ಸ್ವಾಮಿ ಚಿನ್ಮಯಾನಂದ ಕಾಲೇಜಿನ ವಿದ್ಯಾರ್ಥಿ ಬೆತ್ತಲೆಯಾಗಿ ಸುಟ್ಟಗಾಯಗಳೊಂದಿಗೆ ಹೆದ್ದಾರಿ ಬಳಿ ಪತ್ತೆ!
ಶಹಜಹಾನ್ ಪುರ: ವಿವಾದಿತ ಮಾಜಿ ಕೇಂದ್ರ ಸಚಿವ ಸ್ವಾಮಿ ಚಿನ್ಮಯಾನಂದ ನಡೆಸುತ್ತಿರುವ ಕಾಲೇಜಿನ ವಿದ್ಯಾರ್ಥಿನಿಯೋರ್ವಳು ಬೆತ್ತಲೆ ಸ್ಥಿತಿಯಲ್ಲಿ ಸುಟ್ಟ ಗಾಯಗಳೊಂದಿಗೆ ರಾಷ್ಟ್ರೀಯ ಹೆದ್ದಾರಿ ಬಳಿಯಲ್ಲಿ ಬಿದ್ದಿರುವ ಘಟನೆ ಬೆಳಕಿಗೆ ಬಂದಿದೆ.
ದ್ವಿತೀಯ ಬಿಎ ಕಲಿಯುತ್ತಿರುವ ವಿದ್ಯಾರ್ಥಿಗೆ ಹೇಗೆ ಸುಟ್ಟ ಗಾಯಗಳಾಯ್ತು? ಆಕೆ ಹೇಗೆ ರಸ್ತೆಯ ಬಳಿಯಲ್ಲಿ ಬೆತ್ತಲೆಯಾಗಿ ಬಿದ್ದಿದ್ದಾಳೆ ಎನ್ನುವುದು ತಿಳಿದು ಬಂದಿಲ್ಲ ಎಂದು ಇಲ್ಲಿನ ಪೊಲೀಸರು ಹೇಳಿದ್ದಾರೆ.
ವಿದ್ಯಾರ್ಥಿನಿಯು ಮ್ಯಾಜಿಸ್ಟ್ರೇಟರ್ ಮುಂದೆ ಹೇಳಿಕೆ ದಾಖಲಿಸುವ ಸ್ಥಿತಿಯಲ್ಲಿಲ್ಲ ಎಂದು ಕೂಡ ಪೊಲೀಸರು ಹೇಳಿದ್ದಾರೆ. ವಿದ್ಯಾರ್ಥಿನಿಗೆ ಶೇ.60ರಷ್ಟು ಸುಟ್ಟ ಗಾಯಗಳಾಗಿವೆ. ಆಕೆಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.
ಸೋಮವಾರ ವಿದ್ಯಾರ್ಥಿನಿ ತನ್ನ ತಂದೆಯ ಜೊತೆಗೆ ಕಾಲೇಜಿಗೆ ಹೋಗಿದ್ದಳು. ಆದರೆ ಆ ಬಳಿಕ ಆಕೆ ತರಗತಿಯಿಂದ ವಾಪಸ್ ಆಗಿಲ್ಲ. ಬಳಿಕ ಲಕ್ನೋ-ಬರೇಲಿ ಹೆದ್ದಾರಿಯ ಬಳಿಯಲ್ಲಿ ನಗ್ನವಾಗಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ತಂದೆ ವಾರಕ್ಕೊಮ್ಮೆ ಕಾಲೇಜಿಗೆ ಮಗಳನ್ನು ಕರೆದುಕೊಂಡು ಬಂದು, ಆಕೆ ವಾಪಸ್ ಬರುವರೆಗೆ ಕಾದು ಕರೆದುಕೊಂಡು ಹೋಗುತ್ತಿದ್ದರು. ಆದರೆ, ಈ ಬಾರಿ ಮಗಳನ್ನು ಎಷ್ಟು ಕಾದರೂ ಆಕೆ ಬಂದಿಲ್ಲ.
ವಿದ್ಯಾರ್ಥಿನಿಗೆ ತಾನು ಕಾಲೇಜಿನ 3ನೇ ಮಹಡಿಯಲ್ಲಿ ಇದ್ದದ್ದು ಮಾತ್ರವೇ ತಿಳಿದಿದೆ ಎಂದು ಹೇಳಲಾಗಿದೆ. ಜಲಾಲಾಬಾದ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ವಿದ್ಯಾರ್ಥಿನಿ ಚಿನ್ಮಯಾನಂದರ ಮುಮುಕ್ಷು ಆಶ್ರಮ ನಡೆಸುತ್ತಿದ್ದ ಸ್ವಾಮಿ ಸುಖದೇವಾನಂದ ಸ್ನಾತಕೋತ್ತರ ಕಾಲೇಜಿನಲ್ಲಿ ಅಧ್ಯಯನ ಮಾಡುತ್ತಿದ್ದಳು. ಸ್ವಾಮಿ ಚಿನ್ಮಯಾನಂದ ಕಾಲೇಜು ವಿದ್ಯಾರ್ಥಿನಿಯರಿಗೆ ಸೇಫ್ ಅಲ್ಲ ಎಂದು ಈ ಘಟನೆಯ ಮೂಲಕ ಮತ್ತೆ ಸಾಬೀತಾಗುತ್ತಿದೆ.