ಹಾನಗಲ್ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್: ಸಂತ್ರಸ್ತ ಮಹಿಳೆಯ ಮೇಲೆ ಗ್ಯಾಂಗ್ ರೇಪ್ - Mahanayaka

ಹಾನಗಲ್ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಟ್ವಿಸ್ಟ್: ಸಂತ್ರಸ್ತ ಮಹಿಳೆಯ ಮೇಲೆ ಗ್ಯಾಂಗ್ ರೇಪ್

moral police
11/01/2024

ಹಾವೇರಿ:  ಹಾನಗಲ್ ನಲ್ಲಿ ನಡೆದಿದ್ದ ಅನೈತಿಕ ಪೊಲೀಸ್ ಗಿರಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ನೈತಿಕತೆಯ ಹೆಸರಿನಲ್ಲಿ ದಾಳಿ ನಡೆಸಿದ ಪಾಪಿಗಳು ಮಹಿಳೆಗೆ ಅಮಾನವೀಯವಾಗಿ ಥಳಿಸಿ ಗ್ಯಾಂಗ್ ರೇಪ್ ಮಾಡಿರುವ ಆರೋಪ ಕೇಳಿ ಬಂದಿದೆ.

ಜನವರಿ 8ರಂದು ಅನ್ಯಕೋಮಿನ ಪುರುಷ ಮತ್ತು ಮಹಿಳೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ನಾಲ್ಕರ್ ಕ್ರಾಸ್ ಬಳಿಯ ಖಾಸಗಿ ಹೊಟೇಲ್ ನಲ್ಲಿ ತಂಗಿದ್ದರು.  ಇಲ್ಲಿನ ಆಟೋ ಚಾಲಕನೋರ್ವ ಈ ಬಗ್ಗೆ ದುಷ್ಕರ್ಮಿಗಳಿಗೆ ಮಾಹಿತಿ ನೀಡಿದ್ದ.

ಇದರ ಬೆನ್ನಲ್ಲೇ ಹೊಟೇಲ್ ಗೆ ನುಗ್ಗಿದ ಯುವಕರ ಗುಂಪು ಇಬ್ಬರನ್ನೂ ಎಳೆದಾಡಿ ಹಲ್ಲೆ ನಡೆಸಿದ್ದಾರೆ. ಇದನ್ನು ವಿಡಿಯೋ ಮಾಡಿಕೊಂಡಿದ್ದು, ಇದರ ಒಂದು ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಬುಧವಾರ ವೈರಲ್ ಆಗಿತ್ತು.  ಈ ಸಂಬಂಧ ಇಬ್ಬರನ್ನು ಬಂಧಿಸಲಾಗಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸಲಾಗುತ್ತಿದೆ.

ಇದಾದ ಬಳಿಕ ಸಂತ್ರಸ್ತೆ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು, ತಾನು ಹೊಟೇಲ್ ನಲ್ಲಿ ತಂಗಿದ್ದಾಗ 5ರಿಂದ 6 ಜನರ ಗುಂಪು ಒಳಗೆ ನುಗ್ಗಿ ಹಲ್ಲೆ ನಡೆಸಿ ಬೈಕ್ ಗಳಲ್ಲಿ ನನ್ನನ್ನು ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಹಲ್ಲೆ ನಡೆಸಿ, ಗ್ಯಾಂಗ್ ರೇಪ್ ಮಾಡಿದ್ದಾರೆ.  ಬಳಿಕ ಕಾರಿನಲ್ಲಿ ಕುಳಿತುಕೊಳ್ಳುವಂತೆ ಹೇಳಿದರು. ಕಾರಿನ ಚಾಲಕ ಕೂಡ  ಅತ್ಯಾಚಾರ ನಡೆಸಿದ್ದಾನೆ ಎಂದು ಆರೋಪಿಸಿದ್ದಾರೆ.

ಇದಾದ ಬಳಿಕ ಇತರ ಮೂರು ಸ್ಥಳಗಳಿಗೆ ಕರೆದೊಯ್ದು ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಅವರಿಗೆ ಶಿಕ್ಷೆಯಾಗಬೇಕು ಎಂದು ಮಹಿಳೆ ವಿಡಿಯೋದಲ್ಲಿ ಒತ್ತಾಯಿಸಿದ್ದಾರೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಹಾವೇರಿ ಎಸ್ಪಿ ಅಂಶುಕುಮಾರ್ ಶ್ರೀವಾಸ್ತವ, ಸಂತ್ರಸ್ತೆಯ ವಿಡಿಯೋ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಹಿಳೆ ಹಾನಗಲ್ ಪೊಲೀಸ್ ಠಾಣೆಗೆ ತೆರಳಿ ಹಿರಿಯ ಅಧಿಕಾರಿಗಳು ಹಾಗೂ ಪೊಲೀಸರ ಮುಂದೆ ಹೇಳಿಕೆ ನೀಡಿದ್ದರು.

ಆ ಸಮಯದಲ್ಲಿ ಸಾಮೂಹಿಕ ಅತ್ಯಾಚಾರದ ವಿಚಾರ ಹೊರಬಂದಿರಲಿಲ್ಲ. ಇದೀಗ ಸಂತ್ರಸ್ತೆಯೇ ಘಟನೆಯನ್ನು ವಿವರಿಸಿದ್ದು, ಆಕೆಯ ಹೇಳಿಕೆಯನ್ನು ದಾಖಲಿಸಿಕೊಳ್ಳಲಾಗುವುದು ಎಂದು ಶ್ರೀವಾಸ್ತವ ಹೇಳಿದ್ದಾರೆ.

ಇತ್ತೀಚಿನ ಸುದ್ದಿ