ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಬಂದಿರೋದು ಅಲ್ಲ | ಬಿಜೆಪಿಗೆ ವಲಸೆ ಬಂದವರಿಗೆ ರೇಣುಕಾಚಾರ್ಯ ತಿರುಗೇಟು
ಬೆಂಗಳೂರು: ಕೇವಲ 17 ಜನರಿಂದ ಬಿಜೆಪಿ ಸರ್ಕಾರ ಬಂದಿಲ್ಲ ಎನ್ನುವುದು ಸುಳ್ಳು ಎನ್ನುವುದನ್ನು “ನನ್ನಿಂದಲೇ ಬಿಜೆಪಿ ಸರ್ಕಾರ ಬಂದಿದೆ” ಎಂದು ಹೇಳುವವರು ತಿಳಿದುಕೊಳ್ಳಬೇಕಿದೆ ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ.
ವಿಧಾನಸೌಧದಲ್ಲಿಂದು ಅವರು ಮಾಧ್ಯಮಗಳ ಜೊತೆಗೆ ಮಾತನಾಡುತ್ತಾ, ಬಿಜೆಪಿಗೆ ಇತರ ಪಕ್ಷಗಳಿಂದ ವಲಸೆ ಬಂದವರ ವಿರುದ್ಧ ಅವರು ಹೇಳಿಕೆ ನೀಡಿದರು. 105 ಶಾಸಕರು ಇಲ್ಲದೇ ಇದ್ದಿದ್ರೆ ಸರ್ಕಾರ ಹೇಗೆ ಆಗುತ್ತಿತ್ತು? ಪಕ್ಷದ ಕಾರ್ಯಕರ್ತರ ತಪಸ್ಸಿನಿಂದಾಗಿ 105 ಶಾಸಕರು ಗೆದ್ದಿದ್ದರು. ಮೊದಲು 105 ಶಾಸಕರು, ಆಮೇಲೆ ಉಳಿದವರು ಎಂದು ವಲಸೆ ಬಂದವರ ಸ್ಥಾನ ಎಲ್ಲಿ ಎಂದು ಅವರು ಹೇಳಿದರು.
ಸಚಿವ ಸಂಪುಟದ ಬಗ್ಗೆ ಮಾಹಿತಿ ಇಲ್ಲ. ಸಿಎಂ ವರಿಷ್ಠರ ಜೊತೆ ಚರ್ಚೆ ಮಾಡಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ. ಸಿ.ಪಿ ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಟ್ಟರೆ ತಪ್ಪೇನು ಎಂಬ ರಮೇಶ್ ಜಾರಕಿಹೊಳಿ ಹೇಳಿಕೆ ವಿಚಾರವಾಗಿ ಮಾತನಾಡಿ, ಅದು ಅವರ ವೈಯಕ್ತಿಕ ಅಭಿಪ್ರಾಯ. ಅಂತಿಮವಾಗಿ ಪಕ್ಷದ ತೀರ್ಮಾನ ಮುಖ್ಯ ಎಂದರು.
ಇಂದು ಹತ್ತು ಜನ ಶಾಸಕರು ಒಟ್ಟಿಗೆ ಸೇರಿದ್ದೆವು. ಅದು ಕೂಡ ನಮ್ಮ ಮನೆಯಲ್ಲಿ ಉಪಹಾರಕ್ಕೆ ಸೇರಿದ್ದೆವು. ನಾವೇನು ರೆಸಾರ್ಟ್, ಹೋಟೆಲ್ ನಲ್ಲಿ ಸಭೆ ನಡೆಸಿಲ್ಲ. ನಮ್ಮ ಮನೆಯಲ್ಲಿ ಚರ್ಚೆ ನಡೆಸಿದ್ದೇವೆ. ಆದಷ್ಟು ಬೇಗ ಇಲ್ಲಿ ಚರ್ಚೆಯಾದ ವಿಚಾರಗಳನ್ನು ವರಿಷ್ಠರ ಗಮನಕ್ಕ ತರುತ್ತೇವೆ ಎಂದು ಅವರು ಹೇಳಿದರು.