ಉಜ್ಜಯಿನಿಯಲ್ಲಿ ಅತ್ಯಾಚಾರ ಪ್ರಕರಣ: ಸಂತ್ರಸ್ತೆಯನ್ನು ದತ್ತು ಪಡೆಯಲು ಮುಂದಾದ ಪೊಲೀಸರು
ಇತ್ತೀಚಿಗೆ ಮಧ್ಯ ಪ್ರದೇಶದ ಉಜ್ಜಯಿನಿಯಲ್ಲಿ ಅತ್ಯಾಚಾರಕ್ಕೊಳಗಾದ ಸಂತ್ರಸ್ತೆಯನ್ನು ದತ್ತು ಪಡೆಯಲು ಪೊಲೀಸರೇ ಮುಂದಾದ ಮಾನವೀಯ ವಿಚಾರ ಬೆಳಕಿಗೆ ಬಂದಿದೆ.
ಉಜ್ಜಯಿನಿಯಲ್ಲಿ ಇತ್ತೀಚಿಗೆ 15 ವರ್ಷದ ಬಾಲಕಿ ಮೇಲೆ ಅತ್ಯಾಚಾರ ನಡೆದಿತ್ತು. ಅರೆಬೆತ್ತಲಾದ ಸ್ಥಿತಿಯಲ್ಲಿ ಸಂತ್ರಸ್ತೆ ಮೈಯೆಲ್ಲಾ ಗಾಯ ಮಾಡಿಕೊಂಡು ಸಹಾಯಕ್ಕಾಗಿ ಅಂಗಲಾಚಿದರೂ ಯಾರೂ ಆಕೆಯ ನೆರವಿಗೆ ಬಂದಿರಲಿಲ್ಲ.
ಬಾಲಕಿಯ ಈ ವಿಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ವಿಶೇಷ ತಂಡ ರಚಿಸಿ ತನಿಖೆ ಪ್ರಾರಂಭಿಸಿದ್ದರು.
30- 35 ಮಂದಿಯ ಪೊಲೀಸರ ತಂಡ ಸತತ ಮೂರ್ನಾಲ್ಕು ದಿನಗಳ ಕಾಲ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಿ ಪ್ರಮುಖ ಆರೋಪಿ ಭರತ್ ಸೋನಿಯನ್ನು ಬಂಧಿಸಿದ್ದಾರೆ. ಘಟನೆಗೆ ಸಂಬಂಧಿಸಿ ಆರೋಪಿಗೆ ಸಹಾಯ ಮಾಡಿದ ಆಟೋ ಚಾಲಕ ರಾಕೇಶ್ ಮಾಳವಿಯಾ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.
ಉಜ್ಜಯಿನಿ ಪೊಲೀಸರು ಪ್ರಕರಣವನ್ನು ಭೇದಿಸಿದ್ದು ಮಾತ್ರವಲ್ಲ ಆಸ್ಪತ್ರೆಗೆ ದಾಖಲಾದ ಬಾಲಕಿ ರಕ್ಷಣೆಗೆ ಇಬ್ಬರು ಪೊಲೀಸರು ರಕ್ತದಾನವನ್ನೂ ಮಾಡಿದ್ದಾರೆ. ಮತ್ತೋರ್ವ ಪೊಲೀಸ್ ಅಧಿಕಾರಿ ಬಾಲಕಿಯನ್ನು ದತ್ತು ಪಡೆಯಲು ಮುಂದಾಗಿದ್ದಾರೆ.
ಅತ್ಯಾಚಾರದ ಪ್ರಮುಖ ಆರೋಪಿ ಭರತ್ ಸೋನಿಯ ತಂದೆ ರಾಜು ಸೋನಿ ತನ್ನ ಮಗನಿಗೆ ಮರಣದಂಡನೆ ವಿಧಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಉಜ್ಜಯಿನಿ ಬೀದಿ ಬೀದಿಗಳಲ್ಲಿ ಸಹಾಯಕ್ಕಾಗಿ ಅಂಗಲಾಚಿದರೂ ಬಾಲಕಿಗೆ ಸಹಾಯ ಮಾಡದವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಜಯಂತ್ ಸಿಂಗ್ ರಾಥೋಡ್ ತಿಳಿಸಿದ್ದಾರೆ.