ವಾಸ್ತವಗಳಿಗೆ ಮುಖಾಮುಖಿಯಾಗಿಸುವ ಜೈ ಭೀಮ್ | ನಾ ದಿವಾಕರ - Mahanayaka
3:14 AM Wednesday 11 - December 2024

ವಾಸ್ತವಗಳಿಗೆ ಮುಖಾಮುಖಿಯಾಗಿಸುವ ಜೈ ಭೀಮ್ | ನಾ ದಿವಾಕರ

jai bheem
09/11/2021

ಭಾರತದ ಶ್ರೇಣೀಕೃತ ಜಾತಿ ವ್ಯವಸ್ಥೆ ಸೃಷ್ಟಿಸಿರುವ ಸಾಮಾಜಿಕ ಪರಿಸರದಲ್ಲಿ ಇರುವ ಒಂದು ದೋಷ ಎಂದರೆ ನಮ್ಮ ಸಾಮಾಜಿಕ/ಸಾರ್ವಜನಿಕ ಪ್ರಜ್ಞೆ ವಾಸ್ತವಗಳಿಗೆ ಮುಖಾಮುಖಿಯಾಗಲು ಬಯಸುವುದಿಲ್ಲ. ಅವಾಸ್ತವಿಕ ಸಂಗತಿಗಳನ್ನು ಬಹಳ ಸುಲಭವಾಗಿ ಅಪ್ಪಿಕೊಂಡುಬಿಡುತ್ತೇವೆ. ಕಣ್ಣೆದುರು ನಡೆಯುವ ಸಾಮಾಜಿಕ ಕ್ರೌರ್ಯ ಮತ್ತು ಸಾಂಸ್ಕøತಿಕ ಅಟ್ಟಹಾಸಗಳಿಗೂ ಈ ಸಮಾಜ ತನ್ನದೇ ಆದ ಹೊದಿಕೆಯನ್ನು ಹೊದಿಸಿ, ವಾಸ್ತವವನ್ನು ಮರೆಮಾಡಿಬಿಡುತ್ತದೆ. ಇದು ಜಾತಿ ವ್ಯವಸ್ಥೆಯ ಮೂಲ ಲಕ್ಷಣ. ಹಾಗಾಗಿಯೇ ಅಸ್ಪøಶ್ಯತೆ ಇಂದಿಗೂ ನಮ್ಮ ನಡುವೆ ಜೀವಂತವಾಗಿದೆ. ಅತ್ಯಾಚಾರ ಎನ್ನುವುದು ಪುರುಷ ಸಮಾಜದ ಅಹಮಿಕೆಯ ಸಂಕೇತವಾಗಿಯೇ ಮುಂದುವರೆದಿದೆ. ಕಣ್ಣಿಗೆ ರಾಚುವ, ಢಾಳಾಗಿ ಕಾಣುವ ಸತ್ಯವನ್ನು ನೇಪಥ್ಯಕ್ಕೆ ಸರಿಸಿ, ಅದರ ಹಿಂದಿನ ಸೂಕ್ಷ್ಮಗಳನ್ನು ಹೊಸಕಿ ಹಾಕಲು ಭ್ರಮೆಗಳ ಗೋದಾಮುಗಳನ್ನೇ ನಮ್ಮ ಸಮಾಜ ಸೃಷ್ಟಿಸಿಬಿಟ್ಟಿದೆ.

ಅತ್ಯಾಚಾರವಾಗಲಿ, ಜಾತಿ ದೌರ್ಜನ್ಯವಾಗಲಿ, ಕ್ರೂರ ಹತ್ಯೆಯಾಗಲಿ ನಮ್ಮ ಸಾರ್ವಜನಿಕ ಸಂಕಥನದಲ್ಲಿ ಕೇಳಿಬರುವ ಸಾಮಾನ್ಯವಾದ ಅಭಿಪ್ರಾಯ ಎಂದರೆ “ ಇವೆಲ್ಲಾ ಎಲ್ಲೋ ಒಮ್ಮೊಮ್ಮೆ ನಡೆಯುವಂತಹುದು ಏನು ಮಾಡೋಕಾಗುತ್ತೆ ,,,,,,,”. ಈ ಅಸೂಕ್ಷ್ಮತೆಯ ಮೂಲವನ್ನು ನಾವು ಜಾತಿ ಶ್ರೇಷ್ಠತೆಯಲ್ಲೇ ಕಾಣಬಹುದು. ಇಂತಹ ದುಷ್ಕøತ್ಯಗಳನ್ನೆಸಗುವ ದುಷ್ಟ ಶಕ್ತಿಗಳನ್ನು ಪೋಷಿಸುವ ಸಾಂಸ್ಥಿಕ ನೆಲೆಗಳನ್ನೂ ಸಹ ಸಾಮಾಜಿಕವಾಗಿ, ರಾಜಕೀಯವಾಗಿ ಮತ್ತು ಸಾಂಸ್ಕøತಿಕವಾಗಿಯೂ ಒಪ್ಪಿಕೊಂಡುಬಿಟ್ಟಿದ್ದೇವೆ. ಈ “ಏನ್ಮಾಡೋಕಾಗುತ್ತೆ ,,,,,” ಎನ್ನುವ ಅಭಿವ್ಯಕ್ತಿಯೇ ನಮ್ಮ ನಡುವಿನ ಕ್ರೌರ್ಯಕ್ಕೆ ನಾಗರಿಕತೆಯ ಹೊದಿಕೆಯನ್ನು ಹೊದ್ದಿಸಿಬಿಡುತ್ತದೆ.

ಕಥುವಾ ಎಂಬ ಕುಗ್ರಾಮದಲ್ಲಿ ಎಂಟು ವರ್ಷದ ಎಳೆ ಹಸುಳೆ ಸಾಮೂಹಿಕ ಅತ್ಯಾಚಾರಕ್ಕೀಡಾದಾಗ, ಊನ ಗ್ರಾಮದಲ್ಲಿ ದಲಿತರ ಚರ್ಮ ಸುಲಿಯುವಂತೆ ಹೊಡೆದಾಗ, ಹಾಥ್ರಸ್ ಎಂಬಲ್ಲಿ ಅತ್ಯಾಚಾರಕ್ಕಿಡಾದ ಮಹಿಳೆಯನ್ನು ರಾತ್ರೋರಾತ್ರಿ ಸುಟ್ಟುಹಾಕಿದಾಗ, ಕಂಬಾಲಪಲ್ಲಿಯಲ್ಲಿ ಏಳು ದಲಿತರನ್ನು ಸಜೀವ ದಹನ ಮಾಡಿದಾಗ, ಖೈರ್ಲಂಜಿಯಲ್ಲಿ ಓರ್ವ ಮಹಿಳೆಯನ್ನು ನಗ್ನಳಾಗಿಸಿ ಅತ್ಯಾಚಾರ ಎಸಗಿದಾಗ,,,,,,, ಹೀಗೆ ಸ್ವತಂತ್ರ ಭಾರತದ ಇತಿಹಾಸದ ಪುಟಗಳನ್ನು ತಿರುವಿಹಾಕುತ್ತಿದ್ದರೆ, ಪ್ರತಿಯೊಂದು ಪುಟದಲ್ಲೂ ರಕ್ತದ ಕಲೆಗಳು ಚೆಲ್ಲಿರುವುದನ್ನು ಕಾಣಬಹುದು. ಆದರೆ ಈ ಘಟನೆಗಳಿಗೆ ನಮ್ಮ ಸಮಾಜದಲ್ಲಿ ವ್ಯಕ್ತವಾದ ತಣ್ಣನೆಯ ಮೌನವೇ ನಮ್ಮೊಳಗಿನ ಅಸೂಕ್ಷ್ಮತೆಯನ್ನು ಬಿಂಬಿಸುತ್ತದೆ ಅಲ್ಲವೇ ? ಅನ್ಯಾಯಗಳ ವಿರುದ್ಧ ಪ್ರತಿಭಟಿಸುವುದೂ ಸಹ ಸಾಪೇಕ್ಷವಾಗಿರುವ ಸಂದರ್ಭದಲ್ಲಿ ನಾವಿದ್ದೇವೆ. ಹಾಗಾಗಿ ನಮ್ಮ ದೃಷ್ಟಿ ಕ್ರೌರ್ಯಕ್ಕಿಂತಲೂ ಹೆಚ್ಚಾಗಿ, ಕ್ರೌರ್ಯಕ್ಕೊಳಗಾದವರ ಮತ್ತು ಕ್ರೌರ್ಯ ಎಸಗಿದವರ ಅಸ್ಮಿತೆಗಳ ಮೇಲೆ ನೆಟ್ಟಿರುತ್ತದೆ. ಗೋದ್ರಾದಲ್ಲಿ ಸಜೀವ ದಹನವಾದ 57 ಜೀವಗಳು, ಕ್ರಿಯೆ ಪ್ರತಿಕ್ರಿಯೆ ಪ್ರಮೇಯದಂತೆ ಗುಜರಾತ್ ಹತ್ಯಾಕಾಂಡದಲ್ಲಿ ಮಡಿದ 2000 ಜನರ ಜೀವಗಳು ಈ ಅಸ್ಮಿತೆಯ ಚೌಕಟ್ಟಿನಲ್ಲೇ ನಿಕೃಷ್ಟವಾಗಿಬಿಡುತ್ತವೆ.

ಸಾಮಾಜಿಕ ಕ್ರೌರ್ಯ ಯಾರಿಂದ ನಡೆಯುತ್ತಿದೆ ಎನ್ನುವುದಕ್ಕಿಂತಲೂ ನಮಗೆ ಮುಖ್ಯವಾಗಬೇಕಿರುವುದು ಈ ಕ್ರೌರ್ಯ ಏಕೆ ವ್ಯವಸ್ಥಿತವಾಗಿ ನಡೆಯುತ್ತಿದೆ ಎನ್ನುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳಲು ನಾವು ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಜಾತಿ ಪ್ರಣೀತ ಶ್ರೇಷ್ಠತೆ ಮತ್ತು ನಿಕೃಷ್ಟತೆಯನ್ನು ಶೋಧಿಸಬೇಕಾಗುತ್ತದೆ. ಸ್ಥಾಪಿತ ಸಾಂಸ್ಕøತಿಕ ನೆಲೆಗಳನ್ನು, ಮೌಲ್ಯಗಳನ್ನು ಒಪ್ಪಿಕೊಳ್ಳದ ಅಥವಾ ಈ ಮೌಲ್ಯಗಳಿಂದ ಭಿನ್ನವಾದ ಇತರ ಯಾವುದೆ ನೆಲೆಗಳನ್ನು ಭಾರತದ ಶ್ರೇಣೀಕೃತ ಸಮಾಜ ‘ ಪರಕೀಯ ’ ಎಂದೇ ಭಾವಿಸುತ್ತದೆ. ಇದಕ್ಕೆ ಅಸ್ಪøಶ್ಯ ಸಮುದಾಯಗಳು ಬಲಿಯಾಗಿರುವಷ್ಟೇ ಬುಡಕಟ್ಟು ಸಮುದಾಯಗಳೂ ಬಲಿಯಾಗಿವೆ. ( ಈ ಸಂದರ್ಭದಲ್ಲಿ ಹಂಪಿ ವಿಶ್ವವಿದ್ಯಾಲಯದ ಡಾ ಎ ಎಸ್ ಪ್ರಭಾಕರ್ ಅವರ “ಚಹರೆಗಳೆಂದರೆ ಗಾಯಗಳೂ ಹೌದು” ಕೃತಿಯನ್ನು ಓದುವುದು ಒಳಿತು). ಹಲವಾರು ಸಂದರ್ಭಗಳಲ್ಲಿ ಮಹಿಳೆಯರನ್ನೂ ಈ ಗುಂಪಿಗೆ ಸೇರಿಸಿಬಿಡುತ್ತೇವೆ. ಹಾಗಾಗಿಯೇ ವಸ್ತ್ರ ಸಂಹಿತೆ, ಸಂಪ್ರದಾಯದ ಕಟ್ಟುಪಾಡುಗಳು ಇತ್ಯಾದಿ,,,.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾವು ಒಂದು ಕ್ರೂರ ಸಮಾಜದಲ್ಲಿ ಬದುಕುತ್ತಿದ್ದೇವೆ. ಅಧುನಿಕತೆ ಮತ್ತು ನಾಗರಿಕತೆಯ ಮುಸುಕು ನಮ್ಮೊಳಗಿನ ಅಂತರ್ಗತ ಕ್ರೌರ್ಯವನ್ನು ಮರೆಮಾಚುತ್ತಿದೆ. ಈ ಮುಸುಕನ್ನು ತೆರೆದು ಒಳಹೊಕ್ಕು ನೋಡಿದಾಗ ಅಲ್ಲಿ ನಮಗೆ ‘ ಜೈ ಭೀಮ್ ’ ಕಾಣಲು ಸಾಧ್ಯ. ‘ಜೈ ಭೀಮ್’ಚಿತ್ರದಲ್ಲಿ ತೋರಿಸಿರುವ ಹಸಿ ಕ್ರೌರ್ಯ ಎಂತಹ ಕಠಿಣ ಹೃದಯಿಗಳನ್ನೂ ವಿಚಲಿತಗೊಳಿಸಿಬಿಡುತ್ತದೆ. ಸಾಮಾಜಿಕ ತಾಣದಲ್ಲಿ ಈ ಚಿತ್ರವನ್ನು ಕುರಿತ ಅನಿಸಿಕೆಗಳನ್ನು ಗಮನಿಸಿದಾಗ, ನಮ್ಮೊಳಗಿನ ಮಾನವ ಸಂವೇದನೆ ಇನ್ನೂ ಜೀವಂತವಾಗಿಹುದೇನೋ ಎಂದು ಭಾಸವಾಗುತ್ತದೆ. ತೆರೆಯ ಮೇಲಿನ ಕ್ರೌರ್ಯ ಮನಕಲಕುವಷ್ಟು ಮಟ್ಟಿಗೆ ನಮ್ಮ ಸುತ್ತಲಿನ ಕ್ರೌರ್ಯ ಕಲಕಿದ್ದರೆ ಭಾರತದಲ್ಲಿ ಮಾನವೀಯತೆ ಜೀವಂತವಾಗಿದೆ ಎಂದು ಹೇಳಬಹುದಿತ್ತೇನೋ. ಆದರೆ ಸತ್ಯ ಕಠೋರವಾಗಿದೆ.

ಅಸ್ಸಾಂನಲ್ಲಿ ದಶಕಗಳಿಂದ ಬಾಳಿ ಬದುಕಿದ, ದೇಶದ ಸಂಪತ್ತಿನ ವೃದ್ಧಿಗಾಗಿ ಬೆವರು ಹರಿಸಿದ ಲಕ್ಷಾಂತರ ಜನರು, 19 ಲಕ್ಷ ಎನ್ನಲಾಗಿದೆ, ನಿರಾಶ್ರಿತ ಶಿಬಿರಗಳೆಂಬ ಹಂದಿಗೂಡುಗಳಲ್ಲಿ ಕೊಳೆಯುತ್ತಿರುವುದು ನಮಗೆ ಕ್ರೌರ್ಯ ಎನಿಸುವುದಿಲ್ಲ. ಇವರ ಅಪರಾಧ ಎಂದರೆ ಪೌರತ್ವ ಸಾಬೀತುಪಡಿಸಲು ಸಾಧ್ಯವಾಗದೆ ಇರುವುದು. ಇತ್ತೀಚೆಗೆ ವ್ಯವಸ್ಥೆಯ ಕ್ರೌರ್ಯಕ್ಕೆ ಬಲಿಯಾದ ಮಾನವ ಹಕ್ಕುಗಳ ಕಾರ್ಯಕರ್ತ ಸ್ಟ್ಯಾನ್ ಸ್ವಾಮಿ ಅವರು ಬುಡಕಟ್ಟು ಸಮುದಾಯಗಳ ಸಾಂವಿಧಾನಿಕ ಹಕ್ಕುಗಳಿಗಾಗಿ ಶ್ರಮಿಸಿದ ವ್ಯಕ್ತಿ. ಇವರೊಂದಿಗೆ ದೇಶದ್ರೋಹದ ಕಾಯ್ದೆಯಡಿ (ಸೆಕ್ಷನ್ 124ಎ ಐಪಿಸಿ) 2017-18ರಲ್ಲಿ ಬಂಧನಕ್ಕೊಳಗಾದ ಸಾವಿರಾರು ಆದಿವಾಸಿಗಳ ಪೈಕಿ ನಾಲ್ಕು ಸಾವಿರಕ್ಕೂ ಹೆಚ್ಚು ಆದಿವಾಸಿಗಳು ಇಂದಿಗೂ ಕಾರಾಗೃಹದಲ್ಲೇ ಇದ್ದಾರೆ. ಈ ಬಂಧಿತ ಅಮಾಯಕರ ಅಪರಾಧ ಎಂದರೆ ತಮ್ಮ ಬದುಕುವ ಹಕ್ಕುಗಳಿಗಾಗಿ ಹೋರಾಡಿದ್ದು. ಅವರಿಗೆ ಶಿಕ್ಷೆ ವಿಧಿಸಿರುವುದು ಇದೇ ಸಂವಿಧಾನಬದ್ಧ ಸರ್ಕಾರಗಳು. ಈ ಬುಡಕಟ್ಟು ಸಮುದಾಯಗಳ ಅಸಹಾಯಕತೆಯನ್ನು ಮತ್ತು ಆಂತರಿಕ ಬೇಗುದಿಯನ್ನು ‘ ಜೈ ಭೀಮ್ ’ ಒಂದು ಪ್ರಸಂಗದ ಸುತ್ತ ಹೆಣೆದು ತೋರಿಸುತ್ತಿದೆ. ಈ ಸೆರೆವಾಸಿಗಳು ಚಿತ್ರಹಿಂಸೆಗೊಳಗಾಗುತ್ತಿಲ್ಲವಲ್ಲಾ ಎಂಬ ಭಾವನೆ ನಮ್ಮೊಳಗೆ ಬಂದುದೇ ಆದರೆ, ನಾವು ಅಸೂಕ್ಷ್ಮತೆಯ ಪರಾಕಾಷ್ಠೆ ತಲುಪಿದ್ದೇವೆ ಎಂದೇ ಅರ್ಥ. ಏಕೆಂದರೆ ಒಂದು ಇಡೀ ಸಮುದಾಯದ ಬದುಕುವ ನೆಲೆಯನ್ನೇ ಕಸಿದುಕೊಳ್ಳುವುದಕ್ಕಿಂತಲೂ ಹೆಚ್ಚಿನ ಕ್ರೌರ್ಯ ಇರಲು ಸಾಧ್ಯವೇ ? ‘ ಜೀ ಭೀಮ್ ’ ಈ ಪ್ರಶ್ನೆಯನ್ನು ನಮ್ಮ ಮುಂದಿಡುತ್ತದೆ.

ವ್ಯವಸ್ಥೆಯ ಕ್ರೌರ್ಯ ವಿಭಿನ್ನ ನೆಲೆಗಳಲ್ಲಿ ವ್ಯಕ್ತವಾಗುತ್ತಲೇ ಇರುತ್ತದೆ. ಜೈ ಭೀಮ್ ಚಿತ್ರದಲ್ಲಿ ತೋರಿಸಿರುವುದೂ ಇದನ್ನೇ. ಒಂದು ಪೊಲೀಸ್ ವ್ಯವಸ್ಥೆ ಮತ್ತೊಂದು ಅಧಿಕಾರಶಾಹಿ ಮತ್ತೊಂದು ರಾಜಕಾರಣ. ಪೊಲೀಸ್ ವ್ಯವಸ್ಥೆಯೊಳಗಿನ ಕ್ರೌರ್ಯವನ್ನು ಹಸಿಹಸಿಯಾಗಿ ಚಿತ್ರದಲ್ಲಿ ತೋರಿಸಿರುವುದು ನೋಡುಗರಿಗೆ ಮುಜುಗರ ಉಂಟುಮಾಡುವ ಸಾಧ್ಯತೆಗಳೇ ಹೆಚ್ಚು. ಆದರೆ ಇಡೀ ವ್ಯವಸ್ಥೆಯೇ ಕ್ರೌರ್ಯದಿಂದ ತುಂಬಿರುವ ಒಂದು ಸಂದರ್ಭದಲ್ಲಿ ನಿಂತಿರುವಾಗ ನಮ್ಮಲ್ಲಿ ಈ ಮುಜುಗರ ಆಗಬೇಕೆಂದಿಲ್ಲ. ವ್ಯವಸ್ಥೆ ರೂಪುಗೊಳ್ಳುವುದು ಸಮಾಜದ ಗರ್ಭದೊಳಗಿಂದ ಅದನ್ನು ಮೊನಚುಗೊಳಿಸುವುದು ರಾಜಕಾರಣ. ಮೌಖಿಕ ಕ್ರೌರ್ಯ ಹೇಗೆ ಬೌದ್ಧಿಕ ಚಿಂತನೆಯಾಗಿ ಮಾರ್ಪಟ್ಟು ಕ್ರಮೇಣ ಸಾಂಸ್ಥೀಕರಣಕ್ಕೊಳಗಾಗಿ, ವ್ಯವಸ್ಥೆಯ ಒಂದು ಭಾಗವಾಗುತ್ತದೆ ಎನ್ನುವುದನ್ನು 1990ರ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಗಮನಿಸಬಹುದು. 1990ರಲ್ಲಿ ಸಂದರ್ಭದಲ್ಲಿ ಮೌಖಿಕವಾಗಿಯೇ ಕಂಡುಬರುತ್ತಿದ್ದ ಕ್ರೌರ್ಯದ ಪರಿಭಾಷೆ 2002ರ ಗುಜರಾತ್ ಹೊತ್ತಿಗೆ ಸಾಂಸ್ಥೀಕರಣಗೊಂಡಿದ್ದನ್ನು ಗಮನಿಸಬೇಕಿದೆ.

ಪೊಲೀಸ್ ವ್ಯವಸ್ಥೆಯಲ್ಲಿ ಕ್ರೌರ್ಯ ಏಕೆ ಅಡಗಿದೆ ? ಈ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವುದು ಕಷ್ಟವೇನಲ್ಲ. ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲೇ, ಆಳುವ ವರ್ಗಗಳ ಒಂದು ಅಂಗವಾಗಿ ಕಾರ್ಯನಿರ್ವಹಿಸುವ ಪೊಲೀಸ್ ವ್ಯವಸ್ಥೆ ತನ್ನದೇ ಆದ ಸ್ವಾಯತ್ತ ನಿಲುವು ಹೊಂದಿರುವುದು ಸಾಧ್ಯವೇ ಇಲ್ಲ ಎನ್ನುವಷ್ಟು ಮಟ್ಟಿಗೆ ನಮ್ಮ ಕಾನೂನು ವ್ಯವಸ್ಥೆ ಹದಗೆಟ್ಟಿದೆ. ಈ ನಿಟ್ಟಿನಲ್ಲಿ ಸುಧಾರಣೆಗಳನ್ನು ತರುವ ಪ್ರಯತ್ನಗಳು ಸಾಕಷ್ಟು ನಡೆದಿವೆ. ಕಾಲದಿಂದ ಕಾಲಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು, ತಮ್ಮ ನಿವೃತ್ತಿಯ ನಂತರ, ವಿಬಿನ್ನ ರೀತಿಯ ಅಮೂಲ್ಯ ಸಲಹೆಗಳನ್ನೂ ನೀಡುತ್ತಲೇ ಬಂದಿದ್ದಾರೆ. ಆದರೂ ಸಾಂವಿಧಾನಿಕ ನಿಯಮಗಳಿಗನುಸಾರವಾಗಿ, ಕಾನೂನಿನ ಚೌಕಟ್ಟಿನಲ್ಲೇ ಬಂಧನಕ್ಕೊಳಗಾದ ಆರೋಪಿಗಳನ್ನು ನಿರ್ವಹಿಸುವ ಒಂದು ಪ್ರಕ್ರಿಯೆಗೆ ಚಾಲನೆ ನೀಡಲಾಗಿಲ್ಲ.

“ ಮಾನವ ಹಕ್ಕುಗಳಿಗೆ ಅತಿ ಹೆಚ್ಚು ಅಪಾಯ ಇರುವುದು ಪೊಲೀಸ್ ಠಾಣೆಗಳಲ್ಲೇ, ಕಸ್ಟಡಿಯಲ್ಲಿನ ಚಿತ್ರಹಿಂಸೆ ಮತ್ತು ಇತರ ದೌರ್ಜನ್ಯಗಳು ಭಾರತದಲ್ಲಿ ಇಂದಿಗೂ ನಡೆಯುತ್ತಿದ್ದು, ಇಲ್ಲಿ ಎಲ್ಲ ವರ್ಗದ ಆರೋಪಿಗಳೂ ಮೂರನೆ ದರ್ಜೆಯ ಶಿಕ್ಷಾ ವಿಧಾನಗಳನ್ನು ಎದುರಿಸುತ್ತಿರುವುದು ವಾಸ್ತವ ” ಎಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಮಣ ಹೇಳಿರುವುದು ಈ ಸಂದರ್ಭದಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ. ಇಲ್ಲಿ ವ್ಯಕ್ತಿಗತವಾಗಿ ಪೊಲೀಸ್ ಅಧಿಕಾರಿಗಳು ಅಪರಾಧಿಗಳಂತೆ ಕಂಡರೂ ಅವರನ್ನು ನಿಯಂತ್ರಿಸುವ ಒಂದು ಭ್ರಷ್ಟ ರಾಜಕೀಯ ವ್ಯವಸ್ಥೆ, ಕ್ರೂರ ಸಾಮಾಜಿಕ ವ್ಯವಸ್ಥೆ ಇರುವುದೂ ವಾಸ್ತವ. ಅಮಾನುಷ ರೀತಿಯಲ್ಲಿ ಕೈದಿಗಳನ್ನು ಚಿತ್ರಹಿಂಸೆಗೊಳಪಡಿಸುವ ಪೊಲೀಸ್ ಅಧಿಕಾರಿಗಳಲ್ಲೂ ಮಾನವೀಯ ಅಂತಃಕರಣ ಇರಲು ಸಾಧ್ಯ ಎನ್ನುವುದನ್ನು ಸಹ ಜೈ ಭೀಮ್ ಪರಿಣಾಮಕಾರಿಯಾಗಿ ತೋರಿಸುತ್ತದೆ.

ಒಂದು ಸಮಾಜವಾಗಿ ನಾವು ಈ ಕ್ರೌರ್ಯವನ್ನು ಹೇಗೆ ಸ್ವೀಕರಿಸಲು ಅಥವಾ ವಿರೋಧಿಸಲು ಸಾಧ್ಯ ? ಜೈಭೀಮ್ ಚಿತ್ರದಲ್ಲಿ ತೋರಿಸಲಾಗಿರುವ ಹಸಿ ಕ್ರೌರ್ಯ ನಮ್ಮ ನಡುವೆಯೇ ನಡೆಯುತ್ತಿರುವ ಹಲವಾರು ಪ್ರಸಂಗಗಳನ್ನು ಕಂಡಿದ್ದೇವೆ. (ಶ್ರೀಯುತ ನವೀನ್ ಸೂರಿಂಜೆ ಅವರ ಫೇಸ್‍ಬುಕ್ ವಾಲ್‍ನಲ್ಲಿ ಇಂತಹ ಒಂದು ಅಮಾನುಷತೆಯನ್ನು ಪರಿಚಯಿಸುವ ಲೇಖನ ಓದಬಹುದು). ಬಂಡವಾಳಶಾಹಿಯ ಲೂಟಿಯ ವಿರುದ್ಧ, ತಮ್ಮ ಬದುಕು, ನೆಲೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳಲು ಹೋರಾಡುವ ಸಾವಿರಾರು ಆದಿವಾಸಿಗಳು ‘ ಮಾವೋವಾದಿ ’ ಹಣೆಪಟ್ಟಿ ಹೊತ್ತು ಕಾರಾಗೃಹಗಳಲ್ಲಿ ಕೊಳೆಯುತ್ತಿರುವುದನ್ನೂ ನೋಡುತ್ತಿದ್ದೇವೆ. ಹೊರಗಿನ ಸಮಾಜದಲ್ಲೂ ಸಹ ಬುಡಕಟ್ಟು ಸಮುದಾಯಗಳ ಸಮಸ್ಯೆಯನ್ನು ‘ ನಮ್ಮದಲ್ಲದ ’ ಸಮಸ್ಯೆಯೆಂದೋ ಅಥವಾ ‘ ಅವರ ’ ಸಮಸ್ಯೆ ಎಂದೋ ನೋಡುವ ಮೂಲಕ ಸಮಾಜ ತನ್ನ ಅಸೂಕ್ಷ್ಮತೆಯನ್ನು ಪ್ರದರ್ಶಿಸುತ್ತಲೇ ಇದೆ.

ಮಾವೋವಾದಿ ಅಥವಾ ಭಯೋತ್ಪಾದಕ ಎಂದು ವರ್ಗೀಕರಿಸಲ್ಪಟ್ಟು ವರುಷಗಳ ಕಾಲ ಸೆರೆವಾಸ ಅನುಭವಿಸಿ ನಂತರ ನಿರಪರಾಧಿ ಎಂದು ಬಿಡುಗಡೆ ಪಡೆದ ಪ್ರಕರಣಗಳು ಸಾಕಷ್ಟಿವೆ. 1994ರಲ್ಲಿ ಬಾಂಬ್ ಸ್ಫೋಟದ ಆರೋಪದ ಮೇಲೆ ಬಂಧಿಸಲಾದ ಕಲಬುರ್ಗಿಯ ನಿಸಾರುದ್ದಿನ್ ಅಹಮದ್ ನಿರಪರಾಧಿ ಎಂದು ಬಿಡುಗಡೆಯಾಗಿದ್ದು 2016ರಲ್ಲಿ. ಸಾಬರ್‍ಮತಿ ಸ್ಫೋಟದ ಆರೋಪಿಯಾಗಿ 2001ರಲ್ಲಿ ಬಂಧಿಸಲ್ಪಟ್ಟ ಗುಲ್ಜಾರ್ ಅಹಮದ್ ಬನ್ನಿ, ಸಾಕ್ಷಿ ಪುರಾವೆಗಳಿಲ್ಲದೆ ನಿರಪರಾಧಿ ಎಂದು ಬಿಡುಗಡೆ ಹೊಂದಿದ್ದು 2017ರಲ್ಲಿ. 1994ರಲ್ಲೇ ನಸೀರುದ್ದಿನ್‍ನೊಂದಿಗೆ ಬಂಧಿಸಲ್ಪಟ್ಟ ಜಹೀರುದ್ದಿನ್ ಅಹಮದ್ ನಿರಪರಾಧಿಯಾಗಿ ಹೊರಬಂದಿದ್ದು 2016ರಲ್ಲಿ. ಇಂತಹ ಪ್ರಕರಣಗಳು ಹೇರಳವಾಗಿವೆ. ಕರ್ನಾಟಕದ ಮಲೆಕುಡಿಯ ಪ್ರಕರಣವನ್ನು ಇತ್ತೀಚೆಗಷ್ಟೇ ನೋಡಿದ್ದೇವೆ. ಭಾರತದ ಕಾರಾಗೃಹದಲ್ಲಿರುವ ಆರೋಪಿಗಳ/ಅಪರಾಧಿಗಳ ಪೈಕಿ ಶೇ 70ರಷ್ಟು, ಅಂದರೆ 3,30,000 ಜನರು ವಿಚಾರಣಾಧೀನ ಕೈದಿಗಳಾಗಿದ್ದಾರೆ. ಪ್ರತಿ ಮೂವರಲ್ಲಿ ಒಬ್ಬರು ದಲಿತರೋ, ಆದಿವಾಸಿಗಳೋ ಆಗಿರುತ್ತಾರೆ. ಈ ಸಮಸ್ಯೆಯ ಬಗ್ಗೆ ಇತ್ತೀಚೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿ ರಮಣ ಅವರೂ ಸಹ ಆತಂಕ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಶಿಕ್ಷೆಯ ಅವಧಿಯನ್ನು ಪೂರೈಸಿದ್ದರೂ ಕಾರಾಗೃಹದಲ್ಲೇ ಇರುವ ಲಕ್ಷಾಂತರ ಕೈದಿಗಳ ಬಗ್ಗೆಯೂ ಆತಂಕ ವ್ಯಕ್ತಪಡಿಸಿದ್ದಾರೆ. ಈ ವ್ಯವಸ್ಥೆಯ ಲೋಪಗಳ ವಿರುದ್ಧ ಮತ್ತು ಅಮಾಯಕರನ್ನು ಚಿತ್ರಹಿಂಸೆಗೊಳಪಡಿಸುವ ಒಂದು ಸಾಂಸ್ಥಿಕ ಕ್ರೌರ್ಯದ ವಿರುದ್ಧ ಪ್ರಜೆಗಳಾದ ನಾವು ದನಿ ಎತ್ತಿದ್ದರೆ ಬಹುಶಃ ‘ಜೈ ಭೀಮ್’ ನಮಗೆ ಇನ್ನೂ ಹತ್ತಿರವಾಗುತ್ತಿತ್ತು.

ಹಾಗಾಗಿ ಜೈ ಭೀಮ್ ಚಿತ್ರದಲ್ಲಿ ತೋರಿಸಿರುವ ಹಸಿ ಸಾಂಸ್ಥಿಕ ಕ್ರೌರ್ಯದ ಬಗ್ಗೆ ಅನುಕಂಪ ಸೂಚಿಸುವ ಮುನ್ನ ನಮ್ಮ ಸುತ್ತಲಿನ ಪರಿಸರವನ್ನು ಗಮನಿಸುವುದು ಇಂದಿನ ತುರ್ತು. ನಮ್ಮ ನಡುವೆಯೂ ಇದು ನಡೆಯುತ್ತಿದೆ. ಒಂದು ಸಮಾಜವಾಗಿ ನಾವು ಈ ಕ್ರೌರ್ಯವನ್ನು ಗಮನಿಸಲು ವಿಫಲರಾಗುತ್ತಿದ್ದೇವೆ ಹಾಗೆಯೇ ಇಂತಹ ಕ್ರೌರ್ಯದ ವಿರುದ್ಧ ದನಿಎತ್ತುವ ವ್ಯವಧಾನವನ್ನೂ ಕಳೆದುಕೊಂಡಿದ್ದೇವೆ. ಪ್ರತಿರೋಧದ ಕೆಲವೇ ದನಿಗಳು, ಮಾನವ ಹಕ್ಕು ಸಂಘಟನೆಗಳ ಮೂಲಕ, ಎನ್‍ಜಿಒಗಳ ಮೂಲಕ ಕೇಳಿಬರುತ್ತಿವೆ. ಸಹಜವಾಗಿಯೇ ಈ ಸಂಘಟನೆಗಳು, ವ್ಯಕ್ತಿಗಳು ಆಳುವ ವರ್ಗಗಳ, ಸ್ಥಾಪಿತ ವ್ಯವಸ್ಥೆಯ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಗ್ರಾಮಪಂಚಾಯತ್ ಮಟ್ಟದಿಂದ ಸಂಸತ್ತಿನವರೆಗೂ ಹರಡಿಕೊಂಡಿರುವ ಸಾಂಸ್ಥಿಕ ಕ್ರೌರ್ಯ ಮತ್ತು ಅಸೂಕ್ಷ್ಮತೆಗಳನ್ನು ಮಾನವೀಯ ನೆಲೆಯಲ್ಲಿ ಪರಾಮರ್ಶಿಸಿದಾಗ ವ್ಯವಸ್ಥೆಯೊಳಗೆ ಅಂತರ್ಗತವಾದಂತಿರುವ ಕ್ರೌರ್ಯದ ಮೂಲವನ್ನೂ ನಾವು ಶೋಧಿಸಲು ಸಾಧ್ಯ.

‘ ಜೈ ಭೀಮ್ ’ ಈ ವಿಭಿನ್ನ ಆಯಾಮಗಳನ್ನು, ಒಂದು ನೈಜ ಘಟನೆಯ ಮೂಲಕ, ನಮ್ಮ ಮುಂದೆ ತೆರೆದಿಡುತ್ತದೆ. ಹೀಗೂ ಉಂಟೇ ಎಂಬ ಅಚ್ಚರಿಯ ಅಗತ್ಯವಿಲ್ಲ. ಇರುವುದೇ ಹೀಗೆ ಎನ್ನುವ ಪರಿವೆ ಇದ್ದರೆ ಸಾಕು. ನಮ್ಮ ಪ್ರಜ್ಞೆ ಜಾಗೃತವಾಗುತ್ತದೆ.
(ಜೈ ಭೀಮ್ ಕುರಿತ ವಿಶ್ಲೇಷಣೆ ಮುಂದಿನ ಭಾಗದಲ್ಲಿ)

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ