ಉದ್ಯಮಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ: ಲಿಂಬಾವಳಿ ಸೇರಿದಂತೆ 6 ಜನರ ವಿರುದ್ಧ ಎಫ್ ಐಆರ್
ರಾಮನಗರ: ಉದ್ಯಮಿಯೊಬ್ಬರು ಮಾಜಿ ಸಚಿವ ಅರವಿಂದ್ ಲಿಂಬಾವಳಿ ಸಹಿತ ಒಟ್ಟು 6 ಜನರ ಹೆಸರು ಬರೆದಿಟ್ಟು ತನ್ನ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಂಗಳೂರು ದಕ್ಷಿಣ ತಾಲೂಕು ನೆಟ್ಟಗೆರೆ ಬಳಿಯಲ್ಲಿ ನಡೆದಿದೆ.
ಹೊಸ ವರ್ಷಾಚರಣೆಗಾಗಿ ಕುಟುಂಬ ಸಹಿತವಾಗಿ ರಾಮನಗರದ ಕಗ್ಗಲೀಪುರ ಸಮೀಪದ ನೆಟ್ಟಗೆರೆ ಬಳಿಯ ರೆಸಾರ್ಟ್ ಗೆ ಬಂದಿದ್ದ ಉದ್ಯಮಿ ಪ್ರದೀಪ್, ಬೆಳಗ್ಗೆ ಶಿರಾಗೆ ಹೋಗುವುದಾಗಿ ಹೇಳಿ ರೆಸಾರ್ಟ್ ನಿಂದ ಭಾನುವಾರ ಬೆಳಗ್ಗೆ ಒಬ್ಬರೇ ಬೆಂಗಳೂರಿನ ತಮ್ಮ ನಿವಾಸಕ್ಕೆ ಹೋಗಿ ಡೆತ್ ನೋಟ್ ಬರೆದಿದ್ದಾರೆ. ಬಳಿಕ ರೆಸಾರ್ಟ್ ಗೆ ವಾಪಸ್ ಬರುವಾಗ ಕಾರಿನಲ್ಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಡೆತ್ ನೋಟ್ ನಲ್ಲಿ ತಮ್ಮ ಸಾವಿಗೆ ಕಾರಣ ತಿಳಿಸಿರುವ ಪ್ರದೀಪ್, ಬೆಂಗಳೂರಿನ ಹೆಚ್ ಎಸ್ ಲೇಔಟ್ ಬಳಿ ರೆಸಾರ್ಟ್ ತೆರೆಯಲು 5 ಮಂದಿ ನನ್ನ ಬಳಿ ಮಾತನಾಡಿ, ಒಂದೂವರೆ ಕೋಟಿ ರೂ. ಹಣ ಪಡೆದುಕೊಂಡಿದ್ದರು. ನನ್ನನ್ನು ಪಾಲುದಾರನನ್ನಾಗಿ ಮಾಡುವುದಾಗಿ ಭರವಸೆ ನೀಡಿದ್ದರು. ಹೀಗಾಗಿ ಮನೆ ಮಾರಿ, ಸಾಕಷ್ಟು ಸಾಲ ಮಾಡಿ ಹಣ ನೀಡಿದ್ದೆ. ಆದರೆ, ಪಾಲುದಾರಿಕೆ ಹೆಸರಿನಲ್ಲಿ ನನಗೆ ಮೋಸ ಮಾಡಿದ್ದಾರೆ. ಒಟ್ಟು ಎರಡೂವರೆ ಕೋಟಿ ಹಣ ನನಗೆ ಬರಬೇಕು ಎಂದು ಬರೆದುಕೊಂಡಿದ್ದಾರೆ.
ಈ ನಡುವೆ ರಾಜಕಾರಣಿಯೊಬ್ಬರು ರಾಜಿ ಮಾಡುವ ಪ್ರಯತ್ನ ಮಾಡಿದರಾದರೂ ನನಗೆ ಪೂರ್ಣ ಹಣ ಕೊಡದೇ ಮೋಸ ಮಾಡಲಾಗಿದೆ. ಈ ಬಗ್ಗೆ ಕೇಳಿದರೆ ಆ ರಾಜಕಾರಣಿ ನನಗೆ ಸಹಾಯ ಮಾಡಿಲ್ಲ. ನನ್ನ ಸಾವಿಗೆ 6 ಜನರು ಕಾರಣ ಎಲ್ಲರಿಗೂ ಶಿಕ್ಷೆಯಾಗಬೇಕು ಎಂದು ಡೆತ್ ನೋಟ್ ನಲ್ಲಿ ಪ್ರದೀಪ್ ಬರೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಉದ್ಯಮಿಯ ಪತ್ನಿ ನಮಿತಾ ಅವರ ದೂರಿನನ್ವಯ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ 6 ಜನರ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LwWxa0YtfZe3V04Rgx7ZIV
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw