ಉಜಿರೆ: ಅಪಹರಣಕಾರರು ಪೊಲೀಸರ ಬಲೆಗೆ | ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದು ಹೇಗೆ ಗೊತ್ತಾ? - Mahanayaka
2:12 PM Saturday 14 - December 2024

ಉಜಿರೆ: ಅಪಹರಣಕಾರರು ಪೊಲೀಸರ ಬಲೆಗೆ | ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದು ಹೇಗೆ ಗೊತ್ತಾ?

19/12/2020

ಮಂಗಳೂರು: ಉಜಿರೆಯ ಬಾಲಕ ಅನುಭವ್ ಅಪಹರಣಕಾರರನ್ನು ಕೊನೆಗೂ ಪೊಲೀಸರು ಬಂಧಿಸಿದ್ದು, ಬಾಲಕನನ್ನು ಸುರಕ್ಷಿತವಾಗಿ ಅಪಹರಣಕಾರರಿಂದ ಬಿಡಿಸಿದ್ದಾರೆ..  ಅಪಹರಣಕಾರರು ಅನುಭವ್ ನನ್ನು ಅಪಹರಿಸಿದ ಬಳಿಕ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಕೂರ್ನಹೊಸಹಳ್ಳಿಯ ಮನೆಯೊಂದರಲ್ಲಿ ಬಚ್ಚಿಟ್ಟಿದ್ದರು.

ಬಾಲಕ ಅನುಭವ್ ನನ್ನು  ಕೊರ್ನಹೊಸಹಳ್ಳಿಯ ಮಂಜುನಾಥ್ ಎಂಬವರ ಮನೆಯಲ್ಲಿ ಬಚ್ಚಿಡಲಾಗಿತ್ತು. ಇದೀಗ ಅಪಹರಣಕಾರರಾದ  ಬಿ.ಹನುಮಂತ(21), ಗಂಗಾಧರ್(25), ಖಾಸಗಿ ಕಂಪೆನಿಯ ಉದ್ಯೋಗಿ ಹೆಚ್.ಪಿ.ರಂಜಿತ್(22) ಮೆಕ್ಯಾನಿಕ್ ಕಮಲ್(23), ಟೈಲರ್ ಮಂಜುನಾಥ್(24), ಪೈಂಟರ್ ಮಹೇಶ್(26) ಸೇರಿದಂತೆ 6 ಆರೋಪಿಗಳನ್ನು ಬಂಧಿಸಲಾಗಿದೆ.

ಅಪಹರಣಕಾರರು ಒಂದು ವರ್ಷಗಳಿಂದ ಅನುಭವ್ ಹಾಗೂ ಆತನ ಕುಟುಂಬದ ಬಗ್ಗೆ ಮಾಹಿತಿ ಸಂಗ್ರಹಿಸಿದ್ದು,  ಧರ್ಮಸ್ಥಳಕ್ಕೆ ಬಂದು ಅಲ್ಲಿ ಒಂದು ಆಟೋದಲ್ಲಿ ಪ್ರಯಾಣಿಸಿ ಆಟೋ ಡ್ರೈವರ್ ನ ಪರಿಚಯ ಮಾಡಿಕೊಂಡು ಆತನ ಬಳಿ ಕುಟುಂಬದ ಮಾಹಿತಿ ಪಡೆದುಕೊಂಡಿದ್ದರು ಎನ್ನಲಾಗಿದೆ.  ಬಾಲಕನ ಅಪಹರಣದ ಸುದ್ದಿ ತಿಳಿಯುತ್ತಿದ್ದಂತೆಯೇ ಆಟೋ ಚಾಲಕ ಪೊಲೀಸರಿಗೆ ಮಾಹಿತಿ ನೀಡಿದ್ದು, ಈತ ನೀಡಿದ ಸುಳಿವಿನ ಮೇರೆಗೆ ಪೊಲೀಸರು ಐದು ತಂಡಗಳನ್ನು ರಚಿಸಿ ಅಪಹರಣಕಾರರನ್ನು ಬಂಧಿಸಿದ್ದಾರೆ.

ಫೋನ್ ಟ್ರ್ಯಾಕ್ ಮಾಡುವ ಮೂಲಕ ಪೊಲೀಸರು ಅಪಹರಣಕಾರರನ್ನು ಬಂಧಿಸಿದ್ದಾರೆ.  ಕಳೆದ ರಾತ್ರಿ ಕೋಲಾರದ ಕೂರ್ನಹೊಸಳ್ಳಿ ಗ್ರಾಮಕ್ಕೆ ಮಗುವಿನೊಂದಿಗೆ ಅಪಹರಣಕಾರರು ಬಂದಿದ್ದಾರೆ.  ಈ ವೇಳೆ ಮಂಜುನಾಥ್ ನ ಮೊಬೈಲ್ ನ್ನು ಅಪಹರಣಕಾರರು ಬಳಸಿದ್ದಾರೆ. ಈ ಜಾಡನ್ನು ಹಿಡಿದು ಹೋದ ಪೊಲೀಸರ ಬಲೆಗೆ ಆರೋಪಿಗಳು ಬಿದ್ದಿದ್ದಾರೆ.

ಬೆಳ್ತಂಗಡಿ ಸರ್ಕಲ್ ಇನ್ಸ್ ಪೆಕ್ಟರ್ ಸಿಪಿಐ ಸಂದೇಶ್, ಪಿಎಸ್ ಐ ನೇತೃತ್ವದಲ್ಲಿ  ಕಾರ್ಯಾಚರಣೆ ನಡೆದಿದ್ದು, ಇಂದು ಬಾಲಕ ಅನುಭವ್ ನ ಮೆಡಿಕಲ್ ಚೆಕಪ್ ಮಾಡಿದ ಬಳಿಕ ಅನುಭವ್ ನನ್ನು ಮಾಲೂರು ಕೋರ್ಟ್ ಗೆ ಹಾಜರು ಪಡಿಸಲಾಗುತ್ತದೆ. ಆ ಬಳಿಕ ಪೋಷಕರಿಗೆ ಹಸ್ತಾಂತರಿಸಲಾಗುತ್ತದೆ.

ಇತ್ತೀಚಿನ ಸುದ್ದಿ