ಜಿ20 ಶೃಂಗಸಭೆ ದಿನಗಣನೆ ಶುರು: ಎರಡು ದಿನ ಮುಂಚಿತವೇ ಭಾರತಕ್ಕೆ ಆಗಮಿಸಲಿದ್ದಾರೆ ಅಮೆರಿಕ ಅಧ್ಯಕ್ಷ ಜೋ ಬೈಡನ್

06/09/2023

ಇದೇ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗಸಭೆ ನಡೆಯಲಿದೆ. ಇದಕ್ಕಾಗಿ ಜಿ20 ನಾಯಕರು ಭಾರತಕ್ಕೆ ಆಗಮಿಸಲಿದ್ದಾರೆ. ಇನ್ನು ಶೃಂಗಸಭೆಗೂ ಎರಡು ದಿನ ಮುಂಚೆಯೇ ಅಂದರೆ ಗುರುವಾರ ಅಮೆರಿಕ ಅಧ್ಯಕ್ಷ ಜೋ ಬೈಡನ್ ಮೊದಲಿಗೆ ಭಾರತಕ್ಕೆ ಆಗಮಿಸಲಿದ್ದಾರೆ.

ಜಕಾರ್ತಾದಲ್ಲಿ ನಡೆಯಲಿರುವ ಆಸಿಯಾನ್ ಭಾರತ ಮತ್ತು ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಭಾಗವಹಿಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 7ರಂದು ಸಂಜೆ ದೆಹಲಿಗೆ ಮರಳಲಿದ್ದಾರೆ. ಶೃಂಗಸಭೆಯ ಪೂರ್ವಭಾವಿಯಾಗಿ ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಬೈಡನ್ ಸೆಪ್ಟೆಂಬರ್ 8ರಂದು ದ್ವಿಪಕ್ಷೀಯ ಸಭೆ ನಡೆಸಲಿದ್ದಾರೆ. ಹೆಚ್ಚಿನ ನಾಯಕರು ಸೆಪ್ಟೆಂಬರ್ 8ರ ಸಂಜೆಯೊಳಗೆ ದೆಹಲಿಗೆ ಆಗಮಿಸುತ್ತಾರೆ.

ಮುಖ್ಯ ಶೃಂಗಸಭೆಯು ಭಾರತ ಮಂಟಪದಲ್ಲಿ ಸೆಪ್ಟೆಂಬರ್ 9ರಂದು ಪ್ರಗತಿ ಮೈದಾನದಲ್ಲಿ ಪ್ರಾರಂಭವಾಗುತ್ತದೆ. ರಿಷಿ ಸುನಕ್, ಇಮ್ಯಾನುಯೆಲ್ ಮ್ಯಾಕ್ರೋನ್, ಓಲಾಫ್ ಸ್ಕೋಲ್ಜ್ ಮತ್ತು ಫ್ಯೂಮಿಯೊ ಕಿಶಿಡಾ ಈ ಶೃಂಗಸಭೆಯಲ್ಲಿ ಭಾಗವಹಿಸುವ ವಿಶ್ವದ ನಾಯಕರ ಪಟ್ಟಿಯಲ್ಲಿದ್ದಾರೆ.

ಆರ್ಥಿಕತೆ, ಆಹಾರ ಭದ್ರತೆ ಮತ್ತು ಹವಾಮಾನ ಬದಲಾವಣೆ ಕುರಿತು ಚರ್ಚೆಗಳನ್ನು ಒಳಗೊಂಡಿರುವ ಸಭೆಗಳು ಮತ್ತು ಚರ್ಚೆಗಳು ಸೆಪ್ಟೆಂಬರ್ 9ರಂದು ನಡೆಯಲಿವೆ. ಆಫ್ರಿಕನ್ ಯೂನಿಯನ್ ಔಪಚಾರಿಕವಾಗಿ G20ಗೆ ಸೇರುತ್ತದೆ.

ಇತ್ತೀಚಿನ ಸುದ್ದಿ

Exit mobile version