ಉದಯಪುರ ಟೈಲರ್ ಹಂತಕರಿಗೂ ಬಿಜೆಪಿಗೂ ನಂಟು ಇದೆ: ಅಶೋಕ್ ಗೆಹ್ಲೋಟ್ ಗಂಭೀರ ಆರೋಪ
ರಾಜಸ್ಥಾನದ ಜೋಧ್ ಪುರದಲ್ಲಿ ಹತ್ಯೆಗೀಡಾದ ಉದಯಪುರ ದರ್ಜಿ ಕನ್ಹಯ್ಯ ಲಾಲ್ ತೆಲಿ ಹಂತಕರು ಬಿಜೆಪಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಗಂಭೀರವಾಗಿ ಆರೋಪಿಸಿದ್ದಾರೆ. ನವೆಂಬರ್ 25 ರಂದು ರಾಜ್ಯದಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸಲು ಕೇಸರಿ ಪಕ್ಷ ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಭಾನುವಾರ ಜೋಧಪುರಕ್ಕೆ ಚುನಾವಣಾ ಪ್ರಚಾರದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಜಸ್ಥಾನ ಮುಖ್ಯಮಂತ್ರಿ, ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ಬದಲು ರಾಜಸ್ಥಾನ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (ಎಸ್ಒಜಿ) ಈ ಪ್ರಕರಣವನ್ನು ನಿರ್ವಹಿಸಿದ್ದರೆ, ತನಿಖೆಯು ತಾರ್ಕಿಕ ಅಂತ್ಯಕ್ಕೆ ಸಾಗುತ್ತಿತ್ತು ಎಂದು ಹೇಳಿದರು.
ಅಮಾನತುಗೊಂಡ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ಪೋಸ್ಟ್ ಮಾಡಿದ್ದಾರೆ ಎಂಬ ಆರೋಪದ ಮೇಲೆ ಕಳೆದ ವರ್ಷ ಜೂನ್ 28 ರಂದು ಉದಯಪುರದ ಅವರ ಅಂಗಡಿಯೊಳಗೆ ಇಬ್ಬರು ದುಷ್ಕರ್ಮಿಗಳು ಕನ್ಹಯ್ಯ ಲಾಲ್ ಅವರ ಶಿರಚ್ಛೇದ ಮಾಡಿದ್ದರು. ಉದಯಪುರ ದರ್ಜಿಯ ಶಿರಚ್ಛೇದನ ಪ್ರಕರಣವು ದೇಶಾದ್ಯಂತ ಆಘಾತವನ್ನೇ ಉಂಟುಮಾಡಿತ್ತು ಮತ್ತು ಸಾರ್ವಜನಿಕ ಆಕ್ರೋಶವನ್ನು ಹುಟ್ಟುಹಾಕಿತ್ತು.