ಕ್ರೂರ: ಪತ್ನಿ ಮೇಲೆ ಗ್ಯಾಂಗ್ ರೇಪ್; ಯುಪಿಯಲ್ಲಿ ವಿಷ ಸೇವಿಸಿ ದಂಪತಿ ಆತ್ಮಹತ್ಯೆ
ಪತ್ನಿಯ ಮೇಲೆ ಗ್ಯಾಂಗ್ ರೇಪ್ ಮಾಡಿದ ಹಿನ್ನೆಲೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ಪತಿ ಇಬ್ಬರೂ ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯಲ್ಲಿ ನಡೆದಿದೆ. ಈ ಘಟನೆ ಬಗ್ಗೆ ಎಫ್ಐಆರ್ ದಾಖಲಿಸಲಾಗಿದ್ದು ಇಬ್ಬರು ವ್ಯಕ್ತಿಗಳನ್ನು ಬಂಧಿಸಲಾಗಿದೆ.
30 ವರ್ಷದ ವ್ಯಕ್ತಿ ಮತ್ತು ಆತನ 27 ವರ್ಷದ ಪತ್ನಿ ವಿಷ ಸೇವಿಸಿದ್ದಾರೆ. ಪತಿ ಅದೇ ದಿನ ಮೃತಪಟ್ಟರೆ, ಪತ್ನಿ ಗೋರಖ್‌ಪುರದ ಆಸ್ಪತ್ರೆಯಲ್ಲಿ ಮರುದಿನ ನಿಧನರಾಗಿದ್ದಾರೆ ಎಂದು ಬಸ್ತಿ ಎಸ್‌ಪಿ ಗೋಪಾಲ್ ಕೃಷ್ಣ ತಿಳಿಸಿದ್ದಾರೆ.
ಸೆಪ್ಟೆಂಬರ್ 20 ಮತ್ತು 21 ರ ಮಧ್ಯರಾತ್ರಿ ರುಧೌಲಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಅವರ ಮನೆಯಲ್ಲಿ ಇಬ್ಬರು ವ್ಯಕ್ತಿಗಳು ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ ಎಂದು ದಂಪತಿಯ ಸಂಬಂಧಿಕರು ಆರೋಪಿಸಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು, ದಂಪತಿ ಆರೋಪಿಗಳ ಹೆಸರನ್ನು ನಮೂದಿಸಿದ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಬೆಳಗ್ಗೆ ಶಾಲೆಗೆ ಹೋಗಲು ತಯಾರಾಗುತ್ತಿದ್ದಾಗ
ವಿಷ ಸೇವಿಸಿ ಸಾಯುವುದಾಗಿ ಪೋಷಕರು ತಿಳಿಸಿದ್ದಾರೆ ಎಂದು ದಂಪತಿಯ ಮಕ್ಕಳು ಪೊಲೀಸರಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ದಂಪತಿಗೆ ಎಂಟು ಮತ್ತು ಆರು ವರ್ಷದ ಇಬ್ಬರು ಗಂಡು ಮಕ್ಕಳು ಮತ್ತು ಒಂದು ವರ್ಷದ ಮಗಳು ಇದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅತ್ಯಾಚಾರ ಘಟನೆಗೆ ಸಂತ್ರಸ್ತೆಯ ಒಡೆತನದ ಜಮೀನು ಮಾರಾಟದ ವಿವಾದವೇ ಕಾರಣ ಎಂಬ ಮಾಹಿತಿ ಸಿಕ್ಕಿದೆ.