“ಉಡುಪಿ ಜಿಲ್ಲೆಗೆ ಇನ್ನೂ ಒಲಿಯದ ಸರ್ಕಾರಿ ವೈದ್ಯಕೀಯ ಕಾಲೇಜು”
ಉಡುಪಿ: ಹಲವು ವರ್ಷಗಳಿಂದ ಉಡುಪಿ ಜಿಲ್ಲೆಯ ಜನರ ಬೇಡಿಕೆಯಾಗಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಇನ್ನೂ ಕೂಡ ಸ್ಥಾಪನೆಗೊಂಡಿಲ್ಲ. ಜಿಲ್ಲೆಯ ಬಡ ವಿದ್ಯಾರ್ಥಿಗಳು ಇಲ್ಲಿಯ ಖಾಸಗಿ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಪಡೆಯುವುದು ಅಸಾಧ್ಯದ ಮಾತು ಎಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಕಾರ್ಯದರ್ಶಿ ಮಸೂದ್ ಮನ್ನಾ ಹೇಳಿದ್ದಾರೆ.
ಜಿಲ್ಲೆಯಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಇಲ್ಲದ ಕಾರಣ ಹಲವು ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ನೇರ ಹೊಣೆ ಸರ್ಕಾರವೇ ಆಗಿರುತ್ತದೆ. ಈ ಎಲ್ಲಾ ಬೆಳವಣಿಗೆಗಳನ್ನು ಗಮನಿಸಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ, ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಫೆಬ್ರವರಿ 26 ರಂದು ಜಿಲ್ಲಾಧಿಕಾರಿಯ ಮುಖಾಂತರ ಸರಕಾರಕ್ಕೆ ಮನವಿ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
ಆದರೆ ಈ ಮನವಿಗೆ ಸರ್ಕಾರ ಕಿಂಚಿತ್ತು ಕಾಳಜಿ ತೋರಿಸದೆ ಇರುವ ಕಾರಣ, ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾ ಸಮಿತಿಯು ಈ ಹೋರಾಟದ ಮುಂದುವರಿದ ಭಾಗವಾಗಿ ಇಲ್ಲಿ ಇರುವಂತಹ ಪ್ರಗತಿಪರ ಚಿಂತಕರನ್ನು, ವಿದ್ಯಾರ್ಥಿ ಮತ್ತು ಸಾಮಾಜಿಕ ಸಂಘಟನೆಗಳನ್ನು ಒಟ್ಟು ಗೂಡಿಸಿ ಒಂದು ಆಂದೋಲನ ರೂಪಿಸಲು ಎಲ್ಲಾ ಸಿದ್ಧತೆ ನಡೆಸುತ್ತಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.