ಅನ್ ಲಾಕ್ ಬೆನ್ನಲ್ಲೇ ಬೆಂಗಳೂರಿನತ್ತ ಜನರು | ಮತ್ತೆ ಸೋಂಕಿನ ಪ್ರಮಾಣ ಹೆಚ್ಚಳವಾಗುತ್ತಾ?
ಬೆಂಗಳೂರು: ಬೆಂಗಳೂರಿನಲ್ಲಿ ನಾಳೆಯಿಂದ ಅನ್ ಲಾಕ್ ಆಗಲಿದೆ. ಇದೇ ಸಂದರ್ಭದಲ್ಲಿ ಲಾಕ್ ಡೌನ್ ನಿಂದಾಗಿ ಊರಿಗೆ ಹೋಗಿದ್ದ ಜನರು ಮತ್ತೆ ಬೆಂಗಳೂರಿಗೆ ಬರಲು ಸಿದ್ಧರಾಗಿದ್ದಾರೆ.
ಸದ್ಯ ಬೆಂಗಳೂರು ಕೊವಿಡ್ ಪ್ರಕರಣಗಳಲ್ಲಿ ನಿಯಂತ್ರಣದಲ್ಲಿದೆ ಎಂದು ಹೇಳಲಾಗಿದ್ದರೂ, ಇದೀಗ ಹಳ್ಳಿಗಳಿಂದ ಮತ್ತೆ ನಗರಕ್ಕೆ ಜನರು ಬರುವುದರಿಂದ ಮತ್ತೆ ಸೋಂಕಿನ ಪ್ರಮಾಣ ಏರಿಕೆಯಾಗುವ ಸಾಧ್ಯತೆಗಳು ಕೂಡ ಕಂಡು ಬಂದಿದೆ.
ಕೊರೊನಾದಿಂದಾಗಿ ಜನರು ಉದ್ಯೋಗ ಕಳೆದುಕೊಂಡಿದ್ದು, ಇದೀಗ ಅನ್ ಲಾಕ್ ಆಗುತ್ತಿದ್ದಂತೆಯೇ ಜನರು ತಮ್ಮ ಉದ್ಯೋಗ, ವ್ಯಾಪಾರವನ್ನು ಅರಸಿ ಬೆಂಗಳೂರಿಗೆ ಬರಲಿದ್ದಾರೆ. ಈಗಾಗಲೇ ಜನರು ಆರ್ಥಿಕವಾಗಿ ತೀವ್ರವಾಗಿ ಜರ್ಝರಿತರಾಗಿದ್ದು, ಲಾಕ್ ಡೌನ್ ತೆರವಾದ ಬೆನ್ನಲ್ಲೇ ಮಕ್ಕಳ ಸ್ಕೂಲ್ ಫೀಸ್ ಮೊದಲಾದ ಸವಾಲುಗಳು ಪೋಷಕರು ಮುಂದಿರುವುದರಿಂದ ಹೇಗಾದರೂ ಜನರು ಬೆಂಗಳೂರು ಸೇರುತ್ತಾರೆ. ಈ ಸಂದರ್ಭದಲ್ಲಿ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಇನ್ನೂ ಈ ಸಮಸ್ಯೆಯ ಅರಿವು ಸರ್ಕಾರಕ್ಕೂ ಇದ್ದು, ಈ ಬಗ್ಗೆ ಅಧಿಕಾರಿಗಳ ಜೊತೆಗೆ ಚರ್ಚಿಸಿ ಕ್ರಮಕೈಗೊಳ್ಳುವುದಾಗಿ ಸಿಎಂ ಯಡಿಯೂರಪ್ಪನವರು ಕೂಡ ಹೇಳಿದ್ದಾರೆ. ಬೆಂಗಳೂರಿನಲ್ಲಿ ಸೋಂಕಿನ ಪ್ರಕರಣ ಏರಿಕೆಯಾಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಟೆಸ್ಟಿಂಗ್ ಅಧಿಕಗೊಳಿಸಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದು ತಿಳಿದು ಬಂದಿದೆ.