಡಿಮಿಡಿಗೊಂಡರೂ ಕಾನದನ ಮೆತ್ತನೆಯ ಸ್ಪರ್ಶ ಬೆನ್ನಮೇಲೆ ತಾಗಿದಾಗ ಅವುಡು ಕಚ್ಚಿ ಸಿಟ್ಟನ್ನು ನುಂಗಿ ಸುಮ್ಮನಾಗುತ್ತಾನೆ. ಮಾತಿನ ವರಸೆಯ ನಡುವೆ ಮುಟ್ಟಲೆ ಅಂಚಿನಿಂದ ಕಾರಿ ಕಬಿಲನ ಮೌಲ್ಯವನ್ನು ಎರುಕನಡನ ಮುಖಕ್ಕೆ ಎಸೆದು ಕಾರಿ ಕಬಿಲ ಜೋಡಿಯನ್ನು ಕಟ್ಟುತ್ತಾರೆ. ಜೊತೆಗೆ “ತಿಂಗೊಲಿಡಿಕದ ಸಂತೆ ತಿಂಗೊಲರ್ದನೆ ಮುನಿದ್, ಕುಲ್ಕುಂದ ಜತ್ತ್ ದ್  ದಡ್ಡಾಲ ಪಲ್ಕೆಗ್ ಬತ್ತೆತ್ತಿ ಪೊರ್ತು”  ಎಂಬುದಾಗ ನುಡಿಗಟ್ಟು ಬಿಂಬಿಸುವಂತೆ, ಒಂದು ತಿಂಗಳವರೆಗೆ ನಡೆಯುತ್ತಿದ್ದ ಜಾನುವಾರು ಜಾತ್ರೆಯು ಇನ್ನು ಮುಂದಕ್ಕೆ ತಿಂಗಳರ್ಧವೆ/ ಹದಿನೈದು ದಿವಸಗಳು ಮಾತ್ರ ನಡೆಯಲೆಂದು ಮುನಿಯುತ್ತಾರೆ. ಇಂದಿಗೂ ಜನ ಆಡಿಕೊಳ್ಳುವುದನ್ನು ಆಲಿಸಬಹುದಾಗಿದೆ.

ಕಾನದ ಕಟದರ ವಾಕ್ ಕೇಳಿಕೊಂಡ ಎರುಕನಡ ಕಾಲಿಗೆ ಬಿದ್ದು ತಪ್ಪಾಯಿತೆಂದು ಅಂಗಲಾಚುತ್ತಾನೆ. ವೀರ ಪುರುಷರನ್ನು ಅಪಮಾನಿಸಿದ, ಅವಮಾನಿಸಿದ ತಪ್ಪಿನ ಅರಿವು ಅವನಿಗಾಗುತ್ತದೆ. ಕಾರಿ ಕಬಿಲೆ ಜೋಡಿಯೊಂದಿಗೆ ಕಾನದ ಕಟದರು ಕಾಡ ದಾರಿಯಲ್ಲಿತಮ್ಮ ಧ್ಯೇಯ ಉದ್ಧೇಶದ ಯಶಸ್ವಿಗಾಗಿ ಸಾಗುತ್ತಾರೆ.

ಜಾತ್ರೆ ಕಳೆದರೂ ಜಾತ್ರೆಯಲ್ಲಿ ನಡೆದ ಸನ್ನಿವೇಶಗಳು ಮತ್ತೆ ಮತ್ತೆ ಮರುಕಳಿಸಿ ಕಾಡುತ್ತಿತ್ತು. ಮುಂದಕ್ಕೆ ಸಾಂಕ್ರಾಮಿಕ ರೋಗವೊಂದು ಜಾನುವಾರುಗಳಿಗೆ ಸೋಂಕಿ ಜಾನುವಾರುಗಳೇ ನಾಶದಂಚಿಗೆ ಸಿಲುಕಿತು. ತುಳುನಾಡಿನಾದ್ಯಂತ ಪೈರ್ ಮಂದೆಯ ತಿರುಗಾಟ ನಡೆದಾಗ ವ್ಯಾಪಾರ ವಹಿವಾಟು ನಷ್ಟ ತಂದೊಡ್ಡಿತು. ಹಾಗೆ ಸಾಗಿ ಬರುತ್ತಿದ್ದ ಪೈರ್ ತಿರುಗಾಟ ಬಂಗಾಡಿಯತ್ತ ಬಂದಾಗ ಕಾನದ ಕಟದರ ಸಾಧನೆ, ವೈಚಾರಿಕ ಪ್ರಜ್ಣೆ, ವೈಜ್ಞಾನಿಕ ಚಿಂತನೆ, ಸ್ವಾಭಿಮಾನದ ಸ್ವಾವಲಂಬನೆಯ ಹೆಜ್ಜೆಗಳನ್ನು ಕೊಂಡಾಡುವ ಪರಿಯನ್ನು ಆಲಿಸಿ ಒಳಮನಸ್ಸಿನಲ್ಲಿ ನಾಚಿ ಕೊಳ್ಳುತ್ತಾನೆ. ತಾನು ಮಾಡಿದ ತಪ್ಪಿನ ಅರಿವಾಗಿ ದುಃಖಿಸುತ್ತಾನೆ. ತಾನು ಮಾಡಿದ ಅವಮಾನ, ಅಪಮಾನದ ಬಗೆಯನ್ನು ಮರುಕಲಿಸಿ ಕೊರಗುತ್ತಾನೆ. ಹಗಲು ಇರುಳು ನಿದ್ರಿಸದೆ ವ್ಯಥೆ ಪಡುತ್ತಾನೆ. ಅವಳಿ ವೀರರ ಮುನಿಸು ನುಡಿಗಳು ಮತ್ತೆ ಮತ್ತೆ ಕಾಡಿ ಕಾಡಿ ಸಾವನ್ನಪ್ಪುತ್ತಾನೆ. ಈ ಘಟನಾವಳಿಗಳ ಸುತ್ತ ಬಂಗಾಡಿಯಲ್ಲಿ ಇಂದಿಗೂ ಜನಪದೀಯ ಕಥೆಗಳಿದ್ದು,  “ಕನಡಕಲ್ಲು” ಇದೆ ಎಂಬುದನ್ನು ಜನ ಆಡಿಕೊಳ್ಳುತ್ತಾರೆ.

ಕಾನದ ಕಟದರು ಯಾರೂ ಮಾಡಿರದ, ಯಾರೂ ಮಾಡಲಾಗದ ಸಾಧನೆಯಾದ “ಕಾರಿ ಕಬಿಲೆ” ಜೋಡಿ ಮಾಡಿ, ಇತಿಹಾಸ ಪುಟದಲ್ಲಿ ಅಜರಾಮರರಾಗಿದ್ದಾರೆ. ಯುವ ಜನತೆ ಕಾನದ ಕಟದರಂತೆ ಮೂಢನಂಬಿಕೆಯನ್ನು ದಿಕ್ಕರಿಸಿ, ವೈಜ್ಞಾನಿಕ ಚಿಂತನೆಯತ್ತ ಸಾಗ ಬೇಕಾಗಿದೆ. ಕಾನದ ಕಟದರ ಆದರ್ಶವನ್ನು ಪಾಲಿಸ ಬೇಕಾಗಿದೆ.

ಮುಂದಿನ ಸಂಚಿಕೆ: ಇಕ್ಕೇರಿಯತ್ತ ಕಾನದ- ಕಟದರ ಪಯಣ/ ತುಳುನಾಡಿಗೆ ಅತಿಕಾರ (ಅತ್ಯರ) ಬಿದೆಯ ಪರಿಚಯ.

ಹಿಂದಿನ ಸಂಚಿಕೆ:

ಅಪ್ಪೆ ಸಾಲೊದ ಪನ್ನಿ/ ಬಂಗಾಡಿಗೆ ಪ್ರಯಾಣ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 12

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ