ಉತ್ತರಪ್ರದೇಶ ಮಾದರಿಯಲ್ಲಿ ದ.ಕ.ಜಿಲ್ಲೆಯಲ್ಲಿ ಪಿಕಪ್ ವಾಹನ ಚಾಲಕರ ಮೇಲೆ ಹಲ್ಲೆ | ನಾಲ್ವರ ಬಂಧನ
ಬೆಳ್ತಂಗಡಿ: ಪಿಕಪ್ ವಾಹನವನ್ನು ಅಡ್ಡಗಟ್ಟಿ, ದನ ಕಳ್ಳತನದ ಆರೋಪ ಹೊರಿಸಿ ಇಬ್ಬರು ಯುವಕರ ಮೇಲೆ ಉತ್ತರ ಪ್ರದೇಶ ಮಾದರಿಯಲ್ಲಿ ಹಲ್ಲೆ ನಡೆಸಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತ ಎನ್ನಲಾದ ಓರ್ವ ಸೇರಿದಂತೆ ಒಟ್ಟು ನಾಲ್ವರು ಆರೋಪಿಗಳನ್ನು ಬೆಳ್ತಂಗಡಿ ಪೊಲೀಸರು ಬಂಧಿಸಿದ್ದಾರೆ.
ರಾಕೇಶ್ ಭಟ್, ಗುರುಪ್ರಸಾದ್, ಲೋಕೇಶ್ ಮತ್ತು ಚಿದಾನಂದ ಎಂಬವರು ಬಂಧಿತ ಆರೋಪಿಗಳಾಗಿದ್ದಾರೆ. ಇವರ ಪೈಕಿ ರಾಕೇಶ್ ಭಟ್ ಕಾಂಗ್ರೆಸ್ ಕಾರ್ಯಕರ್ತನಾಗಿದ್ದು, ಕಳೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಂದು ತಿಳಿದು ಬಂದಿದೆ.
ಬೆಳ್ತಂಗಡಿ ತಾಲೂಕಿನ ಕುಪ್ಪೆಟ್ಟಿಯ ಪಿಕಪ್ ವಾಹನ ಹೊಂದಿರುವ 55 ವರ್ಷ ವಯಸ್ಸಿನ ರಹಿಮಾನ್ ಎಂಬವರು ಬುಧವಾರ ಸಂಜೆ ಬೆಳ್ತಂಗಡಿ ಸಂತೆಕಟ್ಟೆಯಲ್ಲಿ ಪಿಕಪ್ ನಲ್ಲಿ ಕೆಲಸಕ್ಕೆ ಬಂದಿದ್ದರು. ಹೀಗೆ ಬರುವ ವೇಳೆ ಕುಪ್ಪೆಟ್ಟಿಯ 40 ವರ್ಷ ವಯಸ್ಸಿನ ಮುಸ್ತಫಾ ಎಂಬವರನ್ನು ಕೂಡ ಜೊತೆಗೆ ಕರೆತಂದಿದ್ದರು.
ತಾವು ಹೋದ ಕೆಲಸ ಆಗದಿರುವ ಹಿನ್ನೆಲೆಯಲ್ಲಿ ಸವಣಾಲಿನಲ್ಲಿರುವ ತಮ್ಮ ಸಂಬಂಧಿಕರ ಮನೆಗೆ ತೆರಳಿ ಊಟ ಮುಗಿಸಿ ಪಿಕಪ್ ನಲ್ಲಿ ವಾಪಸ್ ಬಂದಿದ್ದಾರೆ. ಸವಣಾಲಿಗೆ ತಲುಪಿದಾಗ ಬೈಕ್ ಹಾಗೂ ಕಾರಿನಲ್ಲಿ ಅಡ್ಡಗಟ್ಟಿದ ತಂಡ, ದನಕಳ್ಳತನದ ಆರೋಪ ಹೊರಿಸಿ, ಮನುವಾದಿಗಳಂತೆ ಸ್ವಲ್ಪವೂ ಕರುಣೆ ಇಲ್ಲದೇ ರಹಿಮಾನ್ ಮತ್ತು ಮುಸ್ತಫಾ ಮೇಲೆ ಹಲ್ಲೆ ನಡೆಸಿದ್ದಾರೆ.
ಘಟನೆಯ ಬಗ್ಗೆ ಸ್ಥಳೀಯರು ಪೊಲೀಸರಿಗೆ ದೂರು ನೀಡಿದ್ದು, ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ಸಂತ್ರಸ್ತರನ್ನು ರಕ್ಷಿಸಿದ್ದಾರೆ. ಇದೀಗ ಘಟನೆಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ಕಲಂ 143, 147, 341, 504, 506, 324, 326, 355, 427 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಿಸಲಾಗಿದೆ.