ಇಕ್ಕೇರಿಯತ್ತ ಕಾನದ - ಕಟದರ ಪಯಣ/ ತುಳುನಾಡಿಗೆ ಅತಿಕಾರ/ ಅತ್ಯರ ಬಿದೆ/ತಳಿಯ ಪರಿಚಯ: ಸಂಚಿಕೆ: 14 - Mahanayaka
1:27 AM Wednesday 11 - December 2024

ಇಕ್ಕೇರಿಯತ್ತ ಕಾನದ – ಕಟದರ ಪಯಣ/ ತುಳುನಾಡಿಗೆ ಅತಿಕಾರ/ ಅತ್ಯರ ಬಿದೆ/ತಳಿಯ ಪರಿಚಯ: ಸಂಚಿಕೆ: 14

kanada katada
24/01/2022

  • ಸತೀಶ್ ಕಕ್ಕೆಪದವು

“ಪೊಲಿಯೆ ಪೊಲಿಯರ್ ಪೊಲಿ  ಪೂವೆ ಪೋಂಡುಲ್ಲಯ |

ಕೋಡೆಂದೆರೆ ಇನಿಂದೆರೆ ಮಾಯಿದಲ ಪುನ್ನಮೆ |

ಮಾಯಿದಲ ಪುನ್ನಮೆಲ ಮಾಯೊಡೆ ಪೋತುಂಡುಯೆ|

ಸುಗ್ಗಿದಲ ಪುನ್ನಮೆಲ  ನಲಿತ್ತ್ ದೆ ಪೋತುಂಡುಯೆ|………

ಹೀಗೆ ತುಳುನಾಡಿನ ಮನ್ಸರ ಕರುಂಗೋಲು ಕುಣಿತದ ಪದರಂಗಿತ ಆರಂಭವಾಗುತ್ತದೆ. ಜೋಡಿ ಯುವಕರು ಸೇಡಿ ಮಣ್ಣಿನ ವರ್ತುಲಾಕಾರದ ಶೃಂಗಾರದಿಂದ ಬಿಳಿಕಚ್ಚೆ, ಬಿಳಿ ಪಟ್ಟೆಯ ಅಡ್ಡ ಸಾಲು, ಬಿಳಿ ಮುಂಡಾಸು, ಹಣೆಗೊಂದು ಸುಣ್ಣದ ಬೊಟ್ಟು ( ತಿಲಕ ) ಧಾರಣೆ ಯೊಂದಿಗೆ ನೆಕ್ಕಿಗಿಡದ ಗೆಲ್ಲುಗಳನ್ನು ಕೈಗಳಲ್ಲಿ ಹಿಡಿದು ಹಿಂದೆ ಮುಂದಕ್ಕೆ ಬೀಸಿಕೊಂಡು ಹೆಜ್ಜೆ ಹಾಕುತ್ತಾ ಕರುಂಗೋಲು ಪದರಂಗಿತ ಮಣಿಸ್ವರಕ್ಕೆ ಲಯಬದ್ಧವಾಗಿ ಕುಣಿಯುತ್ತಾ ಮನೆ ಮನೆಯ ಮುಂದಣದಲ್ಲಿ “ಕರುಂಗೋಲುದ ಜೇವುಲು ಬೈದ ಬಾಕಿಲ್ ದೆಪ್ಪುಲೆ ಬೊಲ್ಪು ಪೊತ್ತಲೆ…. ಪೊಲಿಯೆ ಪೊಲಿ ಎಚ್ಚಿಲೆ……..”  ಎಂಬುದಾಗಿ ಹಾರೈಕೆಯ ಕೂ ಸೊರದ ಕೂಗನ್ನು ಕೂಗಿ ಮನೆ ಮಂದಿಯನ್ನು ಎಚ್ಚರಿಸುವುದುಂಟು. ಕರುಂಗೋಲು ಮಣಿಸ್ವರದ ಶಬ್ಧವನ್ನು ಆಲಿಸಿದ ಮನೆಯವರು ಎಷ್ಟೇ ನಟ್ಟಿರುಳು ಆಗಿದ್ದರೂ ಬಾಗಿಲು ತೆರೆದು ದೀಪ/ಚಿಮಿನಿ ಉರಿಸಿ ಭಯ ಭಕ್ತಿ ಯಿಂದ ಪೊಲಿ/ ಅದೃಷ್ಟವನ್ನು ಸ್ವಾಗತಿಸುವುದು ತುಳುನಾಡಿನ ಜನತೆ ಕಾನದ ಕಟದರಿಗೆ ನೀಡುತ್ತಿರುವ ಗೌರವವಾಗಿದೆ. ಜಾತಿ ಮತ ಪಂಥ ಧರ್ಮಗಳನ್ನು ಮೀರಿ ಕಾನದ ಕಟದರ ಸಾಧನೆಗಳ ಸಾರ ಸಾರುವ ಕರುಂಗೋಲು ಊರಿಗೆ ಬರಲಿರುವ ಮಾರಿ ಸಂಕಟ ಕೊಟ್ಲೆ ಕಾಯಿಲೆಗಳನ್ನು ದೂರ ಮಾಡಿ ಸುಖ ಶಾಂತಿ ನೆಮ್ಮದಿ ಸಕಲ ಐಶ್ವರ್ಯಗಳು ಲಭಿಸುವಲ್ಲಿ ಈ ಕರುಂಗೋಲು ಅದೃಷ್ಟದ ಹಾಡು ಕುಣಿತ ಹಾರೈಕೆಗಳು ಪರಿಣಾಮ ಬೀರುತ್ತದೆ ಎಂಬ ನಂಬಿಕೆಯ ಅಂತರಾಳ ತುಳುವರಲ್ಲಿದೆ. ಯಾರೂ ಬಾಗಿಲು ತೆರೆಯದೆ ದೀಪ ಉರಿಸದೆ ಫಲಪುಷ್ಪ ಕಾಯಿ ಕಾಣಿಕೆ ನೀಡದೆ ತಿರಸ್ಕರಿಸುವರೋ ಅಂತವರ ಸಂತಾನ ಸಂತೈಸಿ ಅಳಿದು ಹೋಗುವುದರಲ್ಲಿ ಎರಡು ಮಾತಿಲ್ಲ ಎಂಬುದು ತುಳುವರ ಅಭಿಪ್ರಾಯ. “ಪೊಲಿಯೆ ಪೊಲಿ ಎಚ್ಚಡ್ ” ಅನ್ನುವಲ್ಲಿಯೂ ಪರರ ಹಿತವನ್ನೂ, ಪರರ ಸುಖವನ್ನೂ ಬಯಸುವ ಅದೃಷ್ಟ ಹಾರೈಕೆ ನುಡಿಗಳು ಸಾಹಿತ್ಯಿಕವಾಗಿ ಬಿಂಬಿತವಾಗಿರುವುದನ್ನು ಕಾಣಬಹುದಾಗಿದೆ.

ಮುಂದಕ್ಕೆ ಕರುಂಗೋಲು ಪದಗಳ ಸಾಲಿನಂತೆ “ಲೊ… ಕರುಂಗೋಲು ಕೊನತಿನ ಏರೆಂಚ ಪಿಂಬೆರ?….. ಕರುಂಗೋಲುಲ ಕಾಂತರೊಟ್ಟು ಕಾಂತಕ್ಕನೆ ಪಿಂಬಲೆ……..” ಹೀಗೆ ಕರುಂಗೋಲು ಪದ ಮುಂದುವರಿಯುತ್ತದೆ. ಅಂದರೆ ಸರಿಸುಮಾರು 450 ವರ್ಷಗಳ ಹಿಂದೆ ಕಾನದ ಕಟದರ ಕಥೆಯನ್ನು/ ಸಾಧನೆಯನ್ನು ಕಿಜನೊಟ್ಟು ಬರ್ಕೆಯ ಒಕ್ಕಲು ಆಳುಗಳಲ್ಲಿ ಒಬ್ಬಳಾದ ಕಾಂತರೊಟ್ಟು ಕಾಂತಕ್ಕ ಬಹುತೇಕ ಸಾಧನೆಗಳನ್ನು ಅರಿತಿದ್ದಾಳೆ.ಆ ಮೂಲಕ ಜನಪದ ರೂಪಗಳಲ್ಲಿ ಒಬ್ಬರಿಂದ ಮತ್ತೊಬ್ಬರಿಗೆ ಹರಡಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

ಮತ್ತೆ ಆಕೆಯನ್ನು ಜನಪದರು  ಈ ರೀತಿ ಪ್ರಶ್ನಿಸುತ್ತಾರೆ. ” ಲೊ… ಕರುಂಗೋಲು ಪುಟ್ಟಿನದೆ ಓಲುದೆ ಕಾಂತಕ್ಕ ? ಇದಕ್ಕೆ ಪ್ರತ್ಯುತ್ತರವಾಗಿ ಕಾಂತರೊಟ್ಟು ಕಾಂತಕ್ಕ ಈ ರೀತಿ ಬಣ್ಣಿಸುತ್ತಾಳೆ. ” ಮೂಡಯಿದ ದಿಕ್ಕ್ ಡ್ ಲ ಕಂಡೊದ ಮೂಡ್ಯೆಡೆ….., ಪಡ್ಡಯಿದ ದಿಕ್ಕ್ ಡ್ ಲ ಸುದೆತ ಬರಿಟೆ……, ಬಡಕಯಿದ ದಿಕ್ಕ್ ಡ್ ಲ ಕಲ್ಲನ  ಬಾರೆಡೆ……, ತೆನ್ಕಯಿದ ದಿಕ್ಕ್ ಡ್ ಲ ನೀರ ಚಿಲ್ ಮೆಡೆ…..‌”

ಹೀಗೆ ಕರುಂಗೋಲು ಅಥವಾ ಅದೃಷ್ಟದ ಪದರಂಗಿತ/ಪಾಡ್ದನ ಹುಟ್ಟಿ ಕೊಂಡಿದೆ ಎಂಬುದನ್ನು ಕಾಣಬಹುದಾಗಿದೆ. ಕಾನದ ಕಟದರು ದೈಹಿಕವಾಗಿ, ಮಾನಸಿಕವಾಗಿ ಬಲಾಢ್ಯರೆನಿಸುವ ಹೊತ್ತು ( ರಟ್ಟೆ ಬಲ ಬಲಿರ್ನ ಪೊರ್ತು ) ಸ್ವಾಭಿಮಾನದ ಸಂಕೇತವೆನಿಸುವ ಅನೇಕ ಸಾಧನೆಗಳ ಹೆಜ್ಜೆಗಳನ್ನು ಹಾಕಿರುವುದನ್ನು ಕಾಣಬಹುದು. ಬಂಗಾಡಿ ಬೆಡಿಗುತ್ತಿನ ಪ್ರವೇಶ, ಬಾಕಿಮಾರು ಗದ್ದೆಯ ಕಟ್ಟಹುಣಿ/ ಬದುವನ್ನು ಅಧಿಕಾರದ ಸಂಕೇತವಾಗಿ ಕೇಳಿರುವುದು, ಬಲ್ಲಾಳರ ಬೆಳ್ಳಿ ಕುದುರೆಯನ್ನು ಕೇಳಿರುವುದು, ಬೆಳ್ಳಿ ಮುಟ್ಟಲೆಯನ್ನು ಪಡೆದಿರುವುದು, ಕುಲ್ಕುಂದ ಜಾನುವಾರು ಜಾತ್ರೆಯ ಪ್ರವೇಶ, ಎರುಕನಡನ ಬೇಟಿ, ಕಾರಿ ಕಬಿಲನ ಜೋಡಿ ಮಾಡಿರುವುದು, ಮಾಸಿಕ ಜಾತ್ರೆಯನ್ನು ಪಾಕ್ಷಿಕ ಜಾತ್ರೆ ಆಗುವಂತೆ ವಾಕ್ ನೀಡಿರುವುದು, ಹೀಗೆ ಹಲವಾರು ಇತಿಹಾಸದ ಪುಟಗಳಲ್ಲಿ ದಾಖಲಾರ್ಹ ಹೆಜ್ಜೆಗಳನ್ನು ಹಾಕಿದ ಕಾನದ ಕಟದರು ಅತಿಕಾರ ಬಿದೆ ತುಳುವ ನಾಡಿಗೆ ತಂದು ಬೆಳೆಸಿದ ಇತಿಹಾಸ ಯಾವ ಕಾಲಕ್ಕೂ ಮರೆಯಾಗುವಂತಹದ್ದು ಅಲ್ಲವೇ ಅಲ್ಲ. “ಬಿಸಿಲೆ ಗಾಟಿ ಏರೊಂದು, ಇಕ್ಕೇರಿ ಸೇರೊಂದು, ಸತ್ಯೊದತ್ಯರ ಬಿದೆ ನಟ್ಟೊನ್ಬಿ ಪೊರ್ತು”

ಎಂಬ ನುಡಿಗಟ್ಟಿನ ಪ್ರಕಾರ ಕಾರಿ ಕಬಿಲೆ ಎತ್ತುಗಳನ್ನು ದಡ್ಡಲಪಲ್ಕೆಯಲ್ಲಿ ಬಿಟ್ಟು ನೇರವಾಗಿ ಗಟ್ಟಹತ್ತುವ ಯೋಚನೆಯನ್ನು ಮಾಡಿಕೊಂಡು ಬಿಸಿಲೆಗಾಟಿಯನ್ನು ಏರಲು ಆರಂಭಿಸುತ್ತಾರೆ.

ತುಳುನಾಡಿನಲ್ಲಿ ಸುಗ್ಗಿ ಏನೆಲ್ ಕೊಲಕೆ ಎಂಬುದಾಗಿ ವಾರ್ಷಿಕ ಆವೃತ್ತಿಯಲ್ಲಿ ರೈತರು, ಕೃಷಿಕರು, ಬೇಸಾಯಗಾರರು ಮೂರು ಹಂತಗಳಲ್ಲಿ ವ್ಯವಸಾಯವನ್ನು ಅವಲಂಬಿಸಿರುವುದು ಕಾಣಸಿಗುತ್ತವೆ. ಬೊಟ್ಟು ಕಂಡ, ಬೈಲ್ ಕಂಡ, ಬಾಕಿಮಾರ್ ಕಂಡ, ಕಂಬುಳದ ಕಂಡ, ಪರ ಕಂಡ, ಪೊಸ ಕಂಡ, ಉಳಿಕಲ್ ಕಂಡ, ಬಳ್ಳಿ ಕಂಡ, ಪೊಯ್ಯೆ ಕಂಡ, ಮಜಲ್ ಕಂಡ, ಕೊಪ್ಪೊದ ಕಂಡ, ಚೇವಡ್ಕ ಕಂಡ, ಗುರಿಕಂಡ, ಬನೊತ ಕಂಡ, ಪೂಕರೆ ಕಂಡ, ಅಗಿನದ ಕಂಡ, ವಲಸರಿ ಕಂಡ, ಚೆಂಡ್ ದ ಕಂಡ, ಬಂಡಿದ ಕಂಡ, ಕೋಡಿ ಕೊಲೆಂಜಿ….. ಹೀಗೆ ಪ್ರಾದೇಶಿಕತೆಗೆ ಅನುಗುಣವಾಗಿ, ವಸ್ತುಸ್ಥಿತಿಗೆ ಅನುಗುಣವಾಗಿ ಗದ್ದೆಗಳನ್ನು ಗುರುತಿಸಿ ಉಚ್ಚರಿಸುವುದು ತುಳುನೆಲದ ಸೊಬಗನ್ನು ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ಎತ್ತಿ ಹಿಡಿದ ಕನ್ನಡಿಯಾಗಿದೆ.

ಹಾಗೆಯೇ, ಕಯಮೆ,ರಾಜಕಯಮೆ, ಮಸೂರಿ, ಸೋನ ಮಸೂರಿ, ಜಯ, ಕಜೆ, ಗಂಧಸಲೆ, ಕಟ್ಸಂಬರ್, ತಮ್ಮುಂಗೆ, ಇರ್ವ, ಐಯರೆಟ್ಟ್, ಮೊರಡೆ, ಅತಿಕಾರ/ಅತ್ಯರ ಮೊದಲಾದ ತಳಿ/ ಬಿದೆಗಳನ್ನು ತುಳುನಾಡಿನಲ್ಲಿ ಅನೇಕ ವರ್ಷಗಳಿಂದಲೂ ಕಾಣಬಹುದು. ಆದರೆ ಈ ಎಲ್ಲಾ ತಳಿಗಳಲ್ಲಿ ವಿಶೇಷವಾದ ತಳಿ ಯಾವುದೆಂದರೆ ಅತಿಕಾರ/ ಅತ್ಯರ ತಳಿ. ಸತ್ಯವಂತರಿಗೆ ಮಾತ್ರ ದಕ್ಕಬಹುದಾದ ತಳಿ, ಕೈಹಿಡಿಯಲ್ಲಿ ಹಿಡಿದು ಪ್ರಮಾಣ ಮಾಡಬಹುದಾದ ತಳಿ, ಸತ್ಯ ಧರ್ಮ ನ್ಯಾಯವಂತರು ಮಾತ್ರ ಬೆಳೆಯಬಹುದಾದ ತಳಿ, ಸತ್ಯದ ತಳಿಯನ್ನು ತುಳುನಾಡಿನಲ್ಲಿ ಬಿತ್ತಿದವರಿಲ್ಲ, ಬೆಳೆದವರಿಲ್ಲ, ಅದು ಕಾನದ ಕಟದರಿಂದಲೇ ಆರಂಭವಾಗಬೇಕು ಎಂಬುದನ್ನು ತೀರ್ಮಾನಿಸಿ ತಳಿ/ಬಿದೆ ತರಲು ಗಟ್ಟಸೀಮೆಗೆ ಹೊರಡುತ್ತಾರೆ.

ಇಕ್ಕೇರಿ ಸೇರಿದ ಕಾನದ ಕಟದರು ಇಕ್ಕೇರಿ ನಾಯಕರಿಗೆ ಅಭಿವಂದಿಸಿ ತುಳುನಾಡಿನ ಮೂಲದವರು ಎಂಬುದನ್ನು ತಿಳಿಯಪಡಿಸುತ್ತಾರೆ. ಬದುಕಿನ ಧ್ಯೇಯ ಉದ್ದೇಶವನ್ನು ವಿವರವಾಗಿ ವಿವರಿಸಿದ ಕಾನದ ಕಟದರು ಸತ್ಯದ ತಳಿ ಅತಿಕಾರ ತಳಿಯನ್ನು ತುಳುನೆಲದಲ್ಲಿ ಬಿತ್ತಿ ಬೆಳೆಯುವ ಆಕಾಂಕ್ಷೆ ಯನ್ನು ಇಕ್ಕೇರಿ ನಾಯಕರ ಮುಂದಿಡುತ್ತಾರೆ. ಅವಳಿ ಯುವ ತರುಣರ ಮಾತನ್ನು ಆಲಿಸಿದ ಇಕ್ಕೇರಿ ನಾಯಕರು ಒಮ್ಮೆಗೆ ದಂಗಾಗಿ ಯುವಕರ ಒಡಲಾಸೆಗೆ ಬೇಸ್ ಎಂಬುದನ್ನು ಮನದೊಳಗೆ ಅಂದು ಕೊಳ್ಳುತ್ತಾರೆ. ಅಲ್ಲದೆ ಸತ್ಯವಂತರು ಬೆಳೆಯುವ ತಳಿ, ಸಮರ್ಥ ವೀರರು ಬೆಳೆಯುವ ತಳಿ, ಸತ್ಯ ಧರ್ಮ ನ್ಯಾಯವಂತರಿಗೆ ಮಾತ್ರ ಸಲ್ಲುವ ತಳಿ ಇದಾಗಿದೆ. ಹೀಗಿರುವಾಗ ಕೇವಲ ಸಾಮಾನ್ಯ ಯುವಕರಿಗೆ ಇದು ಸಾಧ್ಯವಾದೀತೇ? ಅದೂ ಕೂಡ ಬಡ ಕೂಲಿಯಾಳುಗಳಿಂದ ಇದು ಸಾಧ್ಯ ಆಗಬಲ್ಲುದೆ? ಹೀಗೆ ಹಲವಾರು ಪ್ರಮುಖ ದ್ವಂದ್ವಗಳ ಸುರಿಮಳೆ ಸುರಿದರೂ ಗಟ್ಟಿ ಮನಸ್ಸು ಮಾಡಿಕೊಂಡು ಕಾನದ ಕಟದರನ್ನು ನೇರವಾದ ನೋಟದಿಂದ ನೋಡುತ್ತಾ “ಅತ್ಯರ/ಅತಿಕಾರ ತಳಿಯನ್ನು ಕೊಡುವುದಕ್ಕೆ ಅಭ್ಯಂತರ ಇಲ್ಲ, ಆದರೆ ಕೊಂಡೊಯ್ಯುವ ಬಗೆಯಾದರು ಹೇಗೆ? ಎಂಬ ಪ್ರಶ್ನೆಯನ್ನು ಮುಂದಿಡುತ್ತಾರೆ. ಆಗ ವಿನಯ ಪೂರ್ವಕವಾಗಿ ಕಾನದ ಕಟದರು ಅತಿಕಾರ ತಳಿಯನ್ನು ಕೊಂಡೊಯ್ಯುವ ಬಗೆಯನ್ನು ಬಣ್ಣಿಸುತ್ತಾರೆ.

“ಬೊಲ್ಯನ ನುಗೊಟುಲ ಗೋರುದೇ ಕೊನತೆರ, ಕಂಚಿನ ತಡ್ಪೆಡ್ ಲ ಗಾಲಿತೆ ಕನತೆರ, ಪಾರನ ತಡ್ಪೆಡ್ ಲ ಪಾರದೆ ಕೊನತೆರ, ಇಟ್ಟೆವುದ ಇರೆಟ್ ಲ ಪೊದಿದೆ ಕೊನತೆರ, ಬಾರೆಕುಲಯಿ ಬೂರುಡೆಲ ಸುಂದುದೆ ಕೊನತೆರ, ಚೇವುದಲ ದಂಡ್ ಡ್ ಲ ಬೆತ್ತ್ ದೆ ಕೊನತೆರ, ಕಡಿರನೆ ಕೋಲುಡುಲ ಕೋತುದು ಕೊನತೆರ, ಚೂರಿದನೆ ಮುಳ್ಳುಡುಲ ಸುರಿದ್ ಕೊನತೆರ, ನೆಕ್ಕಿದನೆ ತಪ್ಪುಡುಲ ಬಾಮಿತ್ ಕೊನತೆರ, ಪೊಲಿಯೆ ಪೊಲಿ ಎಚ್ಚ್ ಲೆ…….” ಹೀಗೆ ಕರುಂಗೋಲು ಪದ ರಂಗಿತ ಕಾನದ ಕಟದರ ಸೂಕ್ಷ್ಮತೆ ಮತ್ತು ಅತಿಕಾರ ತಳಿಯ ಬಗೆಗಿನ ವಿಶೇಷ ಜ್ಞಾನವನ್ನು ಬಣ್ಣಿಸುತ್ತದೆ. ಕಾನದ ಕಟದರ ವಿಶೇಷ ಜ್ಞಾನವನ್ನು ಗೌರವಿಸಿದ ಇಕ್ಕೇರಿ ನಾಯಕರು ಅತಿಕಾರ ತಳಿಯನ್ನು ತುಳುನಾಡಿಗೆ ಕೊಂಡೊಯ್ಯಲು ಅನುಮತಿ ನೀಡುತ್ತಾರೆ. “ಇರೆಟ್ ಇಟ್ಟೆವುಡು ಬಾರೆಕುಲಾಯಿ ಬೂರುಡು ಸುಂದುದು ಕೋತುದು ಬಾಮಿತ್ ಪೊಲಿ ಲೆತ್ತಿ ಪೊರ್ತು” ಎಂಬುದಾಗಿ ಸಂಕ್ಷಿಪ್ತವಾಗಿ ನುಡಿಕಟ್ಟಿನಲ್ಲಿ ನೆನಪಿಸಿಕೊಳ್ಳುತ್ತೇವೆ. ಕಾನದ ಕಟದರು ತಮ್ಮ ಯೋಚನೆಯಂತೆ ಸತ್ಯದ ಬಿದೆ/ತಳಿಯನ್ನು, ಅತಿಕಾರ ಬಿದೆ/ತಳಿಯನ್ನು “ಕುರುಂಟು” ರಚಿಸಿ ತಲೆಗೇರಿಸಿ ಹೊರಟು ನಿಲ್ಲುತ್ತಾರೆ. ಧೈರ್ಯ ಸ್ಥೈರ್ಯ ಮೌಲಿಕ ಮಾತುಗಳಿಂದ ಬೆರಗಾದ ಇಕ್ಕೇರಿ ನಾಯಕರು ಸಾರಮಾನ್ಯ ಕಾನದ ಕಟದರ ತಲೆಮಾಸುವಷ್ಟು ದೂರ ದಿಟ್ಟಿಸಿ ನೋಡುತ್ತಾ  ತಮಗರಿವಿಲ್ಲದಂತೆ ಕೈಗಳನ್ನೆತ್ತಿ ಗೌರವಿಸಿ ಹಾರೈಸಿ ಬೀಳ್ಕೊಡುತ್ತಾರೆ.

ಮುಂದಿನ ಸಂಚಿಕೆ: ಗಟ್ಟದ ಗಡಿಯಲ್ಲಿ ಚೌಂಡಿಯ ತಡೆ/ ಕಾನದ ಕಟದರ ಸಾಮಾರ್ಥ್ಯ ಪ್ರದರ್ಶನ/ ತುಳುನಾಡಿನಲ್ಲಿ ಚೌಂಡಿ, ಚೌಂಡಿ ಗುಳಿಗನಿಗೆ ನೆಲೆ.

ಹಿಂದಿನ ಸಂಚಿಕೆ:  ಕುಲ್ಕುಂದದ ಜಾತ್ರೆ / ಎರುಕನಡನ ಬೇಟಿ/ ಕಾರಿ ಕಬಿಲ ಜೋಡಿ | ತುಳುನಾಡಿನ ಅವಳಿ ವೀರರು ಕಾನದ-ಕಟದರು | ಸಂಚಿಕೆ: 13

ಇತ್ತೀಚಿನ ಸುದ್ದಿ