ವಿಚ್ಛೇದನ ಪಡೆದ ಪತ್ನಿಯ ಹೆಗಲ ಮೇಲೆ ಕುಟುಂಬದ ಸದಸ್ಯರನ್ನು ಕೂರಿಸಿ ಮೆರವಣಿಗೆ ಮಾಡಿದ ಮಾಜಿ ಪತಿ
ಭೋಪಾಲ್: ವಿಚ್ಛೇದಿತ ಪತಿಯು ತನ್ನ ಮಾಜಿ ಪತ್ನಿಗೆ ವಿಚಿತ್ರ ಶಿಕ್ಷೆ ನೀಡಿದ್ದು, ತನ್ನ ಕುಟುಂಬದ ಸದಸ್ಯರನ್ನು ಹೆಗಲ ಮೇಲೆ ಹೊತ್ತುಕೊಂಡು ನಡೆಯುವಅಮಾನವೀಯ ಶಿಕ್ಷೆ ನೀಡಲಾಗಿದೆ. ಈತನ ಕೃತ್ಯದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಈ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ. ಮಹಿಳೆ ಪತಿಗೆ ವಿಚ್ಛೇದನ ನೀಡಿದ್ದಳು. ಇಬ್ಬರು ಕೂಡ ಪರಸ್ಪರ ಒಪ್ಪಿಗೆ ನೀಡುವ ಮೂಲಕ ವಿಚ್ಛೇದನ ನಡೆದಿದೆ. ವಿಚ್ಛೇದನದ ಬಳಿಕ ಮಹಿಳೆಯು ಬೇರೊಬ್ಬ ವ್ಯಕ್ತಿಯ ಜೊತೆ ಪ್ರೇಮ ಸಂಬಂಧ ಹೊಂದಿದ್ದಳು.
ಮಹಿಳೆ ಬೇರೆ ಯುವಕನ ಜೊತೆ ಪ್ರೇಮ ಸಂಬಂಧ ಹೊಂದಿದ್ದಾಳೆ ಎನ್ನುವ ಕಾರಣಕ್ಕೆ ಮಹಿಳೆಯ ಮಾಜಿ ಪತಿಯ ಕುಟುಂಬಸ್ಥರು ಹಾಗೂ ಊರಿನ ಕೆಲವರು ಮಹಿಳೆಗೆ ಕಿರುಕುಳ ನೀಡಿದ್ದು, ಮಹಿಳೆಯ ಹೆಗಲ ಮೇಲೆ ಕುಟುಂಬದ ಸದಸ್ಯರನ್ನು ಹೊರಿಸಿ 3 ಕಿ.ಮೀ. ನಡೆಸಲಾಗಿದೆ.
ಮಹಿಳೆ ಹೆಗಲ ಮೇಲೆ ಹೊತ್ತುಕೊಂಡು ನಡೆಯುತ್ತಿರುವ ವೇಳೆ ಕೋಲುಗಳಿಂದ ಮಹಿಳೆಯ ಮೇಲೆ ಹಲ್ಲೆ ನಡೆಸುವಂತೆ ಬೆದರಿಸಲಾಗುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ವಿಚ್ಛೇದನದ ಬಳಿಕವೂ ಮಹಿಳೆಯ ಮೇಲೆ ಇಂತಹದ್ದೊಂದು ಕೃತ್ಯವನ್ನು ಎಸಗಿರುವುದರ ವಿರುದ್ಧ ಇದೀಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಇನ್ನೂ ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಈ ದೂರಿನನ್ವಯ ನಾಲ್ವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.