“ನಾಟಕಗಳನ್ನು ನೋಡುವ ಮತ್ತು ಸಾಹಿತ್ಯ ಓದುವುದನ್ನು ಯುವಕರು ರೂಡಿಸಿಕೊಳ್ಳಬೇಕು”: ವಾಸುದೇವ ನಾಟಕೋತ್ಸವ

ರಾಜರಾಜೇಶ್ವರಿನಗರ: ವಾಸುದೇವ ಚಾರಿಟಬಲ್ ಟ್ರಸ್ಟ್ ಮಲ್ಲತ್ತಹಳ್ಳಿ ಮತ್ತು ಧಾತ್ರಿ ರಂಗ ಸಂಸ್ಥೆ ಸಿರಿಗೆರೆ ಸಂಯುಕ್ತವಾಗಿ ಬೆಂಗಳೂರಿನ ಮಲ್ಲತ್ತಹಳ್ಳಿ ಕನ್ಯಾಕುಮಾರಿ ವಿದ್ಯಾಸಂಸ್ಥೆಯ ಆವರಣದಲ್ಲಿ 2025 ಫೆಬ್ರವರಿ 15 ಮತ್ತು 16ನೇ ತಾರೀಖು, ಎರಡು ದಿನಗಳು “ವಾಸುದೇವ ನಾಟಕೋತ್ಸವ”ವನ್ನು ನಡೆಸಲಾಯಿತು.
ಎರಡು ದಿನದ ನಾಟಕೋತ್ಸವವನ್ನು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಮುಖಂಡರಾದ ಕುಸುಮ ಹನುಮಂತರಾಯಪ್ಪನವರು ಉದ್ಘಾಟಿಸಿದರು. ಧನಗೂರು ಷಡಕ್ಷರಿ ಪೀಠದ ಅಧ್ಯಕ್ಷರಾದ ಡಾ. ಕೂಡ್ಲೂರು ವೆಂಕಟಪ್ಪನವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಾಹಿತಿಗಳಾದ ಕರಿಗೌಡ ಬೀಚನಹಳ್ಳಿರವರು, ವಾಸುದೇವ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷರಾದ ಡಾ. ಎಚ್.ತುಕರಾಂರವರು, ಜೆ. ಎಸ್. ಪದವಿಪೂರ್ವ ಕಾಲೇಜಿನ ಮುಖ್ಯಸ್ಥರಾದ ಡಾ. ಜಯರಾಮ್ ಶೆಟ್ಟಿರವರು, ಕೆನರಾ ಬ್ಯಾಂಕ್ ಶಾಖೆಯ ವ್ಯವಸ್ಥಾಪಕರಾದ ಎಂ.ಗಿರಿಯಪ್ಪನವರು ಉಪಸ್ಥಿತರಿದ್ದರು.
ಎರಡು ದಿನದ ನಾಟಕೋತ್ಸವವನ್ನು ಉದ್ಘಾಟಿಸಿ ಕುಸುಮಾ ರವರು ಮಾತನಾಡುತ್ತಾ ಮಕ್ಕಳು ಮತ್ತು ಯುವಕರು ಮೊಬೈಲ್ ನಲ್ಲಿ ಹೆಚ್ಚು ಕಳೆದು ಹೋಗುತ್ತಿರುವುದರಿಂದ ನಾಟಕಗಳನ್ನು ನೋಡುವ ಮತ್ತು ಪುಸ್ತಕಗಳನ್ನು ಓದುವ ಕಡೆ ಗಮನ ನೀಡುತ್ತಿರುವುದು ತೀರ ಕಡಿಮೆಯಾಗಿದೆ. ಸಮಯ ಹೊಂದಿಸಿಕೊಂಡು ಪುಸ್ತಕಗಳನ್ನು ಓದುವ ಮತ್ತು ನಾಟಕಗಳನ್ನು ನೋಡುವ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಬೆಂಬಲಿಸುವ ಮತ್ತು ಪ್ರೋತ್ಸಾಹಿಸುವ ಕೆಲಸವನ್ನು ನಮ್ಮ ಸಮಾಜದ ಯುವಕರು ಮತ್ತು ಮಕ್ಕಳು ಮಾಡಬೇಕಾದ್ದು ಮುಖ್ಯ ಎಂದು ಹೇಳಿದರು.
ಡಾ. ಕೂಡ್ಲೂರು ವೆಂಕಟಪ್ಪನವರು ಅಧ್ಯಕ್ಷತೆ ವಹಿಸಿಕೊಂಡು ಮಾತನಾಡುತ್ತಾ ಕಲಾವಿದರನ್ನು ಗೌರವಿಸುವುದು, ಕಲೆಯನ್ನು ಪ್ರೋತ್ಸಹಿಸುವುದು, ನಮ್ಮ ನಿಮ್ಮೆಲ್ಲರ ಕರ್ತವ್ಯ ಕೂಡ ಒಂದಾಗಿದೆ. ಈಗಾಗಲೇ ಕೆಲವು ಜಾನಪದ ಕಲೆಗಳು ನಶಿಸಿಹೋಗಿವೆ. ಇಂತಹ ಸಂದರ್ಭದಲ್ಲಿ ನಾವು ಸಾಮಾಜಿಕ ನಾಟಕಗಳನ್ನು, ಪೌರಾಣಿಕ ನಾಟಕಗಳನ್ನು ಸಾಂಸ್ಕೃತಿಕ ಕಲೆಗಳನ್ನು ಪ್ರೋತ್ಸಾಹಿಸಿ ಬೆಳೆಸಬೇಕಾದ್ದು ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಡಾ. ಜಯರಾಮ್ ಶೆಟ್ಟಿ ಅವರು ದಕ್ಷಿಣ ಕನ್ನಡದ ಯಕ್ಷಗಾನ ಬಯಲಾಟದಲ್ಲಿ ರಾಮಾಯಣ ಮಹಾಭಾರತದ ಅನೇಕ ಕಥೆಗಳನ್ನ ಅಳವಡಿಸಿಕೊಂಡು ಅಭಿನಯಿಸುವುದನ್ನು ನಾನು ಚಿಕ್ಕಂದಿನಿಂದಲೂ ನೋಡುತ್ತಾ ಬಂದಿದ್ದೇನೆ ಎಂದು ಹೇಳಿದರು.
ಡಾ.ಎಚ್. ತುಕಾರಾಮ ರವರು ಮಾತನಾಡುತ್ತಾ ಬಿ.ವಿ. ಕಾರಂತರು, ಸಂಸಾರವರು, ಡಾ. ಸಿ. ಕೆ. ವೆಂಕಟರಾಮಯ್ಯ, ಪುಟ್ಟಸ್ವಾಮಿಯವರು, ಶಿವರಾಮ ಕಾರಂತರು, ಗಿರೀಶ್ ಕಾರ್ನಾಡ್, ಪಿ ಲಂಕೇಶ್, ಬೇಂದ್ರೆ, ಕುವೆಂಪು ಹೀಗೆ ಅನೇಕ ಕವಿಗಳು, ವಿದ್ವಾಂಸರು ಬರೆದ ನಾಟಕಗಳನ್ನು ಮಕ್ಕಳಿಗೆ ಪೋಷಕರು ಓದಿಸುವ ಅಭಿರುಚಿಯನ್ನ ಮೂಡಿಸಬೇಕು. ಕೇವಲ ಇಂಜಿನಿಯರ್ ಮತ್ತು ಡಾಕ್ಟರ್ ಗಳನ್ನಾಗಿ ಮಕ್ಕಳನ್ನು ನಿರ್ಮಾಣ ಮಾಡುವುದಷ್ಟೇ ಅಲ್ಲ ವಿವಿಧ ಚಟುವಟಿಕೆಗಳಲ್ಲಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ಹೇಳಿದರು.
ಧಾತ್ರಿ ರಂಗಸಂಸ್ಥೆಯ ಜಗದೀಶ್ ಆರ್. ಜಾನಿ ಅವರು ಮೋಳಿಗೆ ಮಾರಯ್ಯ ನಾಟಕವನ್ನು ನಿರ್ದೇಶನ ಮಾಡಿದರು. ಈ ನಾಟಕವನ್ನು ಸಾಣೆಹಳ್ಳಿ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ರಚಿಸಿದ್ದಾರೆ “ಕಾಶ್ಮೀರದಿಂದ ರಾಜತ್ವವನ್ನು ಬಿಟ್ಟು ಕಲ್ಯಾಣಕ್ಕೆ ಬಂದು ಕಟ್ಟಿಗೆ ಕಾಯಕ ದಾಸೋಹ ಮಾಡುತ್ತಾ ಬದುಕನ್ನ ತುಂಬಿಸಿದ 12ನೇ ಶತಮಾನದ ಶಿವಶರಣರಾದ ಮೋಳಿಗೆ ಮಾರಯ್ಯ ದಂಪತಿಗಳ ಜೀವನ” ಕುರಿತ ಈ ನಾಟಕ ಪ್ರೇಕ್ಷಕರ ಮನಸ್ಸನ್ನು ಸೂರೆಗೊಂಡಿತು.
ಎರಡನೇ ದಿನ ಪ್ರದರ್ಶನವಾದ ಭೀಮೇಶ್ ನಿರ್ದೇಶನದ ಶ್ರೀಕೃಷ್ಣ ಸಂಧಾನ ನಗೆ ನಾಟಕದಲ್ಲಿ ಪೌರಾಣಿಕ ನಾಟಕಕ್ಕೆ ಹಾಸ್ಯದ ಹೊನಲನ್ನು ಸೇರಿಸಿ ಪ್ರೇಕ್ಷಕರನ್ನು ರಂಜಿಸುವ ಈ ನಾಟಕ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತು. ವಂದನಾರ್ಪಣೆ ಮತ್ತು ನಿರೂಪಣೆಯನ್ನು ಕವಿ ಉದಂತ ಶಿವಕುಮಾರ್ ಅವರು ನಡೆಸಿಕೊಟ್ಟರು.
ವರದಿ: ಉದಂತ ಶಿವಕುಮಾರ
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: