ಬಲೂನ್ ವಿಚಾರಕ್ಕೆ ಅಮೆರಿಕ—ಚೀನಾ ಕಿತ್ತಾಟ: ನಮ್ಮ ಬಲೂನ್ ವಿಚಾರಕ್ಕೆ ಬಂದ್ರೆ ಎಚ್ಚರ ಎಂದ ಚೀನಾ
ಬೀಜಿಂಗ್/ ವಾಷಿಂಗ್ಟನ್: ಚೀನಾ ಹಾಗೂ ಅಮೆರಿಕ ನಡುವೆ ಬಲೂನ್ ವಿಚಾರವಾಗಿ ತೀವ್ರವಾದ ವಾಗ್ವಾದ ನಡೆದಿದೆ. ಒಂದೆಡೆ ಚೀನಾ ಅಮೆರಿಕಕ್ಕೆ ಬೇಹುಗಾರಿಕಾ ಬಲೂನ್ ಹಾರಿಸಿದೆ. ಇನ್ನೊಂದೆಡೆ ಈ ಬಲೂನ್ ನ್ನು ಅಮೆರಿಕ ಬ್ಲಾಸ್ಟ್ ಮಾಡಿದೆ.
ಇದೀಗ ನಮ್ಮ ಬಲೂನ್ ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಚೀನಾ ಅಮೆರಿಕಕ್ಕೆ ಎಚ್ಚರಿಕೆ ಸಂದೇಶ ರವಾನಿಸಿದೆ. ಇದರ ಬೆನ್ನಲ್ಲೇ ಅಮೆರಿಕ ಕೂಡ ಪ್ರತಿಕ್ರಿಯೆ ನೀಡಿದ್ದು, ಇಂತಹ ದುಸ್ಸಾಹಸಕ್ಕೆ ಮತ್ತೆ ಕೈ ಹಾಕಬೇಡಿ ಎಂದು ಚೀನಾಕ್ಕೆ ಎಚ್ಚರಿಕೆ ನೀಡಿದೆ.
ಬೇರೆ ದೇಶಗಳ ಭೂ ಪ್ರದೇಶ ಅತಿಕ್ರಮಿಸುವುದು, ಬೇಹುಗಾರಿಕೆ ನಡೆಸುವುದು ಚೀನಾದ ಹಳೆಯ ಛಾಳಿಯಾಗಿದೆ. ತನ್ನದೇ ತಪ್ಪಿದ್ದರೂ, ತನ್ನನ್ನು ತಾನು ಸಮರ್ಥಿಸಿಕೊಂಡಿರುವ ಚೀನಾ ನಮ್ಮ ಬಲೂನ್ ವಿಚಾರವನ್ನು ಇನ್ನಷ್ಟು ಎಳೆದಾಡಿದರೆ, ಪರಿಸ್ಥಿತಿ ನೆಟ್ಟಗಿರಲ್ಲ ಎಂದು ಅಮೆರಿಕಕ್ಕೆ ಬೆದರಿಕೆ ಹಾಕಿದೆ.
ಬಲೂನ್ ವಿಚಾರಕ್ಕೆ ಸಂಬಂಧಿಸಿದಂತೆ ಮ್ಯೂನಿಕ್ ಭದ್ರತಾ ಸಮಾವೇಶದಲ್ಲಿ ಚೀನಾದ ಹಿರಿಯ ರಾಜತಾಂತ್ರಿಕ ವಾಂಗ್ ಯಿ ಅವರೊಂದಿಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಮಾತುಕತೆ ನಡೆಸಿದ ಬಳಿಕ ಹೇಳಿಕೆ ಬಿಡುಗಡೆಗೊಳಿಸಿರುವ ಚೀನಾ, ಅಮೆರಿಕವು ಇದೇ 4ರಂದು ಹೊಡೆದು ಉರುಳಿಸಿದ ಚೀನಾದ ಬಲೂನ್ ವಿಷಯವನ್ನು ಇನ್ನಷ್ಟು ಎಳೆದಾಡಿದರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ ಎಂಬ ಎಚ್ಚರಿಕೆ ಸಂದೇಶವನ್ನು ರವಾನಿಸಿದೆ. ಅಮೆರಿಕವು ಈ ವಿಷಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಳ್ಳಬಾರದು’ ಎಂದು ಹೇಳಿಕೆ ತಿಳಿಸಿದೆ.
ಇತ್ತ ಚೀನಾ ವಿರುದ್ಧ ಕಿಡಿಕಾರಿರುವ ಅಮೆರಿಕ ವಿದೇಶಾಂಗ ಇಲಾಖೆಯ ವಕ್ತಾರ ನೆಡ್ ಪ್ರೈಸ್, ಅಮೆರಿಕದ ವಾಯುಪ್ರದೇಶದಲ್ಲಿ ಚೀನಾದ ಬೇಹುಗಾರಿಕಾ ಬಲೂನ್ ಹಾರಾಟ ನಡೆಸಿದ್ದನ್ನು ಖಂಡಿತ ಒಪ್ಪಿಕೊಳ್ಳಲಾಗದು. ಇದು ಅಮೆರಿಕದ ಸಾರ್ವಭೌಮತೆಯ ಉಲ್ಲಂಘನೆಯಾಗಿದೆ. ಇಂತಹ ದುಸ್ಸಾಹಸ ಮತ್ತೆ ಮರುಕಳಿಸಬಾರದು ಎಂದು ಪ್ರತಿ ಎಚ್ಚರಿಕೆಯನ್ನು ನೀಡಿದೆ.
ಮ್ಯೂನಿಕ್ ಸಮಾವೇಶದ ಹಿನ್ನೆಲೆಯಲ್ಲಿ ವಾಂಗ್ ಯಿ ಅವರೊಂದಿಗೆ ಮಾತುಕತೆ ನಡೆಸಿದ ವೇಳೆ ಬ್ಲಿಂಕನ್ ಅವರು ಉಕ್ರೇನ್ ವಿಷಯದಲ್ಲಿ ಚೀನಾವು ರಷ್ಯಾಕ್ಕೆ ಬೆಂಬಲ ನೀಡುತ್ತಿರುವ ವಿಷಯ ಪ್ರಸ್ತಾಪಿಸಿತು. ಜತೆಗೆ ಬಲೂನ್ ಹಾರಾಟದಿಂದಾಗಿ ಅಮೆರಿಕದ ಸಾರ್ವಭೌಮತೆಗೆ ಧಕ್ಕೆಯಾಗಿರುವ ವಿಷಯವನ್ನೂ ಎತ್ತಿ ಹಿಡಿದರು.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw