ಬಿಜೆಪಿ ಮುಖಂಡ ವಿ.ಮುರಳೀಧರನ್ ಕಾರಿನ ಮೇಲೆ ಗ್ರಾಮಸ್ಥರಿಂದ ದಾಳಿ | ಅಷ್ಟಕ್ಕೂ ನಡೆದದ್ದೇನು ಗೊತ್ತಾ?
ಪಶ್ಚಿಮ ಬಂಗಾಳ: ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಫಲಿತಾಂಶ ಹೊರ ಬಿದ್ದ ಬೆನ್ನಲ್ಲೇ ಹಿಂಸಾಚಾರ ನಡೆದಿತ್ತು. ಇದೇ ಸಂದರ್ಭದಲ್ಲಿ ಕೇರಳ ಬಿಜೆಪಿ ಮುಖಂಡ ವಿ.ಮುರಳೀಧರನ್ ಪಶ್ಚಿಮ ಬಂಗಾಳಕ್ಕೆ ತೆರಳಿದ್ದರು. ಇದೀಗ ಅವರ ಬೆಂಗಾವಲು ಕಾರಿನ ಮೇಲೆ ಇಲ್ಲಿನ ಮಹಿಳೆಯರು ಸೇರಿದಂತೆ ಹಲವು ಪುರುಷರು ದೊಣ್ಣೆ ಕಲ್ಲುಗಳಿಂದ ದಾಳಿ ನಡೆಸಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರ ಆದೇಶದಂತೆ ಪಶ್ಚಿಮ ಮಿಡ್ನಾಪುರಕ್ಕೆ ವಿ.ಮುರಳೀಧರನ್ ತೆರಳಿದ್ದರು. ಈ ವೇಳೆ ರಸ್ತೆಯಲ್ಲಿ ಬಿಜೆಪಿ ಮುಖಂಡರ ಕಾರಿಗೆ ಇಲ್ಲಿನ ಗ್ರಾಮಸ್ಥರು ಅಡ್ಡನಿಂತಿದ್ದು, ಹಿಂದಿರುಗಿ ಹೋಗುವಂತೆ ಹೇಳಿದ್ದಾರೆ. ಆದರೆ, ಬೆಂಗಾವಲು ವಾಹನ ಮುಂದಕ್ಕೆ ಚಲಿಸಲು ಯತ್ನಿಸಿದಾಗ ಕೈಗೆ ಸಿಕ್ಕ ದೊಣ್ಣೆ ಕಲ್ಲುಗಳಿಂದ ಕಾರುಗಳ ಮೇಲೆ ಜನರು ದಾಳಿ ನಡೆಸಿದ್ದಾರೆ. ಇದರಿಂದಾಗಿ ತಕ್ಷಣವೇ ಮುರಳೀಧರನ್ ವಾಪಸ್ ಆಗಿದ್ದಾರೆ.
ಈ ಘಟನೆಯ ವಿಡಿಯೋವನ್ನು ಟ್ವೀಟ್ ಮಾಡಿರುವ ವಿ.ಮುರಳೀಧರನ್, ಟಿಎಂಸಿ ಗೂಂಡಾಗಳು ಪಶ್ಚಿಮ ಮಿಡ್ನಾಪುರದಲ್ಲಿ ನನ್ನ ಬೆಂಗಾವಲು ವಾಹನದ ಮೇಲೆ ದಾಳಿ ನಡೆಸಿದ್ದಾರೆ. ವಾಹನದ ವಿಂಡೋಗಳನ್ನು ಮುರಿದು ಹಾಕಿದ್ದು, ಬೆಂಗಾವಲು ಪಡೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಹೀಗಾಗಿ ನನ್ನ ಪ್ರವಾಸವನ್ನು ರದ್ದು ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.