ವಿದ್ಯಾರ್ಥಿನಿ ಜೊತೆಗೆ ನಡೆದುಕೊಂಡು ಬರುತ್ತಿದ್ದ ವಿದ್ಯಾರ್ಥಿಗೆ ನಡು ರಸ್ತೆಯಲ್ಲಿ ಮನಬಂದಂತೆ ಥಳಿಸಿದ ಆಟೋ ಚಾಲಕ
ಕಣ್ಣೂರು: ತನ್ನ ಸಹಪಾಠಿ ವಿದ್ಯಾರ್ಥಿನಿಯೊಂದಿಗೆ ನಡೆದುಕೊಂಡು ಹೋಗುತ್ತಿದ್ದ 10ನೇ ತರಗತಿ ಬಾಲಕನನ್ನು ಆಟೋ ಚಾಲಕ ರಸ್ತೆಯಲ್ಲಿಯೇ ಅಮಾನುಷವಾಗಿ ಥಳಿಸಿದ ಅಮಾನವೀಯ ಥಳಿಸಿದ ಘಟನೆ ಕೇರಳದಲ್ಲಿ ನಡೆದಿದೆ.
ಪಣಪ್ಪೂರಿನ 10ನೇ ತರಗತಿ ವಿದ್ಯಾರ್ಥಿ ಹಲ್ಲೆಗೊಳಗಾದ ವಿದ್ಯಾರ್ಥಿಯಾಗಿದ್ದಾನೆ. ವಿದ್ಯಾರ್ಥಿಯು ತನ್ನ ತರಗತಿ ವಿದ್ಯಾರ್ಥಿನಿ ಜೊತೆಗೆ ನಡೆದುಕೊಂಡು ಬರುತ್ತಿದ್ದ ವೇಳೆ ಆಟೋ ಚಾಲಕ ಗಿನೇಶ್ ಎಂಬಾತ ವಿದ್ಯಾರ್ಥಿಯನ್ನು ಪ್ರಶ್ನಿಸಿ ಕಾಲರ್ ಹಿಡಿದು ಮುಖಕ್ಕೆ ಹಲ್ಲೆ ನಡೆಸಿದ್ದಾನೆ.
ಸಾರ್ವಜನಿಕರ ಎದುರೇ ಈ ಹಲ್ಲೆ ನಡೆದರೂ ಯಾರೊಬ್ಬರೂ ಈ ಹಲ್ಲೆಯನ್ನು ಆರಂಭದಲ್ಲಿ ತಡೆಯಲಿಲ್ಲ. ಆತ ಮತ್ತೆ ಮತ್ತೆ ನಿರಂತರವಾಗಿ ಬಾಲಕನಿಗೆ ಹಲ್ಲೆ ನಡೆಸಿದಾಗ ಸ್ಥಳೀಯರು ಆತನನ್ನು ತಡೆದಿದ್ದಾರೆ. ಘಟನೆಯ ಸಿಸಿ ಕ್ಯಾಮರ ದೃಶ್ಯಾವಳಿಯನ್ನು ಬಿಡುಗಡೆ ಮಾಡಲಾಗಿದೆ.
ಎಸೆಸೆಲ್ಸಿ ಮಾದರಿ ಪರೀಕ್ಷೆಯ ಬಳಿಕ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿ ಜೊತೆಯಾಗಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಮುತರಪೆಡಿಕಾದಲ್ಲಿ ನಡು ರಸ್ತೆಯಲ್ಲಿಯೇ ಆಟೋ ಚಾಲಕ ವಿದ್ಯಾರ್ಥಿಯನ್ನು ತಡೆದು ಮನ ಬಂದಂತೆ ಹಲ್ಲೆ ನಡೆಸಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಬಾಲಕನ ತಂದೆ, ಪೊಲೀಸರು ಈ ಪ್ರಕರಣವನ್ನು ರಾಜಿಯಲ್ಲಿ ತೆಗೆಯಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಈ ನಡುವೆ ಪೊಲೀಸರು, ಈ ಪ್ರಕರಣದ ತನಿಖೆ ಪ್ರಗತಿಯಲ್ಲಿದೆ ಎಂದು ತಿಳಿಸಿದ್ದಾರೆ.