ಉಡುಪಿ: ಕ್ರೈಸ್ತ ಭಾಂಧವರಿಂದ ಸಂಭ್ರಮದ ಮೊಂತಿ ಫೆಸ್ತ್ ಆಚರಣೆ
ಉಡುಪಿ: ಕನ್ಯಾಮರಿಯಮ್ಮನವರ ಜನ್ಮದಿನವಾದ ಮೊಂತಿ ಫೆಸ್ತ್ ಅನ್ನು ಜಿಲ್ಲೆಯಾದ್ಯಂತ ಕ್ರೆಸ್ತ ಸಮುದಾಯದ ಜನರು ಸಂಭ್ರಮದಿಂದ ಶುಕ್ರವಾರ ಆಚರಿಸಿದರು.
ಧರ್ಮಗುರುಗಳು ಸಾರ್ವಜನಿಕ ಸ್ಥಳಗಳಲ್ಲಿ ಆಯಾ ಊರಿನ ಗುರಿಕಾರರು ತಮ್ಮ ಹೊಲಗಳಿಂದ ಆರಿಸಿ ತಂದ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು.
ಪುಟ್ಟ ಮಕ್ಕಳು ಕನ್ಯಾ ಮರಿಯಮ್ಮನವರ ಮೂರ್ತಿಗೆ ಹೂಗಳನ್ನು ಸಮರ್ಪಿಸಿದ ಬಳಿಕ ಜಿಲ್ಲೆಯ ಎಲ್ಲ ಚರ್ಚುಗಳಲ್ಲಿ ಧರ್ಮಗುರುಗಳು ಭತ್ತದ ತೆನೆಯನ್ನು ಆರ್ಶಿವದಿಸಿ ಪವಿತ್ರ ಬಲಿಪೂಜೆಯಲ್ಲಿ ಪಾಲ್ಗೊಂಡರು. ಪವಿತ್ರ ಬಲಿಪೂಜೆಯಲ್ಲಿ ಧರ್ಮಗುರುಗುಳು ಕುಟುಂಬ ಜೀವನ ಹಾಗೂ ಸಮಾಜದಲ್ಲಿ ಮಹಿಳೆಯ ಸ್ಥಾನಮಾನದ ಕುರಿತು ಪ್ರವಚನ ನೀಡಿದರು.
ಉಡುಪಿ ಕ್ರೆಸ್ತ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅತಿ ವಂದನೀಯ ಜೆರಾಲ್ಡ್ ಐಸಾಕ್ ಲೋಬೊ ಅವರು ಕಲ್ಮಾಡಿ ಸ್ಟೆಲ್ಲಾ ಮಾರಿಸ್ ಚರ್ಚಿನಲ್ಲಿ ಹಬ್ಬದ ಬಲಿಪೂಜೆ ಅರ್ಪಿಸಿ ಹೊಸ ತೆನೆಗಳನ್ನು ಆಶೀರ್ವದಿಸಿ ಹಬ್ಬದ ಸಂದೇಶ ನೀಡಿದರು.
ಉಡುಪಿಯ ಶೋಕ ಮಾತಾ ಇಗರ್ಜಿಯಲ್ಲಿ ಜರುಗಿದ ಧಾರ್ಮಿಕ ಕಾರ್ಯಕ್ರಮದಲ್ಲಿ ಚರ್ಚಿನ ಪ್ರಧಾನ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ಹೊಸ ಭತ್ತದ ತೆನೆಯನ್ನು ಆಶೀರ್ವದಿಸಿದರು. ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್ ನಲ್ಲಿ ವಂ|ವಲೇರಿಯನ್ ಮೆಂಡೊನ್ಸಾ, ಶಿರ್ವ ಆರೋಗ್ಯ ಮಾತಾ ಇಗರ್ಜಿಯಲ್ಲಿ ವಂ|ಲೆಸ್ಲಿ ಡಿಸೋಜಾ, ಕುಂದಾಪುರ ಹೋಲಿ ರೋಸರಿ ಚರ್ಚಿನಲ್ಲಿ ವಂ|ಸ್ಟಾನಿ ತಾವ್ರೋ, ಕಾರ್ಕಳದ ಅತ್ತೂರು ಸಂತ ಲಾರೆನ್ಸ್ ಬಾಸಿಲಿಕಾದಲ್ಲಿ ವಂ|ಆಲ್ಬನ್ ಡಿಸೋಜಾ, ಸಾಸ್ತಾನ ಸಂತ ಅಂತೋನಿ ದೇವಾಲಯದಲ್ಲಿ ವಂ|ಸುನೀಲ್ ಡಿಸಿಲ್ವಾ ಹಾಗೂ ಉಡುಪಿ ಧರ್ಮಪ್ರಾಂತ್ಯದ ಯುವ ನಿರ್ದೇಶಕ ವಂ|ಸ್ಟೀವನ್ ಡಿಸೋಜಾ ನೇತೃತ್ವದಲ್ಲಿ ಹಬ್ಬದ ಪ್ರಯುಕ್ತ ಬಲಿಪೂಜೆ ನಡೆದವು. ಇದಲ್ಲದೆ ಜಿಲ್ಲೆಯ ಎಲ್ಲಾ ಚರ್ಚುಗಳಲ್ಲಿ ಸಹ ಹಬ್ಬದ ಬಲಿಪೂಜೆಯನ್ನು ಆಯಾಚರ್ಚುಗಳ ಧರ್ಮಗುರುಗಳ ನೇತೃತ್ವದಲ್ಲಿ ನಡೆದವು.
ಬಲಿಪೂಜೆಯ ಬಳಿಕ ಧರ್ಮಗುರುಗಳು ಪ್ರತಿ ಕುಟುಂಬಕ್ಕೆ ಆಶೀರ್ವದಿಸಿದ ಹೊಸ ಭತ್ತದ ತೆನೆಯನ್ನು ನೀಡಿ ಹರಸಿದರು. ಇದೇ ವೇಳೆ ಚಿಕ್ಕ ಮಕ್ಕಳಿಗೆ ಸಿಹಿತಿಂಡಿ, ಕಬ್ಬುಗಳನ್ನು ಸಹ ವಿತರಿಸಲಾಯಿತು. ಇಗರ್ಜಿಯಿಂದ ಭಕ್ತಿಯಿಂದ ಕೊಂಡು ಬಂದ ಭತ್ತದ ತೆನೆಯನ್ನು ಕುಟುಂಬದ ಹಿರಿಯರು ಮನೆಗೆ ತಂದು ದೇವರ ಪೀಠದ ಮೇಲಿಟ್ಟು ಪ್ರಾರ್ಥನೆ ಸಲ್ಲಿಸಿ, ಹೊಸ ಭತ್ತದ ತೆನೆಗಳನ್ನು ಸುಲಿದು ಕುಟುಂಬದ ಸದಸ್ಯರೊಂದಿಗೆ ಪಾಯಸ ಅಥವಾ ಹಾಲಿನೊಂದಿಗೆ ಸೇವಿಸಿದರು. ಅಲ್ಲದೆ ಮನೆಗಳಲ್ಲಿ ಸಂಪೂರ್ಣ ಸಸ್ಯಹಾರದ ಭೋಜನವನ್ನು ತಯಾರಿಸಿ ಕುಟುಂಬದ ಎಲ್ಲಾ ಸದಸ್ಯರು ನೆಲದ ಮೇಲೆ ಕುಳಿತು ಬಾಳೆ ಎಲೆಯಲ್ಲಿ ಸೇವಿಸಿದರು.
ಮೊಂತಿ ಹಬ್ಬ ಅಥವಾ ತೆನೆ ಹಬ್ಬದ ಹಿನ್ನಲೆ:
ಮಂಗಳೂರು ಹೊರ ವಲಯದ ಬಂಟ್ವಾಳ ತಾಲೂಕಿನ ಫರಂಗಿಪೇಟೆಯಲ್ಲಿ 250 ವರ್ಷಗಳ ಹಿಂದೆ ಮೊಂತಿ ಫೆಸ್ತ್ ಆಚರಣ ಆರಂಭವಾಯಿತು ಎನ್ನುವುದು ಒಂದು ಉಲ್ಲೇಖ. ಸಂತ ಫ್ರಾನ್ಸಿಸ್ ಅಸಿಸಿ ಅವರಿಗೆ ಸಮರ್ಪಿಸಿದ ಮಠವೊಂದು ಇಲ್ಲಿ ಸ್ಥಾಪನೆಯಾಗಿತು. ನೇತ್ರಾವತಿ ನದಿಯ ಉತ್ತರ ದಿಕ್ಕಿನಲ್ಲಿ ಬೆಟ್ಟದ ಮೇಲಿರುವ ಈ ಪುರಾತನ ಸ್ಥಳಕ್ಕೆ ಮೊಂತೆ ಮರಿಯಾನೊ ಅಥವಾ ಮೌಂಟ್ ಅಫ್ ಮೇರಿ ಎಂದು ಹೆಸರಿಸಲಾಗಿತ್ತು. ಇದರ ಸ್ಪೂರ್ಥಿ ಪಡೆದು ಕರಾವಳಿಯ ಕೆಥೋಲಿಕ್ ಕ್ರೈಸ್ತ ಪೂರ್ವಜರು ಸೆಪ್ಟಂಬರ್ 8 ರಂದು ಮೇರಿ ಮಾತೆಯ ಜನ್ಮ ದಿನದಂದೆ ತೆನೆ ಹಬ್ಬವನ್ನು ಆಚರಿಸಲು ಆರಂಭಿಸಿದರು ಎನ್ನುವುದಾಗಿದೆ.
ತೆನೆ ಹಬ್ಬ ಆಚರಣೆ 9 ದಿನ ಮುಂಚಿತವಾಗಿ ಅಂದರೆ ಅಗಸ್ಟ್ 30 ರಿಂದ ಚರ್ಚ್ ಗಳಲ್ಲಿ ವಿಶೇಷವಾಗಿ ನೊವೇನಾ ಪ್ರಾರ್ಥನೆ ಸಲ್ಲಿಸುವುದರೊಂದಿಗೆ ಮೊಂತಿ ಹಬ್ಬದ ಆಚರಣೆಗೆ ನಾಂದಿಯಾಗುತ್ತದೆ. 9 ದಿನಗಳ ಕಾಲ ನಡೆಯುವ ನೊವೇನಾ ಪ್ರಾರ್ಥನೆಯಲ್ಲಿ ವಿಶೇಷವಾಗಿ ಚಿಕ್ಕ ಮಕ್ಕಳು ಪ್ರತಿದಿನ ಹೂವುಗಳನ್ನು ಕೊಂಡೊಯ್ದು ಮೇರಿ ಮಾತೆಗೆ ಸಮರ್ಪಿಸಿ ಗೀತೆಗಳನ್ನು ಹಾಡುವ ಮೂಲಕ ಸ್ತುತಿಸುತಾರೆ.
ಕೊನೆಯ ದಿನ ಅಂದರೆ ಸೆಪ್ಟಂಬರ್ 8 ರಂದು ಹಬ್ಬದ ಸಂಭ್ರಮವನ್ನು ಸಾಮುದಾಯಿಕವಾಗಿ ಮತ್ತು ಕೌಟುಂಬಿಕವಾಗಿ ಆಚರಿಸುತ್ತಾರೆ. ಅಂದು ಹೊಸ ಭತ್ತದ ತೆನೆಗಳನ್ನು ಚರ್ಚ್ ಗೆ ಕೊಂಡೊಯ್ದು ಆಶೀರ್ವಚನ ಮಾಡಿ, ಮೇರಿ ಮಾತೆಗೆ ಪುಷ್ಪಾರ್ಚನೆ ನಡೆಯುತ್ತೆದ. ಬಳಿಕ ಸಂಭ್ರಮದ ಬಲಿ ಪೂಜೆ ನೆರವೇರುತ್ತದೆ. ಈ ಧಾರ್ಮಿಕ ಕಾರ್ಯಕ್ರಮಗಳ ಬಳಿಕ ಆಶೀರ್ವದಿಸಿದ ಭತ್ತದ ತೆನೆಗಳನ್ನು ಪ್ರತಿ ಕುಟುಂಬಕ್ಕೆ ವಿತರಿಸಲಾಗುತ್ತದೆ. ಹೂವು ಕೊಂಡು ಹೋದ ಮಕ್ಕಳಿಗೆ ಸಿಹಿ ತಿಂಡಿಯನ್ನು ಹಾಗೂ ಕಬ್ಬನ್ನು ಹಂಚಲಾಗುತ್ತದೆ.
ನವೆಂ ಜೆವಾಣ್ ಅಂದರೆ ಹೊಸ ಭೋಜನ ಎಂದರ್ಥ. ಸಸ್ಯಾಹಾರಿ ಭೋಜನವು ಈ ದಿನದ ವಿಶೇಷವಾಗಿದ್ದು, ಕನಿಷ್ಟ 3 ಅಥವಾ 5 ಅಥವಾ 7 ಬಗೆಯ ಸಸ್ಯಾಹಾರಿ ಖಾದ್ಯಗಳಾದರೂ ಇರಬೇಕಾಗುತ್ತದೆ. ಅದರಲ್ಲೂ ಕೆಸುವಿನ ದಂಟು, ಹರಿವೆ ದಂಟು, ಹೀರೆ, ಬೆಂಡೆಕಾಯಿಗೆ, ಅಲಸಂಡೆ ತರಕಾರಿಗಳಿಗೆ ಹೆಚ್ಚಿನ ಆದ್ಯತೆ. ಪಾಯಸ ಈ ಭೋಜನದ ಅವಿಭಾಜ್ಯ ಅಂಗ. ಬಾಳೆ ಎಲೆಯಲ್ಲಿ ಊಟ ಮಾಡುವುದೂ ಇದರ ಇನ್ನೊಂದು ವೈಶಿಷ್ಟ್ಯ.