ಉಳ್ಳಾಲ: ಸಮುದ್ರದ ಕಲ್ಲಿಗೆ ಡಿಕ್ಕಿ ಹೊಡೆದು ಮುಳುಗಿದ ಮೀನುಗಾರಿಕಾ ಬೋಟ್!

ಉಳ್ಳಾಲ: ಸಮುದ್ರದಲ್ಲಿ ಕಲ್ಲಿಗೆ ಡಿಕ್ಕಿ ಹೊಡೆದ ಮೀನುಗಾರಿಕಾ ಬೋಟ್ ವೊಂದು ಮುಳುಗಿದ ಘಟನೆ ಶುಕ್ರವಾರ ಬೆಳಗಿನ ಜಾವ ನಡೆಸಿದ್ದು, ಬೋಟ್ ನಲ್ಲಿದ್ದವರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪರಾಗಿದ್ದಾರೆ.
ಉಳ್ಳಾಲದ ನಯನಾ ಪಿ. ಸುವರ್ಣ ಎಂಬವರಿಗೆ ಸೇರಿದ್ದ ಬೋಟ್ ಉಳ್ಳಾಲದಿಂದ ಮೀನುಗಾರಿಕೆಗೆ ತೆರಳಿತ್ತು. ಮುಂಜಾನೆ ನಾಲ್ಕು ಗಂಟೆಯ ಸುಮಾರಿಗೆ ಉಳ್ಳಾಲ ತೀರದ ಮೂಲಕ ದಡಕ್ಕೆ ಬೋಟ್ ಆಗಮಿಸುತ್ತಿತ್ತು. ಈ ವೇಳೆ ಬೋಟ್ ನ ಪ್ರೊಫೈಲರ್ ಗೆ ಯಾವುದೋ ವಸ್ತು ತಾಗಿ ಸ್ಥಗಿತಗೊಂಡಿದೆ. ಹೀಗಾಗಿ ಬೋಟ್ ಸರ್ವೇ ಕಲ್ಲಿಗೆ ಬಡಿದಿದ್ದು, ಇದರಿಂದ ತೀವ್ರ ಹಾನಿಗೊಂಡು ಬೋಟ್ ಮುಳುಗಿದೆ ಎಂದು ತಿಳಿದು ಬಂದಿದೆ.
ಘಟನೆ ವೇಳೆ ಬೋಟ್ ನಲ್ಲಿ ನಯನಾ ಅವರ ಪತಿ ಪ್ರವೀಣ್ ಸುವರ್ಣ, ಉತ್ತರ ಪ್ರದೇಶ ಮೂಲದ ಮೀನುಗಾರರಾದ ಸಮರ ಬಹಾದ್ದೂರ್, ರಾಮ್ ಮನೋಜ್, ರೋಹಿತ್, ಪ್ರಕಾಶ್ ಮತ್ತು ವಾಸು ಎಂಬವರಿದ್ದರು. ಇವರನ್ನು ದುರ್ಗಾ ಲಕ್ಷ್ಮೀ ಮತ್ತು ಶ್ರೀಗೌರಿ ಬೋಟ್ ನವರು ರಕ್ಷಿಸಿದ್ದಾರೆ.
ಮುಳುಗಡೆಯಾಗಿರುವ ಬೋಟ್ ನಲ್ಲಿದ್ದ ಮೀನು, ಬಲೆ ಸಮುದ್ರ ಪಾಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಬೋಟ್ ಗೆ ಹಾನಿಯಾಗಿದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.