ರಾಮಮಂದಿರ ವಿಚಾರದಲ್ಲಿ ಹೇಳಿಕೆ; ಟ್ವೀಟ್ ಮೂಲಕವೇ ಎಲ್ಲರಿಗೂ ಉತ್ತರಿಸಿದ ಕುಮಾರಸ್ವಾಮಿ
ಬೆಂಗಳೂರು: ರಾಮಮಂದಿರಕ್ಕೆ ಹಣ ಸಂಗ್ರಹಿಸುತ್ತಿರುವವರು ಹಣ ಕೊಟ್ಟವರ, ಕೊಡದವರ ಮನೆ ಗುರುತು ಮಾಡುತ್ತಿರುವುದು ತಿಳಿಯಿತು. ಯಾತಕ್ಕೆ ಹೀಗೆ ಮಾಡುತ್ತಿದ್ದಾರೆಂಬುದು ಗೊತ್ತಿಲ್ಲ. ಹಿಟ್ಲರ್ ಕಾಲದಲ್ಲಿ ನಾಜಿ-ಯಹೂದಿಗಳಿಗೆ ಗಲಾಟೆ ನಡೆದು ಲಕ್ಷಾಂತರ ಜನರ ಮಾರಣ ಹೋಮ ನಡೆಯಿತು. ಇದು ಎಲ್ಲಿ ಹೋಗಿ ತಲುಪುತ್ತದೆ ಎನ್ನುವುದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದ ಕುಮಾರಸ್ವಾಮಿ ವಿರುದ್ಧ ಪೇಜಾವರ ಶ್ರೀ ಸೇರಿದಂತೆ ಹಲವು ಧಾರ್ಮಿಕ ಮುಖಂಡರು, ರಾಜಕಾರಣಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿದಂತೆ ಇದೀಗ ಸರಣಿ ಟ್ವೀಟ್ ಮೂಲಕ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದಾರೆ.
ನನ್ನ ಹೇಳಿಕೆಯಲ್ಲಿ ಬೇಜವಾಬ್ದಾರಿ ಗುರುತಿಸಿರುವ ಧಾರ್ಮಿಕ ಮುಖಂಡರೊಬ್ಬರು ಮೊದಲು ತಮ್ಮ ಜವಾಬ್ದಾರಿ ಅರಿಯಬೇಕು. ರಾಮನ ಭಕ್ತಿಯು ಹಣ, ಅಧಿಕಾರ, ರಾಜಕಾರಣವಾಗಿ ಪರಿವರ್ತನೆಯಾಗುವುದನ್ನು ಅವರು ತಡೆದಿದ್ದರೆ, ಅದು ಅವರ ಜವಾಬ್ದಾರಿಯ ಸಮರ್ಥ ನಿರ್ವಹಣೆ ಆಗಿರುತ್ತಿತ್ತು. ಅದು ಬಿಟ್ಟು ರಾಜಕೀಯದ ಹೇಳಿಕೆ ನೀಡುವುದು ಧಾರ್ಮಿಕ ನಾಯಕರಿಗೆ ಶೋಭೆಯಲ್ಲ ಎಂದು ಅವರು ಸ್ವಾಮೀಜಿಗಳ ಹೇಳಿಕೆ ವಿರುದ್ಧ ಪ್ರತಿಕ್ರಿಯಿಸಿದ್ದಾರೆ.
ಒಬ್ಬರು ಹೇಳಿದ್ದಾರೆ… ಶ್ರೀರಾಮನ ಮೇಲೆ ನಂಬಿಕೆ ಇದ್ದರೆ ಕುಮಾರಸ್ವಾಮಿ ದೇಣಿಗೆ ನೀಡಲಿ ಎಂದು. ಹಣ, ದೇಣಿಗೆ ನೀಡಿ ಶ್ರೀರಾಮನನ್ನು ಕುರುಡು ಕುರುಡಾಗಿ ಆರಾಧಿಸುವ ಭಕ್ತ ನಾನಲ್ಲ. ಹಣ ನೀಡಿ ನನ್ನ ಭಕ್ತಿ ಸಾಬೀತು ಮಾಡಬೇಕಿಲ್ಲ. ನಮ್ಮೆಲ್ಲರ ಭಕ್ತಿ, ಭಾವನೆಗಳನ್ನು ಹಣವಾಗಿ, ಅಧಿಕಾರವಾಗಿ ಪರಿವರ್ತಿಸುವ ನಿಮ್ಮ ನಡವಳಿಕೆ ತಿದ್ದಿಕೊಳ್ಳಿ ಎಂದು ಅವರು ಹೇಳಿದ್ದಾರೆ.
ಆಗಾಗ್ಗೆ ಈ ಮಾತು ಹೇಳುತ್ತಿರುತ್ತೇನೆ. ನಮ್ಮ ನಡುವಿನ ನಿಷ್ಕಪಟ, ಕಳಂಕವಿಲ್ಲದ ಜಾತ್ಯತೀತವಾದಿ ದೇವೇಗೌಡರು. ತಮ್ಮ ಧರ್ಮದ ಬಗ್ಗೆ ಆಳವಾದ ನಂಬಿಕೆ ಇದ್ದೂ, ಪರಧರ್ಮದ ಬಗ್ಗೆ ಅಪಾರ ಗೌರವ ಉಳ್ಳವರವರು. ಅವರಷ್ಟು ದೈವತ್ವ ನಂಬಿದವರು, ದೇಗುಲ ನೋಡಿದವರು ಇನ್ನೊಬ್ಬರಿಲ್ಲ. ದೈವದ ಮೇಲೆ ನಮ್ಮ ಕುಟುಂಬಕ್ಕಿರುವ ನಂಬಿಕೆ ಪ್ರಶ್ನಿಸುವವರು ಮೂರ್ಖರು ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.
ಪಬ್ಲಿಸಿಟಿಗೆ ನಾನು ಈ ಹೇಳಿಕೆ ಕೊಟ್ಟಿದ್ದೇನೆ ಎಂದು ಸೋದರ ಶ್ರೀರಾಮುಲು ಹೇಳಿದ್ದಾರೆ. ಪಾಪ ಅವರು ಮುಗ್ಧರು. ದೈವಬಲ, ಜನಾಶಿರ್ವಾದದಿಂದ 2 ಬಾರಿ ಸಿಎಂ ಆದ ನಾನು ಇನ್ನು ಯಾವ ಪಬ್ಲಿಸಿಟಿ ಪಡೆಯಬೇಕಿದೆ? ನನಗೆ ಅದರ ಅಗತ್ಯವೇನಿದೆ? ರಾಮ ಮಂದಿರ ಆಗಬೇಕೆಂದು ಕುಮಾರಸ್ವಾಮಿ ಅವರ ಮನಸ್ಸಲ್ಲೂ ಇದೆ ಎಂಬ ಅವರ ಮಾತನ್ನು ಮಾತ್ರ ಅನುಮೋದಿಸುತ್ತೇನೆ ಎಂದು ಕುಮಾರಸ್ವಾಮಿ ಹೇಳಿದರು.
ಇತಿಹಾಸ ಹೇಳುತ್ತಾ ನಿಂತಿರುವ ಪುರಾತನ ದೇಗುಲಗಳ ಹಿಂದೆ ಜನರನ್ನು ವಿಭಜಿಸಿದ ಕತೆಗಳಿಲ್ಲ. ಆ ದೇಗುಲಗಳ ನಿರ್ಮಾಣಕ್ಕಾಗಿ ದೇಣಿಗೆ ಹೆಸರಿನಲ್ಲಿ ಹಣ ಸಂಗ್ರಹಿಸಿದ ಉಲ್ಲೇಖವಿಲ್ಲ. ದೇವರನ್ನು ರಾಜಕೀಯಕ್ಕಾಗಿ ಉಪಯೋಗಿಸಿಕೊಂಡ ಉಲ್ಲೇಖವಿರುವ ಒಂದೇ ಒಂದು ಶಾಸನ ನಮಗೆ ಸಿಕ್ಕಿಲ್ಲ. ಈಗ ಇಂಥ ಕೃತ್ಯ ಮಾಡುತ್ತಿರುವವರು ದಯವಿಟ್ಟು ನಿಲ್ಲಿಸಿ ಎಂದು ಕುಮಾರಸ್ವಾಮಿ ಮಾರ್ಮಿಕವಾಗಿ ಹೇಳಿದರು.
ಈ ವಿಚಾರವಾಗಿ ಮಕ್ಕಳು-ಮರಿಗಳಿಗೆ,ಅಪ್ಪನ ಅಧಿಕಾರದ ಹಿಂದೆ ಅಡಗಿ ದುಡ್ಡು ಕೊಳ್ಳೆ ಹೊಡೆಯುತ್ತಿರುವ ಸ್ವಘೋಷಿತ ನವ ಇಲಿಗಳಿಗೆ ನಾನು ಪ್ರತಿಕ್ರಿಯಿಸಲಾರೆ. ಇಷ್ಟು ಹೇಳಿಯೂ ಅರ್ಥವಾಗದವರಿಗೆ ಹೇಳುವುದು ಇಷ್ಟೆ-ರಾಮಮಂದಿರ ಹಿಂದೂಗಳ ಭಕ್ತಿ,ಭಾವನೆಗಳ ಮೂರ್ತ ರೂಪ ಅದು ಆಗಬೇಕು. ಆದರೆ ಅದೇ ಹೆಸರಿನಲ್ಲಿ ನಡೆಯುತ್ತಿರುವ ವಿಭಜನೆಗೆ ನನ್ನ ವಿರೋಧ ಇದೆ ಎಂದು ಅವರು ಸ್ಪಷ್ಟಪಡಿಸಿದರು.