ಸತ್ಯದಪ್ಪೆ ಬೊಲ್ಲೆಯ ಬಯಕೆ/ ಸೀಮಂತ ಕಾರ್ಯಕ್ರಮ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 09 - Mahanayaka
4:03 AM Wednesday 11 - December 2024

ಸತ್ಯದಪ್ಪೆ ಬೊಲ್ಲೆಯ ಬಯಕೆ/ ಸೀಮಂತ ಕಾರ್ಯಕ್ರಮ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 09

kanada katada
07/12/2021

  • ಸತೀಶ್ ಕಕ್ಕೆಪದವು

ಸಾಂಸಾರಿಕ ಜೀವನಕ್ಕೆ ಕಾಲಿರಿಸಿದ ಸದ್ಗುಣಿ ಬೊಲ್ಲೆಯು ಬಂಗಾಡಿಯ ಆಸುಪಾಸಿನಲ್ಲಿ ಹೆಸರುವಾಸಿಯಾಗಿ ಮನೆಮಾತಾಗುತ್ತಾಳೆ. ನಯ ವಿನಯ ವಿಧೇಯತೆಗಳಿಂದ ಎಲ್ಲರಿಗೂ ಪ್ರೀತಿ ಪಾತ್ರಳಾಗಿ ಬದುಕುತ್ತಿರುತ್ತಾಳೆ. ಕೆಲವು ದಿನಗಳು ಉರುಳಲು ಸಜ್ಜನನಾದ ಹಂದ್ರ ಹಾಗು ಬೊಲ್ಲೆಯ ಪ್ರೀತಿಯ ದ್ಯೋತಕವಾಗಿ ಬೊಲ್ಲೆಯು ಗರ್ಭಧಾರಿಣಿಯಾಗುತ್ತಾಳೆ. ಈಂದೊಟ್ಟುವಿನ ಪರಿಸರ ಸಂಭ್ರಮದಿಂದ ನಲಿಯುತ್ತದೆ. ಜೊತೆಗೆ ಗರ್ಭಿಣಿ ಬೊಲ್ಲೆಯನ್ನು ಆಸುಪಾಸಿನ ಹಿರಿಯ ಕಿರಿಯರು ” ತಿರ್ತ್ ದೀಂಡ ಪಿಜಿನ್ ಕೊನೊವು, ಮಿತ್ತ್ ದೀಂಡ ಕಕ್ಕೆ ಕೊನೊವು ” ಎಂಬ ರೀತಿಯಲ್ಲಿ ಜಾಗರೂಕತೆಯಿಂದ ನೋಡಿಕೊಳ್ಳುತ್ತಾರೆ.

ಗರ್ಭಧಾರಿಣಿ ಬೊಲ್ಲೆಗೆ ತಿಂಗಳು ಐದು ತುಂಬುತ್ತಿದ್ದಂತೆ ಹಿರಿಯರೆಲ್ಲರೂ ಸೇರಿ “ಬಾಯಿದ ಕುರೆ ದೆಪ್ಪುನು” ಎಂಬ ಶಾಸ್ತ್ರವನ್ನು ಮಾಡುತ್ತಾರೆ. ತಿಂಗಳು ಏಳು ತುಂಬುತಿದ್ದಂತೆ ಬೊಲ್ಲೆಯ ಸೀಮಂತಕ್ಕೆ ದಿನ ಗೊತ್ತು ಪಡಿಸಿ ಸೀಮಂತ ಕಾರ್ಯಕ್ರಮಕ್ಕೆ ಊರು ಪರವೂರ  ಕುಲಬಾಂಧವರನ್ನು ಆಮಂತ್ರಿಸುತ್ತಾರೆ.

ತುಳುನಾಡಿನ  ತುಳು ಶಬ್ದ ಬಯಕೆ  ಎಂಬುದು ಕನ್ನಡದಲ್ಲಿ ಸೀಮಂತ ಎಂಬುದಾಗಿ ಕರೆಯಲ್ಪಡುವ ಹೆಣ್ಣಿನ ಬದುಕಿನಲ್ಲಿ ಮಹತ್ವದ ಘಟ್ಟವಾಗಿದೆ. ಮದುವೆಯಾದ ಹೆಣ್ಣು ಗರ್ಭಿಣಿಯಾಗಿ ಆಕೆಯ ಸುಪ್ತ ಆಲೋಚನೆಗಳು ಚಿಗುರಿಕೊಂಡು ನಿಸರ್ಗ ಸಹಜವಾದ ಆಸೆ ಆಕಾಂಕ್ಷೆಗಳು ಹುಟ್ಟಿಕೊಳ್ಳುತ್ತದೆ. ಸಾಮಾನ್ಯವಾಗಿ ಹಿರಿಯರು ಈ ಪ್ರಕ್ರಿಯೆಯ ಗುಣಧರ್ಮವನ್ನು ಅರಿತುಕೊಂಡು ಗರ್ಭಿಣಿ ಮಹಿಳೆಯ ಗರ್ಭಧಾರಣೆಗೆ ಏಳು ತಿಂಗಳು ತುಂಬುವ ಹೊತ್ತಿಗೆ ಆಕೆ ಬಯಸುವ ಬಯಕೆಯನ್ನು ಪೂರೈಸುವ ಸಲುವಾಗಿ ಸನ್ಮಾನ/ತಮ್ಮನದ ಔತಣಕೂಟ ಏರ್ಪಡಿಸುತ್ತಾರೆ. ಈ ಕೂಟವನ್ನು “ಬಯಕೆ” ಎಂದು ಕರೆಯುತ್ತಾರೆ. ಬಯಕೆ ಅನ್ನುವ ಪದವು ಆಸೆ ಪಡುವುದು, ಇಷ್ಟ ಪಡುವುದು, ಬಯಸುವುದು ಮೊದಲಾದ ಅರ್ಥವನ್ನು ಕೊಡುತ್ತದೆ. ಹಾಗಾಗಿ ಗರ್ಭಿಣಿಯ ಬಯಕೆಯನ್ನು ಈಡೇರಿಸಲು ಹಿರಿಯರು ಮುಂದಾಗುತ್ತಾರೆ.

ಬಯಕೆಯ ದಿವಸ ಮುಂಜಾನೆ ಹಿರಿಯರಾದ ಪಾಂಬಲಜ್ಜಿಗ ಪೂಂಬಲಕರಿಯರ ಸಮ್ಮುಖದಲ್ಲಿ “ಕೋರಿಗ್ ಅರಿ ಪಾಡುನ ” ಕ್ರಮವನ್ನು ಸಮಯೋಚಿತವಾಗಿ ಅನುಸರಿಸುತ್ತಾರೆ. ತರುವಾಯ ತವರೂರ ನೆಂಟರು ಈಂದೊಟ್ಟು ಸೇರುತ್ತಾರೆ. ಬೊಟ್ಯದ/ಗುರಿಕಾರರ ಮಾರ್ಗದರ್ಶನದಲ್ಲಿ ತಡ್ಪೆ/ ಗೆರಸೆಯೊಂದರಲ್ಲಿ ಗರ್ಭಿಣಿ ಬೊಲ್ಲೆಗೆ ಕೊಡಲು ಹೊಸ ಸೀರೆ, ಎಳೆಯ ಹಿಂಗಾರದ ಹಾಳೆ , ಮಲ್ಲಿಗೆ, ಅಬ್ಬಲಿಗೆ/ ಕನಕಂಭರ , ವೀಳ್ಯದೆಲೆ, ಅಡಿಕೆ ಮೊದಲಾದ ವಸ್ತುಗಳನ್ನು ಇರಿಸಿದ ಬಳಿಕ ಐವರು ಮುತ್ತೈದೆಯರು ಹೂ ಸೀರೆ ಕೊಡುವ ಪದ್ಧತಿಯಂತೆ ಸಿದ್ದರಾಗುತ್ತಾರೆ. ಮೊದಲಾಗಿ ಸ್ನಾನಾದಿ ಪರಿಶುದ್ಧತೆಯ ನೇಮಾವಳಿಗಳನ್ನು ಪೂರೈಸಿ, ಸತ್ಯ ದೈವಗಳ ನೆನವರಿಕೆ ಮಾಡಿಕೊಂಡು “ಕುಲಕೋಟಿಗ್ ಕುಲದೈವೊ ಬೆಮ್ಮೆರೆನ್ ವಂದನೆ ಮಲ್ತೊಂದು, ಇನಿ ಬಂಗಾಡಿ ಕಪ್ಪೊದ ಮಾನಿ ಹಂದ್ರೆ ಬೊಕ್ಕ ಬೊಲ್ಲೆನ ಮೋಕೆದ ಉರುವಾದ್, ಬೊಲ್ಲೆನ ಬಂಜಿಡ್ ಬಲಿರೊಂದುಪ್ಪುನ ಪೊರ್ತುಡು, ಅಳಿಯಕಟ್ಟ್ ದ ಕಟ್ಟ್ ಕಟ್ಲೆ ಪಿರ್ಕರ, ಏಲ್ ತಿಂಗೊಲ್ದ ಬಂಜಿನಾಲೆಗ್ ಕಂಡನ್ಯ ಇಲ್ಲ್ ಬಾಕಿಲ್ಡ್ ಬಯಕೆ ಪಾಡುನ ರೀತಿ ರಿವಾಜುಲು ರೂಡಿಡ್ ಬತ್ತಿನವ್ವು. ಬಯಕಿ ಪೊನ್ನಗ್ ಬಯಕೆ ಪಾಡ್ದ್ ಬಾಯಿದ ಕುರೆ ಕಲೆಪುನವ್ವು, ಬಯಕೆದ ಅರಿಕೆನ್ ಸಂದಯ ಮಲ್ಪುನವ್ವು ಜಾತಿಕೂಟೊದ ನೀತಿಕಟ್ಟ್. ಬಂಜಿನ ಪೊನ್ನ ಗ್ ಪೂ ಸೀರೆ ಕೊರ್ಪಿ ಈ ಗಳಿಗೆಡ್, ಎಚ್ಚಿ ಕಮ್ಮಿ, ಏರ್ ತಗ್ಗ್, ಮಬ್ಬು ಮಸ್ ಕ್ ಇತ್ತ್ ನಾಂಡ ಬುಡು ಪತ್ತ್ ದ್, ಆದಿ ಮೂಲೊಡೆ ನಂಬೊಂದು ಬತ್ತಿನ ಸತ್ಯೊಲು, ಕೊರಿ ಪೂ ಸೀರೆಡ್ , ದಿಂಜಿ ಬಂಜಿನಾಲ್ ಬೊಲ್ಲೆಗ್ ಬಾರ್ ದಾತ್ ಬಗ್ ತೆ, ನೂಲುದಾತ್ ನುಗುತೆ ಬರಂದಿಲೆಕ್ಕ ಕಾತೊಂದು, ಪೊರ್ಲುಡು ಪಾಡಿ ಬಯಕೆಡ್ ತೊಡು ಕಲೆದ್, ಪೆದ್ದ್ ಲಕ್ಕ್ ದ್, ಅರ್ಸೊದುಲ್ಲಾಸ ದೊರಿದ್ ಬರಡ್ಂದ್, ಪತ್ತೆರೆ ಸೇರಿಗೆಡ್, ಪತ್ತ್ ಬೊರೆಲ್ ಜೋಡಿತ್, ಸರನುಂದು ನಟ್ಟೋನುವ, ಸ್ವಾಮಿ ಸತ್ಯೊಲೆ……” ಎಂದು ಹೆಣ್ಣಿನ ಗಂಡಿನ ಮನೆಯವರು ಎದುರು ಬದುರು ನಿಂತು ಹೂ ಸೀರೆ ಕೊಡುತ್ತಾರೆ. ಗರ್ಭಿಣಿ ಬೊಲ್ಲೆಯನ್ನು ಯುವತಿಯರು ಸೀರೆಯುಡಿಸಿ ಶೃಂಗಾರಿಸುತ್ತಾರೆ. ಊರ ಬೊಟ್ಯದ/ ಗುರಿಕಾರರ ಮಾರ್ಗದರ್ಶನದಂತೆ ಮಂಗಳಕರ ಶುಭ ವಸ್ತುಗಳನ್ನು ಮುತ್ತೈದೆಯರು ಜೋಡಿಸುವುದಲ್ಲದೆ ಪೂರ್ಣ ಪ್ರಮಾಣದಲ್ಲಿ ಒಳಿತು ಬಯಸುತ್ತಿದ್ದರು.

ನಂತರ ಮದುಮಗಳ ಶೃಂಗಾರದಲ್ಲಿ ಗರ್ಭಿಣಿ ಬೊಲ್ಲೆಯನ್ನು ಕುಳ್ಳಿರಿಸಿ ಸೀಮಂತದ ಔತಣವನ್ನು ಉಣ ಬಡಿಸಲು ಬಾಳೆಎಲೆಯನ್ನು ಹಾಸುತ್ತಾರೆ. ಹಿರಿಯರ ಸಲಹೆ, ಮಾರ್ಗದರ್ಶನದಲ್ಲಿ ಮುತ್ತೈದೆಯರು ಪೊರಿತ ಪೊಡಿ, ಅರಿತ ಪೊಡಿ,ಚಕ್ಕುಲಿ, ಉಂಡೆ,ಸುಕುನುಂಡೆ, ಲಾಡ್, ಎಲ್ಯಪ್ಪ, ಮಲ್ಲಪ್ಪ, ನುರ್ಗೆಸೊಪ್ಪು, ಬೆಲ್ಲದ ಅಚ್ಚಿ, ಕಲಿ, ಫಲವಸ್ತು ಇವೆಲ್ಲವನ್ನೂ ಗಂಡನ ಮನೆಯವರು ಬಡಿಸುವರು. ಬಳಿಕ ಮೊದಲೇ ಕೊಟ್ಟಂತಹ ಎಳೆಯ ಹಿಂಗಾರದ ಹಾಳೆಯನ್ನು ಗರ್ಭಿಣಿ ಬೊಲ್ಲೆಯು ಕೊಂಬೆರಳಿನ ತುದಿಯಿಂದ ತಿವಿದು ಬಿಡಿಸುತ್ತಾಳೆ. ಆಕೆಯ ಗಂಡ ಹಂದ್ರ ಹಿಂಗಾರದ ಎಸಲು ತೆಗೆದು ಆಕೆಯ ತಲೆಗೆ ಮುಡಿಸುವನು. ಅನಂತರ ಐದು ಮಂದಿ ಮುತ್ತೈದೆಯರು ಆರತಿ ಎತ್ತಿ ದೃಷ್ಟಿ ಬೀಳದಿರಲಿ ಎಂಬಂತೆ  ಮುಂದಲೆಗೆ ಬೆರಳು ಮುರಿದುಕೊಳ್ಳುತ್ತಾರೆ. ಇನ್ನೊಂದೆಡೆ ದುಡಿ ಪಾಡ್ದನ ಲೇಲೆಲ ಪದರಂಗಿತಕ್ಕೆ ಹಿರಿಯರು ಕಿರಿಯರು ಹೆಜ್ಜೆ ಹಾಕುತ್ತಾರೆ.

ಇಷ್ಟಾದ ನಂತರ, ಗರ್ಭಿಣಿ ಹೆಣ್ಣಿಗೆ ಪೊರಿಕಲಿ ಕೊಡುವ ಕ್ರಮ, ಚೀಪೆ ಕಲಿಗೆ ನಾಲ್ಕು  ಪೊದ್ದೊಲು ಹಾಕಿ ಕೊಡುತ್ತಾರೆ. ಹಾಗೆಯೇ ಉಣಬಡಿಸಿದ ಕೆಲವೊಂದು ಭಕ್ಷ್ಯಗಳನ್ನು ಬಾಯಿಗೆ ಕೊಡುತ್ತಾರೆ. ಗರ್ಭಿಣಿ ಬೊಲ್ಲೆಯು ತನಗೆ ಉಣಬಡಿಸಿದ ಕೆಲವೊಂದು ತಿಂಡಿ ತಿನಿಸುಗಳನ್ನು ಮಕ್ಕಳನ್ನು ಕರೆದು ಬಾಯಿಗೆ ಕೊಡುತ್ತಾಳೆ. ಆ ಬಳಿಕ ಹೆಣ್ಣಿನ ಕಡೆಯವರು ಬಡಿಸಿದ ಭೋಜನ ಜಾರದ ಹಾಗೆ, ಬೀಳದ ಹಾಗೆ ಒಂದೇ ಕೈಯಲ್ಲಿ “ಚೀಲವು” ಗೆ ತುಂಬಿಸಬೇಕು. ಅನಿವಾರ್ಯ ಎನಿಸಿದಲ್ಲಿ ಎರಡೂ ಕೈಗಳನ್ನು ಉಪಯೋಗಿಸಿ ತುಂಬಿಸುವುದೂ ಉಂಟು.  ಇದನ್ನು ತಾಯಿ ಮನೆಯವರು ತಕೊಂಡು ಹೋಗಿ ಪರಿಸರದ ನಾಲ್ಕೈದು ಮನೆಗಳಿಗೆ ಹಂಚಿಕೊಳ್ಳುವ ಪದ್ದತಿಯು ರೂಢಿಯಲ್ಲಿದೆ. ಅನಂತರ  ಮೊದಲೇ ಉಣಬಡಿಸಿದ ಬಾಳೆ ಎಲೆಗೆ ಅನ್ನ ಬಡಿಸಲಾಯಿತು. ಜೊತೆಗೆ ನೆಂಟರಿಷ್ಟರಲ್ಲಿ ಅಕ್ಕ ಎನಿಸಿದವಳನ್ನು ಪಕ್ಕದಲ್ಲಿ ಕುಳ್ಳಿರಿಸಿ ಉಣ ಬಡಿಸುವುದುಂಟು. ಬೊಲ್ಲೆಯು ಬೇಕಾದಷ್ಟು ಉಂಡು ಒಂದಿಷ್ಟು ಎಲೆಯಲ್ಲಿಯೇ ಉಳಿಸಿಕೊಳ್ಳಲು ಹಿರಿಯರು ಮಾರ್ಗದರ್ಶನ ಮಾಡುತ್ತಾರೆ. ನಂತರ ಅದೇ ಉಂಡ ಎಲೆಯನ್ನು ಮೂರು ಬಾರಿ ತಲೆಗೆ ಪ್ರದಕ್ಷಿಣೆ ಮಾಡಿ ಉಂಡೆಲೆಯನ್ನು ದನ ತಿನ್ನಲು ಯೋಗ್ಯವೆನಿಸುವ ಸ್ಥಳದಲ್ಲಿ ಇಟ್ಟುಬಿಡುವ ಪದ್ಧತಿಯನ್ನು ಅನುಸರಿಸಿ ಊಟ ಮುಗಿಸಿದ ಬೊಲ್ಲೆಯನ್ನು ಕೈತೊಳೆಸಿ ಮನೆಯೊಳಗೆ ಕರೆಸಿಕೊಂಡು ಹಾಲು ಕುಡಿಸುತ್ತಾರೆ. ಗರ್ಭಿಣಿ ಬೊಲ್ಲೆಯು ನೆರೆದ ಸಭಿಕರ ತಲೆಗೆ ಮೂರು ಬಾರಿ ತೆಂಗಿನ ಎಣ್ಣೆಯ ಬಿಂದುಗಳನ್ನು ಸಿಂಪಡಿಸಿ ಸರ್ವರಿಂದಲೂ ಶುಭ ಹಾರೈಕೆ ಪಡೆಯುತ್ತಾಳೆ.

ಕೊನೆಯದಾಗಿ “ಮಟ್ಟೆಲ್ ದಿಂಜವುನ ಕ್ರಮ”ದ ಸಿದ್ಧತೆಯನ್ನು ಗಂಡನ ಮನೆಯವರು ತರಾತುರಿಯಲ್ಲಿ ಮಾಡುತ್ತಾರೆ. ಒಂದು ಬಿಳಿ ದೋತ್ರದಲ್ಲಿ ಕಾಳಜೀರಿಗೆ, ಎಡ್ಡೆಮುಂಚಿ, ಮುಂಚಿಸಾಮಾನು, ಓಲೆಬೆಲ್ಲ ಮೊದಲಾದವುಗಳನ್ನು ಗಂಟುಕಟ್ಟಿ ಗರ್ಭಿಣಿ ಬೊಲ್ಲೆಯ ಸೀರೆಯ ಸೆರಗಿನ ಮಡಿಲಿಗೆ ಹಾಕುತ್ತಾರೆ. ಈ ಕ್ರಮವನ್ನು”ಮಟ್ಟೆಲ್ ದಿಂಜವುನ” ಅನ್ನುತ್ತಾರೆ.  ಈ ಹುಡಿಮದ್ದಿನ ಗಂಟು ಮುಂದಕ್ಕೆ ಪ್ರಸವ ವೇದನೆಯ ಕಾಲದಲ್ಲಿ ಅತಿಯಾದ ನೋವನ್ನು ನಿವಾರಿಸಲು ಈ ಗಂಟಿನ್ನು ಸಡಿಲಗೊಳಿಸುವಂತೆ ನೋವು ಸಹ ಸಡಿಲಗೊಳ್ಳಲಿ ಎಂಬ ನಂಬಿಕೆಯಿಂದ ಮಟ್ಟೇಲ್ ತುಂಬಿಸುವ ರೂಢಿ ಮಾಡಿಕೊಂಡಿದ್ದರು. ಇದನ್ನು ಹೆಣ್ಣಿನ ಸೋದರ ಮಾವ ಅಥವಾ ಹಿರಿಯಣ್ಣನ ಕೈಯಲ್ಲಿರುಸುತ್ತಾರೆ. ಈ ಗಂಟನ್ನು ಪಡೆದವರು ಹಿಂತಿರುಗಿ ನೋಡದೆ, ತಾನು ಹೋಗುವ ದಾರಿಯಲ್ಲಿ ಹೋಗ ಬೇಕಾದ ನಿಯಮವೂ ಇದೆ.

ಸಭಿಕರ ಊಟೋಪಚಾರದ ನಂತರ ಬೊಲ್ಲೆಯನ್ನು ಕಿಜನೊಟ್ಟು ಬರ್ಕೆಯತ್ತ ಕರೆದುಕೊಂಡು ಹೋಗಲು ನಿರ್ಧರಿಸುತ್ತಾರೆ. ಕೆಲವು ದಿನಗಳನ್ನು ಕಿಜನೊಟ್ಟು ಬರ್ಕೆಯಲ್ಲಿ ಕಳೆದು ತಮ್ಮನ ಬೊಲ್ಮನ ಮುಗಿಸಿಕೊಂಡು ಮತ್ತೆ ಈಂದೊಟ್ಟು ಸೇರಿಕೊಂಡು ಪೊರ್ತ್ಯೋಲುದ ಪೊರ್ತು ( ತುಂಬು ಗರ್ಭಿಣಿ ಹೆರಿಗೆಯ ಸಮಯ ಹತ್ತಿರ ಇರುವಾಗ )

ಮತ್ತೆ ತವರು ಮನೆಗೆ/ಕಿಜನೊಟ್ಟು ಬರ್ಕೆಗೆ ಕಳುಹಿಸಿಕೊಡುವ ಯೋಜನೆಯನ್ನು ಹಾಕಿಕೊಂಡ ಗಂಡನ ಪರಿವಾರಕ್ಕೆ ಬೊಟ್ಯದ/ ಗುರಿಕಾರರು ಸಮ್ಮತಿಸುತ್ತಾರೆ. ಸತ್ಯ ದೈವಗಳಿಗೆ ಮಗದೊಮ್ಮೆ ತಲೆತಗ್ಗಿಸಿ ಹಿರಿಯರ ಚರಣಾರವಿಂದಗಳಿಗೆ ನಮಸ್ಕರಿಸಿ ತವರೂರ ಬಂಧುಗಳ ಜೊತೆಗೆ ಸತ್ಯದಪ್ಪೆ ಬೊಲ್ಲೆಯನ್ನು ಕಳುಹಿಸಿ ಕೊಡುತ್ತಾರೆ.

( ಮುಂದಿನ ಸಂಚಿಕೆಯಲ್ಲಿ ತುಳುನಾಡಿನ ಅವಳಿ ವೀರರು ಕಾನದ ಕಟದರ ಜನನ )

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಹಿಂದಿನ ಸಂಚಿಕೆಗಳು

ತುಳುನಾಡಿನ ಅಪ್ರತಿಮ ಅವಳಿ ವೀರರು ಕಾನದ-ಕಟದರು | ಸಂಚಿಕೆ-01

ಸಮಾಜ ಪರಿವರ್ತನಾ ಚಳುವಳಿಯಲ್ಲಿ ಕಾನದ– ಕಟದರ ಹೆಜ್ಜೆ ಗುರುತು:

ಬೊಲ್ಲೆಯ ಜನ್ಮ ವೃತ್ತಾಂತ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 03

ಬೊಲ್ಲೆಯ ನಾಮಕರಣ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 04

ಸ್ವಾಭಾವಿಕ ಸ್ವಭಾವ ಬೆಳೆಸಿಕೊಂಡ ಸತ್ಯದಪ್ಪೆ ಬೊಲ್ಲೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 05

ಸತ್ಯದಪ್ಪೆ ಬೊಲ್ಲೆಯ ನೀರ ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 06

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08

ಇತ್ತೀಚಿನ ಸುದ್ದಿ