ಖಾಸಗಿಯವರಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರಾ ಎಂಬ ಅನುಮಾನ: ಮಧು ಬಂಗಾರಪ್ಪ
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಆದರೆ ವಿದ್ಯುತ್ ಕೊರತೆ ಎದುರಾಗಿದೆ ಎಂದು ಮಾಜಿ ಶಾಸಕ ಮಧು ಬಂಗಾರಪ್ಪ ಹೇಳಿದ್ದಾರೆ.
ಆನವಟ್ಟಿಯಲ್ಲಿ ರೈತರ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಸೊರಬ ತಾಲೂಕಿನ ವಿವಿಧ ಭಾಗದಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ಇಷ್ಟೆಲ್ಲಾ ಮಳೆಯಾಗಿ ವಿದ್ಯುತ್ ಉತ್ಪಾದನೆಯಾಗುತ್ತಿದ್ದರೂ ರೈತರಿಗೆ ವಿದ್ಯುತ್ ಸಿಗುತ್ತಿಲ್ಲ. ಖಾಸಗಿಯವರಿಗೆ ವಿದ್ಯುತ್ ಮಾರಾಟ ಮಾಡುತ್ತಿದ್ದರಾ ಎಂಬ ಅನುಮಾನ ಮೂಡಿದೆ ಎಂದರು.
ರಾಜ್ಯ ಹಾಗೂ ಕೇಂದ್ರ ಸರ್ಕಾರದ ನಾಯಕರು ಸುಳ್ಳು ಹೇಳುತ್ತಿದ್ದಾರೆ. ಈ ಹಿಂದೆ ಬಂಗಾರಪ್ಪನವರು ರೈತರಿಗ ಉಚಿತವಾಗಿ ವಿದ್ಯುತ್ ನೀಡುತ್ತಿದ್ದರು. ವಿದ್ಯುತ್ ಕೊರತೆ ಮಾಡಿ, ನಾವು ದುಡ್ಡು ಕೊಡುತ್ತೇವೆ ವಿದ್ಯುತ್ ಕೊಡಿ ಎಂದು ರೈತರಿಂದ ಹೇಳಿಸಲು ಹೊರಟಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಮಾಡಲಾಗುತ್ತೆ. ಆದರೆ, ಜಿಲ್ಲೆಯಲ್ಲಿ ವಿದ್ಯುತ್ ಕೊರತೆ ಎದುರಾಗಿದೆ ಬೇಸರ ವ್ಯಕ್ತಪಡಿಸಿದರು.
ಕಳೆದ ಸರ್ಕಾರದ ಅವಧಿಯಲ್ಲಿ ಘೋಷಿಸಿದ ಪವರ್ ಗ್ರೀಡ್ಗಳೇ ಇನ್ನೂ ಪೂರ್ಣಗೊಂಡಿಲ್ಲ. ಅದರಲ್ಲೂ ಎಲ್ಲಾದರೂ ಕಮಿಷನ್ ಸಿಗುತ್ತಾ ಎಂದು ಯೋಚನೆ ಮಾಡುತ್ತಿದ್ದಾರೆ. ಟ್ರಾನ್ಸ್‌ಫಾರ್ಮರ್ ಸುಟ್ಟು ಹೋದರೂ, ವಾರಗಟ್ಟಲೇ ಸರಿಯಾಗಲ್ಲ. ದಿನದಲ್ಲಿ ನಾಲ್ಕು ಗಂಟೆ ವಿದ್ಯುತ್ ನೀಡಿದರೂ, ನಾಲ್ಕು ಸರಿ ಹೋಗಿ ಬರುತ್ತೆ. ಹೀಗಾದರೆ, ಬೆಳೆ ಬೆಳೆದ ರೈತರ ಪರಿಸ್ಥಿತಿ ಏನಾಗಬೇಕು. ಇನ್ನು ಮುಂದಾದರೂ ರೈತರಿಗೆ ಸಮರ್ಪಕ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿದರು.