ಅನ್ ಲಾಕ್ ಆಗ್ತಿದೆ ಎಂದು ಖುಷಿ ಪಡುವಂತಿಲ್ಲ, ಬೆನ್ನತ್ತಿ ಬರುತ್ತಿದೆ ಇನ್ನೊಂದು ಅಪಾಯ! - Mahanayaka

ಅನ್ ಲಾಕ್ ಆಗ್ತಿದೆ ಎಂದು ಖುಷಿ ಪಡುವಂತಿಲ್ಲ, ಬೆನ್ನತ್ತಿ ಬರುತ್ತಿದೆ ಇನ್ನೊಂದು ಅಪಾಯ!

randeep goleria
19/06/2021

ನವದೆಹಲಿ:  ದೇಶದಲ್ಲಿ ಮುಂದಿನ 6-8 ವಾರಗಳೊಳಗೆ ಕೊವಿಡ್ 19 ಮೂರನೇ ಅಲೆ ಬರಲಿದೆ ಎಂದು ಏಮ್ಸ್ ಮುಖ್ಯಸ್ಥ ಡಾ.ರಂದೀಪ್ ಗುಲೇರಿಯಾ ಹೇಳಿಕೆ ನೀಡಿದ್ದು,  ದೇಶವು ಎರಡನೇ ಅಲೆಯಿಂದ ತತ್ತರಿಸಿ ಅನ್ ಲಾಕ್ ನತ್ತ ಹೋಗುತ್ತಿರುವಾಗಲೇ ಈ ಬೆಚ್ಚಿಬೀಳಿಸುವ ಮಾಹಿತಿಯನ್ನು ಅವರು ನೀಡಿದ್ದಾರೆ ಎಂದು ವರದಿಯಾಗಿದೆ.

ಕೊವಿಡ್ 19 ಮೊದಲ ಹಾಗೂ ಎರಡನೇ ಅಲೆಯಲ್ಲಿ ಸಾಕಷ್ಟು ಪ್ರಾಣಗಳು ಹೋಗಿದ್ದರೂ, ಸರ್ಕಾರವೂ ಎಚ್ಚೆತ್ತುಕೊಂಡಿಲ್ಲ, ಜನರೂ ಎಚ್ಚೆತ್ತುಕೊಂಡಿಲ್ಲ. ಇದರ ಫಲವಾಗಿ ದೇಶ ಮತ್ತೆ ಕೊರೊನಾ ಮೂರನೇ ಅಲೆಯ ಹೊಡೆತಕ್ಕೆ ಸಿಲುಕುವ ಸಾಧ್ಯತೆಗಳಿಗೆ ಎಂದು ಹೇಳಲಾಗುತ್ತಿದೆ.

ಎರಡನೇ ಅಲೆ ದೇಶ-ಹಾಗೂ ರಾಜ್ಯದಲ್ಲಿ ತಗ್ಗುತ್ತಿರುವಂತೆಯೇ, ಕೊವಿಡ್ ಸಂಬಂಧ ಜನರು ಮತ್ತು ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ  ವಹಿಸುತ್ತಿವೆ. ಜನರು ಕೊರೊನಾವನ್ನು ಮರೆತು ಸಾರ್ವಜನಿಕ ಸ್ಥಳಗಳಲ್ಲಿ ಗುಂಪು ಸೇರುತ್ತಿದ್ದಾರೆ. ಇನ್ನೊಂದೆಡೆ ನಾವು ಕೊವಿಡ್ ಲಸಿಕೆ ಹಾಕಿಸಿಕೊಂಡಿದ್ದೇವೆ ಎನ್ನುವ ಧೈರ್ಯದಿಂದ ಮುಂಜಾಗೃತಾ ಕ್ರಮವನ್ನು ಜನರು ಮರೆತು ಹೋಗಿದ್ದಾರೆ. ಕೊವಿಡ್ ಲಸಿಕೆ ಪಡೆದುಕೊಂಡಿದ್ದರೂ ಕೂಡ ನಿರ್ಲಕ್ಷ್ಯವಹಿಸುವುದು ಸರಿಯಲ್ಲ.

ಸದ್ಯ ದೇಶದಲ್ಲಿ ಡೆಲ್ಟಾ ವೇರಿಯೆಂಟ್ ಇದ್ದು, ಇದು ವೇಗವಾಗಿ ಹರಡುತ್ತಿದೆ ಎಂದು ಏಮ್ಸ್ ವೈದ್ಯ ರಂದೀಪ್ ಗುಲೇರಿಯಾ ಎಚ್ಚರಿಕೆ ಕೂಡ ನೀಡಿದ್ದಾರೆ. ಕೊವಿಡ್ ವಿಚಾರದಲ್ಲಿ ವೈದ್ಯರ ಹೇಳಿಕೆಯನ್ನು ಸರ್ಕಾರವಾಗಲಿ, ಸಾರ್ವಜನಿಕರಾಗಲಿ ನಿರ್ಲಕ್ಷಿಸುವುದು ಅಪಾಯಕಾರಿಯಾಗಿದೆ. ಹೀಗಾಗಿ ಸರ್ಕಾರಕ್ಕಿಂತಲೂ ಮೊದಲು ಜನರು ಮೊದಲು ಎಚ್ಚರವಹಿಸಬೇಕು. ಮತ್ತಷ್ಟು ಪ್ರಾಣಗಳನ್ನು ಉಳಿಸಲು ಜನರು ಸ್ವಯಂ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ.

ಇತ್ತೀಚಿನ ಸುದ್ದಿ