ಉಜಿರೆ: ಬಾಲಕನ ಅಪಹರಣ ಪ್ರಕರಣ | ಅಪಹರಣಕಾರರಿಂದ ಮತ್ತೆ ಮೆಸೇಜ್ | ಯಾವ ಲೊಕೇಶನ್?
ಉಜಿರೆ: ಬಾಲಕ ಅನುಭವ್ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಸ ಅಪ್ ಡೇಟ್ ಇದಾಗಿದ್ದು, ಅಪಹರಣ ಸಂಬಂಧ ತಂದೆ ಬಿಜೋಯ್ ಅವರು ದೂರು ದಾಖಲಿಸಿರುವುದಕ್ಕೆ ಸಂಬಂಧಿಸಿದಂತೆ ಅಪಹರಣಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಅಪಹರಣಕಾರರು ಬಾಲಕನ ಬಿಡುಗಡೆಗೆ 60 ಬಿಟ್ ಕಾಯಿನ್ ಡಿಮಾಂಡ್ ಮಾಡಿದ್ದು, ಈ 60 ಬಿಟ್ ಕಾಯಿನ್ ನ ಒಟ್ಟು ಮೊತ್ತ 10 ಕೋಟಿ ರೂಪಾಯಿಗಳಷ್ಟು ಎಂದು ಹೇಳಲಾಗಿದೆ. ಈ ಪ್ರಕರಣದ ಬಗ್ಗೆ ದೂರು ನೀಡಿದರೆ, ನೀವು ಅನುಭವಿಸುತ್ತೀರಿ ಎಂದು ಅಪಹರಣಕಾರ ಮೆಸೇಜ್ ಮಾಡಿದ್ದಾನೆ ಎಂದು ಹೇಳಲಾಗಿದೆ. ಹಾಸನ ಭಾಗದಲ್ಲಿ ಆರೋಪಿಯ ಲೊಕೇಶನ್ ಪತ್ತೆಯಾಗಿದೆ.
ನಿನ್ನೆ 100 ಬಿಟ್ ಕಾಯಿನ್ ಗೆ ಬೇಡಿಕೆಯಿರಿಸಿದ್ದ ಅಪಹರಣಕಾರರು ಇಂದು 60 ಬಿಟ್ ಕಾಯಿನ್ ಗೆ ತಮ್ಮ ಬೇಡಿಕೆಯನ್ನು ಇಳಿಸಿದ್ದಾರೆ. ಒತ್ತೆ ಹಣಕ್ಕೆ ಅವರು ಭಾರೀ ಮೊತ್ತವನ್ನು ಹೇಳುತ್ತಿದ್ದು, ಹಣಕ್ಕಾಗಿ ಭಾರೀ ಒತ್ತಡ ಹಾಕಿದ್ದಾರೆ.
ಅಪಹರಣಕಾರರ ವಶದಲ್ಲಿರುವ ಬಾಲಕನ ಪರಿಸ್ಥಿತಿ ಏನು ಎನ್ನುವುದು ಇನ್ನೂ ತಿಳಿದು ಬಂದಿಲ್ಲ. ಪೊಲೀಸರು ಅಪಹರಣಕಾರರಿಗೆ ಜಾಲ ಹರಡಿದ್ದಾರೆ ಎಂದು ತಿಳಿದಿದ್ದರೂ, ಅವರು ಹೇಗೆ ಇಷ್ಟೊಂದು ಧೈರ್ಯದಿಂದ ಹಾಸನದಿಂದ ಮೆಸೇಜ್ ಮಾಡುತ್ತಿದ್ದಾರೆ? ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ. ಇವರ ತಂಡ ಬಹಳ ದೊಡ್ಡದಿರಬಹುದೇ? ಬಿಟ್ ಕಾಯಿನ್ ಗೆ ಬೇಡಿಕೆ ಇರಿಸಿರುವುದನ್ನು ನೋಡಿದರೆ, ಇವರು ಪರಿಣತ ತಂಡವೇ ಇರಬಹುದು ಎಂಬ ಬಗ್ಗೆ ಅನುಮಾನಗಳು ಮೂಡಿವೆ. ಈ ನಡುವೆ ಪೊಲೀಸರ ತನಿಖೆ ಮುಂದುವರಿದಿದ್ದು, ಅಪಹರಣಕಾರರಿಗಾಗಿ ಹುಡುಕಾಟ ಮುಂದುವರಿಸಿದ್ದಾರೆ.