ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರದಿರುವುದು ಖೇದಕರ: ಡಾ.ಪಿ.ವಿ.ಭಂಡಾರಿ | ಉಡುಪಿ ಸುದ್ದಿಗಳು
ಉಡುಪಿ: ದೇಶದಲ್ಲಿ ಆತ್ಮಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದರೂ ಸರಕಾರ ಈವರೆಗೆ ಆತ್ಮಹತ್ಯೆ ತಡೆಗೆ ರಾಷ್ಟ್ರೀಯ ನೀತಿಯನ್ನು ಜಾರಿಗೆ ತರದಿರುವುದು ಖೇದಕರ. ಆತ್ಮಹತ್ಯೆಗೆ ಕಾರಣವಾಗಿರುವ ಮಾನಸಿಕ ಕಾಯಿಲೆ ಹಾಗೂ ಮದ್ಯ ವ್ಯಸನಕ್ಕೆ ಸಂಬಂಧಿಸಿ ಎಲ್ಲ ಜಿಲ್ಲೆಗಳಲ್ಲಿಯೂ ಸರಿಯಾದ ಚಿಕಿತ್ಸೆ ಸಿಗುವಂತಾಗ ಬೇಕು. ಈ ನಿಟ್ಟಿನಲ್ಲಿ ಸರಕಾರ ಕಾರ್ಯಪ್ರವೃತ್ತವಾಗಬೇಕು. ಆಗ ಮಾತ್ರ ಆತ್ಮಹತ್ಯೆಯನ್ನು ತಡೆಯಲು ಸಾಧ್ಯವಾಗುತ್ತದೆ ಎಂದು ಹಿರಿಯ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೇಳಿದ್ದಾರೆ.
ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಮತ್ತು ಉಡುಪಿ ಹಾಗೂ ಮಂಗಳೂರು ಮನೋವೈದ್ಯರ ಸೊಸೈಟಿ ವತಿಯಿಂದ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದೊಂದಿಗೆ ಆತ್ಮಹತ್ಯೆೆ ತಿಳುವಳಿಕೆ ಕುರಿತು ಜಿಲ್ಲೆಯ ಪತ್ರಕರ್ತರಿಗೆ ಶುಕ್ರವಾರ ಬ್ರಹ್ಮಗಿರಿಯ ಐಎಂಎ ಭವನದಲ್ಲಿ ಹಮ್ಮಿಕೊಳ್ಳಲಾದ ಕಾರ್ಯಾಗಾರದಲ್ಲಿ ‘ಆತ್ಮಹತ್ಯೆ: ಮಾನಸಿಕ ಅಂಶಗಳು’ ವಿಷಯದ ಕುರಿತು ಅವರು ಮಾತನಾಡುತಿದ್ದರು.
ಭಾರತದಲ್ಲಿ ಪ್ರತಿ ವರ್ಷ 28ಲಕ್ಷ ಮಂದಿ ಆತ್ಮಹತ್ಯೆಗೆ ಯತ್ನ ಮಾಡುತ್ತಾರೆ. ಇಂದು ಸರಕಾರಿ ಶಾಲೆಗಳು ಕೂಡ ಶೇ.100 ಫಲಿತಾಂಶದ ಹಿಂದೆ ಹೋಗುತ್ತಿದೆ. ಇದರಿಂದ ಮಕ್ಕಳ ಮೇಲೆ ಒತ್ತಡ ಹೆಚ್ಚಾಗುತ್ತಿದೆ. ಸ್ಪರ್ಧೆ, ಹೋಲಿಕೆ, ಹೆಚ್ಚಿನ ನಿರೀಕ್ಷೆ, ಪರೀಕ್ಷೆ ಅನುರ್ತ್ತೀ ಸೇರಿದಂತೆ ವಯೋ ಸಹಜ ಸಮಸ್ಯೆಗಳಿಂದಾಗಿ ಪ್ರತಿದಿನ 28 ಮಕ್ಕಳು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ದುರ್ಬಲ ವ್ಯಕ್ತಿತ್ವದವರು ಮಾತ್ರ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆಂಬುದು ಶುದ್ಧ ಸುಳ್ಳು ಎಂದರು.
ಕಾರ್ಯಾಗಾರವನ್ನು ಉದ್ಘಾಟಿಸಿದ ಭಾರತೀಯ ಮನೋವೈದ್ಯರ ಸೊಸೈಟಿ ಕರ್ನಾಟಕ ಶಾಖೆ ಅಧ್ಯಕ್ಷ ಡಾ.ಪಿ.ಕೆ.ಕಿರಣ್ ಕುಮಾರ್ ಮಾತನಾಡಿ, ಇಂದು ಬಹುತೇಕ ಆತ್ಮಹತ್ಯೆಗಳಿಗೆ ಕಾರಣ ಖಿನ್ನತೆ. ಈ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತನೆ ಮಾಡಬೇಕಾಗಿದೆ. ವರ್ತನೆ, ಮಾತುಗಳಿಂದ ಆತ್ಮಹತ್ಯೆ ಮಾಡಿಕೊಳ್ಳುವ ವರನ್ನು ಗುರುತಿಸಬಹುದಾಗಿದೆ. ಅದನ್ನು ಅರ್ಥ ಮಾಡಿಕೊಂಡರೆ ಆತ್ಮಹತ್ಯೆ ಯನ್ನು ತಡೆಯಬಹುದು ಎಂದು ಅವರು ತಿಳಿಸಿದರು.
ವೇದಿಕೆಯಲ್ಲಿ ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಶ್ ಶೆಟ್ಟಿ ಅಲೆವೂರು, ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ, ಕೋಶಾಧಿಕಾರಿ ಉಮೇಶ್ ಮಾರ್ಪಳ್ಳಿ, ಜಿಲ್ಲಾ ಮನೋರೋಗ ತಜ್ಞ ಡಾ.ವಾಸುದೇವ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಚಾಲಕ ಡಾ.ರವೀಂದ್ರ ಮುನೋಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಡುಪಿ ಡಾ.ಎ.ವಿ.ಬಾಳಿಗ ಆಸ್ಪತ್ರೆಯ ಮನಶಾಸ್ತ್ರಜ್ಞ ನಾಗರಾಜ ಮೂರ್ತಿ ವಂದಿಸಿದರು. ಆಪ್ತ ಸಮಾಲೋಚಕಿ ಪದ್ಮ ರಾಘವೇಂದ್ರ, ಆಡಳಿತಾಧಿಕಾರಿ ಸೌಜನ್ಯ ಶೆಟ್ಟಿ ನಿರೂಪಿಸಿದರು.
ಬಳಿಕ ನಡೆದ ಕಾರ್ಯಾಗಾರದಲ್ಲಿ ‘ಆತ್ಮಹತ್ಯೆ: ಆರ್ಥಿಕ -ಸಾಮಾಜಿಕ ಅಂಶ ಗಳು’ ಕುರಿತು ಹಿರಿಯ ಪತ್ರಕರ್ತ ರಾಜರಾಮ್ ತಲ್ಲೂರು ಮತ್ತು ‘ಆತ್ಮಹತ್ಯೆ ಮತ್ತು ಮಾಧ್ಯಮ ವರದಿ’ ಕುರಿತು ಮನೋವೈದ್ಯ ಡಾ.ದೀಪಕ್ ಮಲ್ಯ ಮಾತ ನಾಡಿದರು. ಬಳಿಕ ಮಾಧ್ಯಮದವರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.
ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದುಯೋಗಾಥಾನ್ ಕಾರ್ಯಕ್ರಮ: ವೀಣಾ ಬಿ.ಎನ್.
ಉಡುಪಿ: ಜಿಲ್ಲೆಯಲ್ಲಿ ಸೆಪ್ಟಂಬರ್ 17 ರಂದು 15 ಸಾವಿರ ಮಂದಿಯಿಂದ ಏಕಕಾಲದಲ್ಲಿ ಯೋಗಾಭ್ಯಾಸ ಕಾರ್ಯಕ್ರಮ ನಡೆಯಲಿದ್ದು, ಈ ಕುರಿತಂತೆ ಎಲ್ಲಾಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಅಪರಜಿಲ್ಲಾಧಿಕಾರಿ ವೀಣಾ ಬಿ.ಎನ್. ಸೂಚಿಸಿದರು.
ಉಡುಪಿ ತಾಲೂಕುಕಚೇರಿ ಸಭಾಂಗಣದಲ್ಲಿ ಯೋಗಾಥಾನ್ ಕಾರ್ಯಕ್ರಮ ಆಯೋಜನೆ ಕುರಿತ ಪೂರ್ವಭಾವಿ ಸಭೆಯಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರವು ಈಗಾಗಲೇ ಯೋಗವನ್ನು ಶಾಲಾ ಮತ್ತುಕಾಲೇಜು ಶಿಕ್ಷಣದಲ್ಲಿ ಪಠ್ಯವನ್ನಾಗಿ ಸೇರ್ಪಡೆ ಮಾಡಿದ್ದು, ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಈ ಬಗ್ಗೆ ಹೆಚ್ಚಿನಅರಿವು ಮೂಡಿಸುವಉದ್ದೇಶದಿಂದರಾಜ್ಯಾದ್ಯಂತ ಸೆಪ್ಟಂಬರ್ 17 ರಂದುಏಕಕಾಲದಲ್ಲಿ 5 ಲಕ್ಷಜನರಿಂದಯೋಗಾಸನವನ್ನು ಆಯೋಜಿಸಿದ್ದು, ಉಡುಪಿ ಜಿಲ್ಲೆಯಿಂದ 15 ಸಾವಿರ ಮಂದಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಗುರಿ ನೀಡಲಾಗಿದೆ ಎಂದರು.
ಮಣಿಪಾಲದ ಮಾಹೆ ಕ್ರೀಡಾಂಗಣದಲ್ಲಿ ಯೋಗಾಥಾನ್ ಆಯೋಜಿಸಲು ಈಗಾಗಲೇ ಸ್ಥಳ ನಿಗದಿಪಡಿಸಿದ್ದು, ಜಿಲ್ಲೆಯ 20 ಪ್ರೌಢಶಾಲೆ, 14 ಪದವಿ ಪೂರ್ವಕಾಲೇಜು, 11 ಪದವಿ ಕಾಲೇಜು, 5 ಐಟಿಐ, 5 ಪ್ಯಾರಾ ಮೆಡಿಕಲ್ ಕಾಲೇಜುಗಳಿಂದ ಕನಿಷ್ಠ 200 ವಿದ್ಯಾರ್ಥಿಗಳನ್ನು ಕಾರ್ಯಕ್ರಮಕ್ಕೆ ಕರೆತರಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಸಂಬಂಧಪಟ್ಟ ಶಾಲಾ-ಕಾಲೇಜುಗಳ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.
ಕಾರ್ಯಕ್ರಮದಲ್ಲಿ 45 ನಿಮಿಷಗಳ ಕಾಲ ವಿವಿಧ ಯೋಗಾಸನಗಳ ಪ್ರದರ್ಶನ ನಡೆಯಲಿದ್ದು, 150ಕ್ಕೂ ಹೆಚ್ಚು ಯೋಗ ಶಿಕ್ಷಕರು ಶಾಲಾ ಕಾಲೇಜುಗಳಿಗೆ ತೆರಳಿ ವಿದ್ಯಾರ್ಥಿಗಳಿಗೆ ಯೋಗಾಸನಗಳ ತರಬೇತಿ ನೀಡಲಿದ್ದು, ಯೋಗಾಥಾನ್ ನಲ್ಲಿ ಭಾಗವಹಿಸುವ ವಿದ್ಯಾರ್ಥಿಗಳನ್ನು ಆನ್ ಲೈನ್ ನಲ್ಲಿ ನೋಂದಣಿ ಮಾಡುವಂತೆ ತಿಳಿಸಿದ ಅಪರ ಜಿಲ್ಲಾಧಿಕಾರಿಗಳು, ಎಲ್ಲಾ ಸರ್ಕಾರಿ ಕಚೇರಿಗಳ ಸಿಬ್ಬಂದಿಗಳು ಹಾಗೂ ಶಿಕ್ಷಕರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಸೂಚಿಸಿದರು.
ಸಭೆಯಲ್ಲಿಉಡುಪಿ ತಹಸೀಲ್ದಾರ್ ಶ್ರೀನಿವಾಸ ಮೂರ್ತಿ, ಡಿಡಿಪಿಐ ಶಿವರಾಜ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಾರುತಿ, ಲೀಡ್‌ಕಾಲೇಜು ಪ್ರಾಂಶುಪಾಲ ಡಾ.ಭಾಸ್ಕರ್ ಶೆಟ್ಟಿ, ಯುವ ಸಬಲೀಕರಣ ಮತ್ತುಕ್ರೀಡಾಇಲಾಖೆಯ ಸಹಾಯಕ ನಿರ್ದೇಶಕಡಾ.ರೋಷನ್‌ಕುಮಾರ್ ಶೆಟ್ಟಿ ಹಾಗೂ ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು ಉಪಸ್ಥಿತರಿದ್ದರು.
ಆಟೋ ರಿಕ್ಷಾದರ ಪರಿಷ್ಕರಣೆಕುರಿತು ಸಭೆ
ಉಡುಪಿ: ಜಿಲ್ಲೆಯಆಟೋರಿಕ್ಷಾದರ ಪರಿಷ್ಕರಣೆ ಮತ್ತು 2012 ಏಪ್ರಿಲ್ 21ರಅಧಿಸೂಚನೆ ಮಾರ್ಪಾಡುಗೊಳಿಸುವ ಕುರಿತು ಸೆಪ್ಟಂಬರ್ 14 ರಂದು ಮಧ್ಯಾಹ್ನ 2:30 ಕ್ಕೆ ರಜತಾದ್ರಿಯ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಆಟೋರಿಕ್ಷಾ ಸಂಘಟನೆಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಬಳಕೆದಾರರ ವೇದಿಕೆಯವರ ಹಾಗೂ ಸಾರ್ವಜನಿಕ ಹಿತದೃಷ್ಠಿಯಿಂದ ಕೂಡಿದ ಎಲ್ಲಾ ಸಂಘ-ಸಂಸ್ಥೆ ಮತ್ತು ಸಾರ್ವಜನಿಕರ ಸಭೆಯನ್ನು ಹಮ್ಮಿಕೊಳ್ಳಲಾಗಿದೆ ಎಂದುಜಿಲ್ಲಾ ಪ್ರಾದೇಶಿಕ ಸಾರಿಗೆ ಅಧಿಕಾರಗಳ ಪ್ರಕಟಣೆ ತಿಳಿಸಿದೆ.
ಕೌಶಲ್ಯಭರಿತ ಶಿಕ್ಷಣ ನೀಡುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಉದ್ದೇಶ – ಬಿಷಪ್ ಜೆರಾಲ್ಡ್ ಲೋಬೊ
ಉಡುಪಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಕೇವಲ ಮಾನಸಿಕ ಬೆಳವಣಿಗೆ ಪೂರಕವಾದ ಶಿಕ್ಷಣ ನೀಡುವುದರೊಂದಿಗೆ ಮೌಲ್ಯಾಧಾರಿತ ಶಿಕ್ಷಣ ವನ್ನು ನೀಡುವ ಮಹತ್ವದ ಜವಾಬ್ದಾರಿಯನ್ನು ಹೊಂದಿದ್ದಾರೆ ಎಂದು ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಧರ್ಮಾಧ್ಯಕ್ಷ ಡಾ.ಜೆರಾಲ್ಡ್ ಐಸಾಕ್ ಲೋಬೊ ಅಭಿಪ್ರಾಯಪಟ್ಟರು.
ಶನಿವಾರ ಕಥೊಲಿಕ್ ಎಜುಕೇಶನಲ್ ಸೊಸೈಟಿ ಉಡುಪಿ ಧರ್ಮಪ್ರಾಂತ್ಯದ ವತಿಯಿಂದ ಉಡುಪಿ ಚರ್ಚ್ ವಠಾರದಲ್ಲಿರುವ ಧರ್ಮಾಧ್ಯಕ್ಷರ ನಿವಾಸದ ನೆಲಮಹಡಿಯ ಆವೆ ಮರಿಯಾ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಮತ್ತು ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣ ಕೇವಲ ಜ್ಞಾನ ಸಂಪಾದನೆಯಲ್ಲ ಬದಲಾಗಿ ಅದು ಮಾನವನ ವಿಕಾಸವಾಗಿದೆ. ಶಿಕ್ಷಣ ಎಂದರೆ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಯಾಗಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಶಾಲೆಗಳ ಹೆಚ್ಚಿನ ಗಮನ ಇಂದು ಫಲಿತಾಂಶದೆಡೆಗೆ ಇದ್ದು, ಶಿಕ್ಷಣ ಮುಖ್ಯವಾಗಿ ಮಕ್ಕ ದೇಹ ಮಾನಸಿಕ ಬೆಳವಣಿಗೆ, ದೈಹಿಕ ಬೆಳವಣಿಗೆ, ಹೃದಯ ವೈಶಾಲ್ಯತೆ ಮತ್ತು ಆತ್ಮದ ಬೆಳವಣಿಗೆ ಯಾದಾಗ ಮಾತ್ರ ನೈಜ ಶಿಕ್ಷಣ ನಮ್ಮ ಮಕ್ಕಳಿಗೆ ಲಭಿಸಿದಂತಾಗುತ್ತದೆ. ಕ್ರೈಸ್ತ ಶಿಕ್ಷಣ ಸಂಸ್ಥೆಗಳು ಸದಾ ಮಕ್ಕಳಿಗೆ ಮೌಲ್ಯಯುತ ಶಿಕ್ಷಣ ನೀಡುವಲ್ಲಿ ತಮ್ಮ ಪಾತ್ರವನ್ನು ವಹಿಸುತ್ತಿವೆ.
ಕೇಂದ್ರ ಸರಕಾರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದು, ಪಠ್ಯ ಪುಸ್ತಕದ ಜ್ಞಾನದ ಜೊತೆಗೆ ಕೌಶಲ್ಯಭರಿತ ಶಿಕ್ಷಣ ಮಕ್ಕಳಿಗೆ ಲಭಿಸಬೇಕು ಎನ್ನುವುದು ಈ ನೀತಿಯ ಮುಖ್ಯ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಶಿಕ್ಷಕರು ಸಂಪೂರ್ಣವಾಗಿ ಸಿದ್ದಗೊಳ್ಳಬೇಕಿದೆ ಎಂದರು.
ಸಮಾಜದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ನೀಡುವ ಶಿಕ್ಷಣ ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಒಂದು ದೇಶ ಅಭಿವೃದ್ಧಿ ಹೊಂದಬೇಕಾಗದರೆ ಅದರಲ್ಲಿ ಶಿಕ್ಷಕರ ಪಾತ್ರ ಹಿರಿದಾದುದು. ಶಿಕ್ಷಕರು ಮಕ್ಕಳಲ್ಲಿನ ಅನನ್ಯ ಪ್ರತಿಭೆಯನ್ನು ಗುರುತಿಸಿ ಅದನ್ನು ಪೊಷೀಸುವ ಕೆಲಸ ಮಾಡಿದಾಗ ಅವರ ವೃತ್ತಿಗೆ ನಿಜವಾದ ಸಾರ್ಥಕತೆ ಲಭಿಸುತ್ತದೆ ಎಂದರು.
ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಿಕ್ಷಣ ಇಲಾಖೆ ಸಚಿವಾಲಯದ ನಿವೃತ್ತ ಶಾಖಾಧಿಕಾರಿ ಅಕ್ಬರ್ ಆಲಿ ಭಾಗವಹಿಸಿ ಶುಭ ಹಾರೈಸಿದರು.
ಧರ್ಮಪ್ರಾಂತ್ಯ ಆಡಳಿತಕ್ಕೆ ಒಳಪಟ್ಟ ಶಾಲಾ, ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಕಳೆದ ಶೈಕ್ಷಣಿಕ ವರ್ಷದಲ್ಲಿ ನಿವೃತ್ತರಾದ ಶಿಕ್ಷಕರು ಹಾಗೂ ಶಿಕ್ಷಕೇತರ ಸಿಬ್ಬಂದಿಯನ್ನು, ಕಳೆದ ಶೈಕ್ಷಣಿಕ ವರ್ಷದಲ್ಲಿ ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳನ್ನು, ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ಕಳೆದ ಒಂದು ವರ್ಷದಲ್ಲಿ ಉಡುಪಿ ಧರ್ಮಪ್ರಾಂತ್ಯದ ಕೆಥೊಲಿಕ್ ಶಿಕ್ಷಣ ಸೊಸೈಟಿ ಆಡಳಿತಕ್ಕೊಳಪಟ್ಟ ಶಾಲೆಗಳಲ್ಲಿ ನಿಧನರಾದ ಶಿಕ್ಷಕರಿಗೆ ವಿದ್ಯಾರ್ಥೀಗಳಿಗೆ ಶೃದ್ಧಾಂಜಲಿ ಅರ್ಪಿಸಲಾಯಿತು.
ಕಾರ್ಯಕ್ರಮದಲ್ಲಿ ಉಡುಪಿ ಸಂತ ಮೇರಿ ವಿದ್ಯಾಸಂಸ್ಥೆಗಳ ಸಂಚಾಲಕ ವಂ.ಚಾರ್ಲ್ಸ್ ಮಿನೇಜಸ್ ಸ್ವಾಗತಿಸಿ ಕೆಥೊಲಿಕ್ ಶಿಕ್ಷಣ ಸೊಸೈಟಿ ಉಡುಪಿ ಧರ್ಮಪ್ರಾಂತ್ಯ ಕಾರ್ಯದರ್ಶಿ ವಂ.ವಿನ್ಸೆಂಟ್ ಕ್ರಾಸ್ತಾ ವಂದಿಸಿದರು. ವಿನಯ್ ಸುವರ್ಣ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka