ಉದ್ಯೋಗ ಕಳೆದುಕೊಂಡಿರುವ ಬೀಡಿ ಕಾರ್ಮಿಕರಿಗೆ ಸಿಹಿಸುದ್ದಿ
ಮಂಗಳೂರು: ಕೋವಿಡ್ ಮಾರ್ಗಸೂಚಿ ಯನ್ನು ಅನುಸರಿಸಿ, ಬೀಡಿ ಉದ್ಯಮ ಆರಂಭಿಸಲು ದ.ಕ.ಜಿಲ್ಲಾ ಉಸ್ತುವಾರಿ ಕೋಟ ಶ್ರೀನಿವಾಸ್ ಪೂಜಾರಿ ಸೂಚನೆ ನೀಡಿದ್ದು, ಬೀಡಿ ಉದ್ಯಮದ ಪುನರಾರಂಭಕ್ಕೆ ಅವಕಾಶ ನೀಡಲಾಗಿದೆ ಎಂದು ಸಹಾಯಕ ಕಾರ್ಮಿಕ ಆಯುಕ್ತರು ತಿಳಿಸಿದ್ದಾರೆ.
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 4 ಲಕ್ಷಕ್ಕೂ ಅಧಿಕ ಬೀಡಿ ಕಾರ್ಮಿಕರು ಲಾಕ್ ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿದ್ದಾರೆ. ಮನೆಯಲ್ಲಿಯೇ ಕುಳಿತು ಕೆಲಸ ಮಾಡುವ ಬೀಡಿ ಕಾರ್ಮಿಕರಿಗೆ ಅವಕಾಶ ನೀಡಲು ಕೋಟ ಶ್ರೀನಿವಾಸ ಪೂಜಾರಿ ಅವರು, ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ಕಮಿಷನರ್ ಜೊತೆ ಚರ್ಚಿಸಿದ್ದರು. ಬಳಿಕ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಬೀಡಿ ಉತ್ಪಾದಕರ ಸಭೆ ಕರೆದು ಬೀಡಿ ಉದ್ದಿಮೆಯನ್ನು ಪುನಾರಾರಂಭಿಸಲು ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತರಿಗೆ ಸೂಚಿಸಿದ್ದರು.
ಬೀಡಿ ಉದ್ದಿಮೆಗೆ ಸಂಬಂಧಪಟ್ಟ ಗುತ್ತಿಗೆದಾರರು, ಲೇಬಲ್ ಕೆಲಸಗಾರರು ಮತ್ತು ಕಚೇರಿಯ ಸಿಬ್ಬಂದಿ ಸಾಧ್ಯವಾದಷ್ಟು ಕಡಿಮೆ ಸಂಖ್ಯೆಯಲ್ಲಿ ಉದ್ಯಮಗಳಿಗೆ ಹೋಗಿ ಬರಲು, ಕಚ್ಚಾ ವಸ್ತುಗಳನ್ನು ಮತ್ತು ಸಿದ್ಧಪಡಿಸಿದ ಬೀಡಿಗಳ ಸಾಗಾಣಿಕೆ ಪುನರ್ ಆರಂಭಿಸಬಹುದು ಎಂದು ತಿಳಿಸಿದ್ದಾರೆ.