ಬೆಳ್ತಂಗಡಿ: ಉತ್ತರಕ್ರಿಯೆ ನಡೆಸುತ್ತಿದ್ದಾಗಲೇ ಸತ್ತು ಹೋಗಿದ್ದ ವ್ಯಕ್ತಿ ಪ್ರತ್ಯಕ್ಷ!
ಮಂಗಳೂರು: ಮೃತಪಟ್ಟ ವ್ಯಕ್ತಿಯ ಉತ್ತರಕ್ರಿಯೆ ನಡೆಸುತ್ತಿದ್ದ ಸಂದರ್ಭದಲ್ಲಿಯೇ ಆತ ಮನೆಗೆ ಬಂದರೆ ಹೇಗಿರುತ್ತೆ? ಇಂತಹದ್ದೊಂದು ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದಲ್ಲಿ ನಡೆದಿದೆ.
ಶ್ರೀನಿವಾಸ್ ಎಂಬ ವ್ಯಕ್ತಿ ಜನವರಿ 26ರಂದು ನಾಪತ್ತೆಯಾಗಿದ್ದರು. ಫೆ.3ರಂದು ಕಲ್ಲುಂಜಕೆರೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹವೊಂದು ಪತ್ತೆಯಾಗಿತ್ತು. ಇದು ಮೃತಪಟ್ಟ ಶ್ರೀನಿವಾಸ್ ಅವರದ್ದೇ ಎಂದು ಭಾವಿಸಿದ ಕುಟುಂಬಸ್ಥರು ಅಂತ್ಯಕ್ರಿಯೆ ನೆರವೇರಿಸಿದ್ದರು. ಆ ಬಳಿಕ ಉತ್ತರಕ್ರಿಯ ನಡೆಯುತ್ತಿರುವ ಸಂದರ್ಭದಲ್ಲಿ ಶ್ರೀನಿವಾಸ್ ಅವರು ಜೀವಂತವಾಗಿ ಮನೆಗೆ ಮರಳಿದ್ದಾರೆ.
ಉತ್ತರ ಕ್ರಿಯೆಗೂ ಮೊದಲು ಇಲ್ಲಿನ ಜ್ಯೋತಿಷಿಯ ಬಳಿ ಕುಟುಂಬಸ್ಥರು ಪ್ರಶ್ನೆ ಕೇಳಿದ್ದು, ಈ ವೇಳೆ ಜ್ಯೋತಿಷಿಯು, ಶ್ರೀನಿವಾಸ ಮೃತಪಟ್ಟಿಲ್ಲ ಮರಳಿ ಬರುತ್ತಾನೆ ಎಂದು ಹೇಳಿದ್ದರಂತೆ. ಆದರೆ ಘಟನೆ ನಡೆದು 10 ದಿನಗಳ ಕಾಲ ಕುಟುಂಬಸ್ಥರು ಕಾದಿದ್ದಾರೆ. ಆ ಬಳಿಕ ಉತ್ತರ ಕ್ರಿಯೆ ನಡೆಸಲು ಮುಂದಾಗಿದ್ದಾರೆ. ಅದೇ ದಿನ ಶ್ರೀನಿವಾಸ್ ಮನೆಗೆ ಬಂದಿದ್ದು, ತನ್ನ ಉತ್ತರ ಕ್ರಿಯೆ ನಡೆಯುತ್ತಿರುವುದನ್ನು ಕಂಡು ಬೆಚ್ಚಿ ಬಿದ್ದಿದ್ದಾರೆ.