ಅತ್ಯಾಚಾರ—ಹತ್ಯೆಗೂ ಮುನ್ನ ತಾಯಿಗೆ ಹಲ್ಲೆ ನಡೆಸಿ ಹಾಡಹಗಲೇ ದಲಿತ ಬಾಲಕಿಯರ ಅಪಹರಣ: ದೇಶವನ್ನೇ ಬೆಚ್ಚಿ ಬೀಳಿಸಿದ ಘಟನೆ
ಉತ್ತರಪ್ರದೇಶದಲ್ಲಿ ಇಬ್ಬರು ದಲಿತ ಬಾಲಕಿಯರನ್ನು ಅತ್ಯಾಚಾರ ನಡೆಸಿ ಮರಕ್ಕೆ ನೇಣು ಬಿಗಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಅತ್ಯಾಚಾರ ಹಾಗೂ ಕೊಲೆ ಆರೋಪದಡಿಯಲ್ಲಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಬಾಲಕಿಯರ ಮೃತದೇಹ ಪತ್ತೆಯಾಗುವ 3 ಗಂಟೆಗೂ ಮೊದಲು ಮೂವರು ಯುವಕರು ಬಾಲಕಿಯರನ್ನು ಬೈಕ್ ನಲ್ಲಿ ಬಲವಂತವಾಗಿ ಅಪಹರಿಸಿದ್ದರು. ನಾನು ತಡೆಯಲು ಮುಂದಾದಾಗ ಅವರು ನನ್ನ ಮೇಲೆ ಹಲ್ಲೆ ನಡೆಸಿದರು. ಬಳಿಕ ಬಾಲಕಿಯರನ್ನು ಹುಡುಕಾಡಿದಾಗ ಕಬ್ಬಿನ ಗದ್ದೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ನಮ್ಮ ಮಕ್ಕಳನ್ನು ಅತ್ಯಾಚಾರ ನಡೆಸಿ ಹತ್ಯೆ ಮಾಡಲಾಗಿದೆ ಎಂದು ಮೃತ ಬಾಲಕಿಯರ ತಾಯಿ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೂ ಮೃತದೇಹಗಳ ಮರಣೋತ್ತರ ಪರೀಕ್ಷೆಗಾಗಿ ಸ್ಥಳಕ್ಕೆ ತೆರಳಿದ ಪೊಲೀಸರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥ ಸಂಜೀವ್ ಸುಮನ್ ಅವರನ್ನು ರಸ್ತೆ ತಡೆದು ನಿಲ್ಲಿಸಿದ ಪ್ರತಿಭಟನಾಕಾರರು ಉತ್ತರ ಪ್ರದೇಶದಲ್ಲಿ ಪೊಲೀಸರ ನಿಷ್ಕ್ರಿಯತೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ತೀವ್ರ ಮಾತಿನ ಚಕಮಕಿಯ ನಡುವೆಯೇ ಮೃತದೇಹವನ್ನು ಪೊಲೀಸರು ಸಾಗಿಸಬೇಕಾದ ಸ್ಥಿತಿ ನಿರ್ಮಾಣವಾಯಿತು.
ಯೋಗಿ ಸರ್ಕಾರದಲ್ಲಿ ಗೂಂಡಾಗಳು ತಾಯಿ–ಸಹೋದರಿಯರಿಗೆ ಕಿರುಕುಳ ನೀಡುತ್ತಿದ್ದಾರೆ
ಯೋಗಿ ಸರ್ಕಾರದ ವೈಫಲ್ಯತೆ ವಿರುದ್ಧ ವಾಗ್ದಾಳಿ ನಡೆಸಿರುವ ಉತ್ತರಪ್ರದೇಶ ಮಾಜಿ ಸಿಎಂ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಯೋಗಿ ಸರ್ಕಾರದಲ್ಲಿ ಗೂಂಡಾಗಳು ಪ್ರತಿನಿತ್ಯ ತಾಯಿ ಮತ್ತು ಸಹೋದರಿಯರಿಗೆ ಕಿರುಕುಳ ನೀಡುತ್ತಿದ್ದಾರೆ. ಸರ್ಕಾರ ಈ ಬಗ್ಗೆ ತನಿಖೆ ನಡೆಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಪೋಸ್ಟ್ ಮಾರ್ಟಂ ಅನ್ನು ಒಪ್ಪಿಗೆ ಇಲ್ಲದೇ, ಕಾರ್ಯ ವಿಧಾನಗಳನ್ನು ಉಲ್ಲಂಘಿಸಿ ಮಾಡಲಾಗಿದೆ ಎಂದು ಅವರು ಚಿತ್ರಗಳ ಜೊತೆಗೆ ಟ್ವೀಟ್ ಮಾಡಿದ್ದಾರೆ.
ಉತ್ತರಪ್ರದೇಶದ ಕಾನೂನು ಸುವ್ಯವಸ್ಥೆ ಬಹಿರಂಗವಾಗಿದೆ
ಬಹುಜನ ಸಮಾಜ ಪಾರ್ಟಿ ಮುಖ್ಯಸ್ಥೆ ಮಾಯಾವತಿ ಅವರು ಘಟನೆಯನ್ನು ಖಂಡಿಸಿದ್ದು, ಉತ್ತರಪ್ರದೇಶದಲ್ಲಿ ಅಪರಾಧಿಗಳಿಗೆ ಯಾವುದೇ ಭಯವಿಲ್ಲ. ಸರ್ಕಾರದ ಆದ್ಯತೆಗಳೇ ಇಲ್ಲಿ ತಪ್ಪಾಗಿವೆ. ಲಖಿಂಪುರ ಖೇರಿಯಲ್ಲಿ ನಡೆದ ಘಟನೆ ಉತ್ತರ ಪ್ರದೇಶದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಮಹಿಳೆಯರ ಸುರಕ್ಷತೆ ಹೇಗಿದೆ ಎನ್ನುವುದನ್ನು ಬಹಿರಂಗಪಡಿಸಿದೆ ಎಂದು ಹೇಳಿದ್ದಾರೆ.
ಸುಳ್ಳು ಜಾಹೀರಾತಿನಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಘಟನೆಯನ್ನು ಖಂಡಿಸಿದ್ದು, ಲಖಿಂಪುರದಲ್ಲಿ ಇಬ್ಬರು ಸಹೋದರಿಯರ ಹತ್ಯೆ ಘಟನೆ ಹೃದಯ ವಿದ್ರಾವಕವಾಗಿದೆ. ಹೆಣ್ಣು ಮಕ್ಕಳನ್ನು ಹಗಲು ಹೊತ್ತಿನಲ್ಲೇ ಅಪಹರಿಸಲಾಗಿದೆ ಎಂದು ಕುಟುಂಬಸ್ಥರು ಹೇಳುತ್ತಿದ್ದಾರೆ. ಪ್ರತೀ ದಿನ ಪತ್ರಿಕೆಗಳು ಮತ್ತು ಟಿವಿಗಳಲ್ಲಿ ಸುಳ್ಳು ಜಾಹೀರಾತು ನೀಡುವುದರಿಂದ ಕಾನೂನು ಸುವ್ಯವಸ್ಥೆ ಸುಧಾರಿಸುವುದಿಲ್ಲ. ಉತ್ತರ ಪ್ರದೇಶದಲ್ಲಿ ಮಹಿಳೆಯರ ಮೇಲೆ ಘೋರ ಅಪರಾಧಗಳು ಹೆಚ್ಚುತ್ತಿವೆ ಎಂದು ಟ್ವೀಟ್ ಮಾಡಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka