ವಿಯೆಟ್ನಾಮಿನ ಜನರ ಚಿಕ್ಕಪ್ಪ “ಹೋ ಚಿ ಮಿನ್”

“ಕೊಟ್ಟಣದಲ್ಲಿನ ಭತ್ತದ ಕಾಳು ಒನಕೆಯ ಪೆಟ್ಟಿನಿಂದ ನೋಯುವಂತೆ, ಒಂದು ಜೀವ ಮನುಷ್ಯನಾಗಿರಲು ದುರದೃಷ್ಟದ ಉಳಿಪೆಟ್ಟಿನಲ್ಲಿ ನೋಯಲೇಬೇಕು” ಎಂದು ಹೇಳಿದವರು ಹೋ ಚಿ ಮಿನ್.
ವಿಯೆಟ್ನಾಮಿನ ಜನರು ಚಿಕ್ಕಪ್ಪ ಎಂದು ಕರೆಯುತ್ತಿದ್ದ ಹೋ ಚಿ ಮಿನ್ ಆ ದೇಶದ ಜನತೆಯ ನೆಚ್ಚಿನ ನಾಯಕರು. ಇಂಡೋ ಚೀನಾದ ಕಮ್ಯುನಿಸ್ಟ್ ಪಕ್ಷದ ಸಂಸ್ಥಾಪಕರು. ಆಗ್ನೇಯ ಏಷ್ಯಾದಲ್ಲಿದ್ದ ಫ್ರಾನ್ಸ್ ನ ವಸಾಹತು ಆಡಳಿತವನ್ನು ಕೊನೆಗಾಣಿಸಲು ಹೋರಾಡಿದ ಹೋ ಚಿ ಮಿನ್ ಇತಿಹಾಸದಲ್ಲಿ ಗಣ್ಯ ಪುರುಷರ ಪಂಕ್ತಿಗೆ ಸೇರಿದ ವ್ಯಕ್ತಿ.
ಹೋ ಚಿ ಮಿನ್ ಜನಿಸಿದ್ದು 1890ರ ಮೇ 19ರಂದು. ಹುಟ್ಟು ಹೆಸರು ನುಯ್ಗೆನ್ ಐಕ್ವಾಕ್. ಶ್ರೀಮಂತ ಕುಟುಂಬ ಅವರದು. ರಾಷ್ಟ್ರೀಯ ಚಳುವಳಿಗೆ ಬೆಂಬಲವಿತ್ತರೆಂಬ ಆಪಾದನೆಯ ಮೇಲೆ ಹೋ ಚಿ ಮಿನ್ ಅವರ ತಂದೆಯನ್ನು ಕೆಲಸದಿಂದ ತೆಗೆಯಲಾಯಿತು.
1911ರಲ್ಲಿ ಹೋ ಚಿ ಮಿನ್ ಒಂದು ಫ್ರೆಂಚ್ ವ್ಯಾಪಾರಿ ಹಡಗಿನಲ್ಲಿ ಕೆಲಸಕ್ಕೆ ಸೇರಿದರು. ಇದರಿಂದ ಪ್ರಪಂಚ ಪರ್ಯಟನ ಸಾಧ್ಯವಾಯಿತು. 1914ರಲ್ಲಿ ಯುದ್ಧ ಪ್ರಾರಂಭವಾದಾಗ ಸೈನ್ಯವನ್ನು ಸೇರಲು ಪ್ರಯತ್ನಿಸಿ ವಿಫಲಗೊಂಡರು. ಪ್ಯಾರಿಸ್ ಗೆ ತೆರಳಿ ಅಲ್ಲಿ ನಾವಿಕನಾಗಿ, ಅಡುಗೆಯವನಾಗಿ, ಭಾವಚಿತ್ರಗಳನ್ನು ಪರಿಷ್ಕರಿಸುವವನಾಗಿ ಕೆಲಸ ಮಾಡಿದರು. ವೇಷ ಮರೆಸಿಕೊಳ್ಳುವುದರಲ್ಲಿ ನಿಷ್ಣಾತರಾದರು.
ರಾಜಕಾರಣದಲ್ಲಿ ಆಸಕ್ತಿ ಇದ್ದ ಹೋ ಚಿ ಮಿನ್ ಗೆ ಪ್ಯಾರಿಸ್ ಉತ್ತಮ ಸ್ಥಳವಾಗಿತ್ತು. ಮಾರ್ಕ್ಸ್ ವಾದದ ಅನುಷ್ಠಾನದಿಂದ ಮಾತ್ರ ವಿಯೆಟ್ನಾಂ ಸ್ವಾತಂತ್ರ್ಯವಾಗಲು ಸಾಧ್ಯ ಎಂದು ಅವರಿಗೆ ಅಲ್ಲಿ ಮನದಟ್ಟಾಯಿತು. ಅವರು ಸಮಾಜವಾದಿಗಳ ಪಕ್ಷವನ್ನು ಸೇರಿಕೊಂಡರು. ಯುದ್ಧ ನಿಂತೊಡನೆ ಪ್ಯಾರಿಸ್ ನಲ್ಲಿ ಜರುಗಿದ ಶಾಂತಿ ಸಭೆಗೆ ತನ್ನ ದೇಶಕ್ಕೆ ರಾಜಕೀಯ ಮತ್ತು ಪೌರ ಹಕ್ಕುಗಳನ್ನು ಕೊಡಬೇಕೆಂಬ ಮನವಿಯನ್ನು ಸಲ್ಲಿಸಿದರು. ವಿಯೆಟ್ನಾಮಿನ ನೂತನ ಇತಿಹಾಸ ಅಂದಿನಿಂದ ಆರಂಭವಾಯಿತು. ವಾಮಪಕ್ಷಿಯರಲ್ಲಿ ಇವರ ಹೆಸರು ಪ್ರಸಿದ್ಧವಾಯಿತು. ಚದರಿ ಹೋಗಿದ್ದ ವಿಯೆಟ್ನಾಮಿನವರಲ್ಲಿ ದೇಶಭಕ್ತಿಯನ್ನು ಜಾಗೃತಗೊಳಿಸಿ, ಒಗ್ಗೂಡಿಸಿ ಫ್ರಾನ್ಸ್ ಮತ್ತು ಜಪಾನ್ ಗಳ ವಿರುದ್ಧ ಹೋರಾಟ ಘೋಷಿಸಿದ್ದರು. 1944ನೇ ಅಕ್ಟೋಬರ್ ವೇಳೆಗೆ ಹಾಂಗ್ ಕಾಂಗ್ ಪ್ರದೇಶದ ಆರು ವಿಭಾಗಗಳನ್ನು ವಶಪಡಿಸಿಕೊಂಡರು. 1948 ಸೆಪ್ಟೆಂಬರ್ 2 ರಂದು ಸ್ವತಂತ್ರ ಪ್ರಜಾಪ್ರಭುತ್ವ ರಾಷ್ಟ್ರವಾಗಿ ವಿಯೆಟ್ನಾಂ ತಲೆ ಎತ್ತಿ ನಿಂತಿತು. ಹೋ ಚಿ ಮಿನ್ ಅದರ ಮೊದಲನೆಯ ಅಧ್ಯಕ್ಷರಾದರು.
ದೇಶಾಂತರವಾಸ, ದಟ್ಟದಾರಿದ್ರ್ಯ, ಕಾರಾಗೃಹವಾಸ ಯಾವುದಕ್ಕೂ ಮಣಿಯದೆ ತನ್ನ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಧೀರ ಹೋ ಚಿ ಮಿನ್ ಫ್ರೆಂಚರ ನೊಗ ಕಳಚಿದ ಮೇಲೆ ಅಂತರ್ ಯುದ್ಧ ಭುಗಿಲೆದ್ದಿತು. ದಕ್ಷಿಣ ವಿಯೇಟ್ನಾಮಿನ ಪ್ರಮುಖರಿಗೆ ಅಮೆರಿಕದ ಸಂಯುಕ್ತ ಸಂಸ್ಥಾನದ ಬೆಂಬಲ ದೊರೆತು ಘೋರ ಯುದ್ದ ನಡೆಯಿತು. ಜಗತ್ತಿನಲ್ಲಿ ಅತಿ ಹೆಚ್ಚು ಬಲಾಢ್ಯವಾದ ಅಮೆರಿಕದ ವಿರುದ್ಧ ಉತ್ತರ ವಿಯೆಟ್ನಾಮಿನ ಜನ ಹೋರಾಡಿದರು. ಹೋ ಚಿ ಮಿನ್ ತಮ್ಮ ದೇಶವನ್ನು ಒಗ್ಗೂಡಿಸುವ ತಮ್ಮ ಧ್ಯೇಯ ಸಾಧನೆಗಾಗಿ ಹಗಲು ಇರುಳು ಪರಿಶ್ರಮ ಪಟ್ಟರು.
ಇವರು ಫ್ರೆಂಚ್, ಇಂಗ್ಲಿಷ್, ಚೀನಿ, ರಷ್ಯನ್ ಹೀಗೆ ಹಲವು ಭಾಷೆಗಳನ್ನು ಕಲಿತಿದ್ದರು. ಇವರು ಕೆಲವು ಕವನಗಳನ್ನು ಬರೆದಿದ್ದುಂಟು. 1969 ಸೆಪ್ಟೆಂಬರ್ 3ರಂದು ಹೋ ಚಿ ಮಿನ್ ನಿಧನರಾದರು. ಒಂದು ನಾಡಿನಲ್ಲಿ ಹೊಸ ಸ್ಫೂರ್ತಿ, ಧೈರ್ಯ, ಚೈತನ್ಯಗಳನ್ನು ಹರಿಸಿದ ಮಹಾನಾಯಕ ಹೋ ಚಿ ಮಿನ್ ಈ ಶತಮಾನದ ಅತ್ಯಂತ ಕುತೂಹಲಕಾರಿ ವ್ಯಕ್ತಿಗಳಲ್ಲಿ ಮತ್ತು ಪ್ರಭಾವಿ ನಾಯಕರಲ್ಲಿ ಒಬ್ಬರಾಗಿದ್ದರು.
ಹೋ ಚಿ ಮಿನ್ ಎಂದರೆ “ಬೆಳಕು ಕಂಡವ” ಎಂದು ಅರ್ಥ. ಹೋ ಚಿ ಮಿನ್ ಸ್ವಾತಂತ್ರ್ಯದ ಬೆಳಕನ್ನು ತಾವು ಕಂಡುದಲ್ಲದೆ, ನಾಡಿಗೆ ಆ ಬೆಳಕನ್ನು ತಂದುಕೊಡಲು ಶ್ರಮವರಿಯದೆ ದುಡಿದವರು.
ಉದಂತ ಶಿವಕುಮಾರ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: