ಶಾಲಾ ಶುಲ್ಕ ಪಾವತಿಸದ ವಿದ್ಯಾರ್ಥಿನಿಗೆ ಅವಮಾನ | ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ
ಹೈದರಾಬಾದ್: ಶಾಲಾ ಶುಲ್ಕ ಪಾವತಿಸದೇ ಶಾಲೆಗೆ ಹಾಜರಾಗಲು ಅನುಮತಿ ನೀಡದೇ ವಿದ್ಯಾರ್ಥಿನಿಯನ್ನು ಅವಮಾನಿಸಿದ್ದು, ಇದರಿಂದ ನೊಂದ 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾದ ಅಮಾನವೀಯ ಘಟನೆಯೊಂದು ಹೈದರಾಬಾದ್ ನಲ್ಲಿ ನಡೆದಿದೆ.
ಬಾಲಕಿಯ ತಂದೆ ಹರಿಪ್ರಸಾದ್ ಕೂಲಿ ಕಾರ್ಮಿಕರಾಗಿದ್ದಾರೆ. ಶಾಲೆಯ ಒಟ್ಟು ಶುಲ್ಕ 37,000 ರೂ. ಆಗಿದ್ದು, ಅದರ ಒಂದು ಕಂತು 15,000 ಈಗಾಗಲೇ ತಂದೆ ಕಟ್ಟಿದ್ದರು. ಆದರೆ ಈ ನಡುವೆ ಲಾಕ್ ಡೌನ್ ನಿಂದಾಗಿ ಕೆಲಸ ಇಲ್ಲದೇ ಉಳಿದ ಮೊತ್ತವನ್ನು ಪಾವತಿಸಲು ಸಾಧ್ಯವಾಗಿರಲಿಲ್ಲ. ಆದರೂ, ವಿದ್ಯಾರ್ಥಿನಿಯ ತಂದೆ ತಾನು ಫೆ.20ರೊಳಗೆ ಶುಲ್ಕ ಪಾವತಿಸುವುದಾಗಿ ಶಾಲೆಯನ್ನು ಮನವಿ ಮಾಡಿಕೊಂಡಿದ್ದರು. ಆದರೂ ಶಾಲಾ ಆಡಳಿತ ಮಂಡಳಿ ಶುಲ್ಕ ಪಾವತಿಸುವಂತೆ ಒತ್ತಡ ಹಾಕಲಾಗಿದೆ.
ಶುಲ್ಕ ಪಾವತಿಸಿಲ್ಲ ಎಂದು ಶಾಲೆಯಲ್ಲಿ ಅವಮಾನಿಸಲಾಗುತ್ತಿತ್ತು. ಇದರಿಂದಾಗಿ ಆಕೆಗೆ ಶಾಲೆಗೆ ಹೋಗಲು ಕೂಡ ಇಷ್ಟವಿರಲಿಲ್ಲ. ಶಾಲಾ ಶುಲ್ಕ ಪಾವತಿಸಿ ಎಂದು ಶಾಲೆಯಿಂದ ಮಗಳಿಗೆ ಕರೆ ಮಾಡಲಾಗುತ್ತಿದ್ದು, ಶುಲ್ಕ ಪಾವತಿಸುವವರೆಗೆ ಶಾಲೆಗೆ ಹಾಜರಾಗುವುದು ಬೇಡ ಎಂದು ವಿದ್ಯಾರ್ಥಿಗೆ ಎಚ್ಚರಿಕೆ ನೀಡಲಾಗಿತ್ತು.
ಈ ನಡುವೆ ಬಾಲಕಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಶಾಲೆ ಶುಲ್ಕು ಕಟ್ಟದೇ ಇರುವುದಕ್ಕೆ ಮಗಳನ್ನು ಅವಮಾನಿಸಲಾಗಿದ್ದು, ಇದರಿಂದ ನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಬಾಲಕಿಯ ತಾಯಿ ಕಣ್ಣೀರಿಟ್ಟಿದ್ದಾರೆ. ಈ ಪ್ರಕಣಕ್ಕೆ ಸಂಬಂಧಿಸಿದಂತೆ ಶಾಲಾ ಆಡಳಿತ ಮಂಡಳಿ ವಿರುದ್ಧ ಪೊಲೀಸರು ದೂರು ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಂಡಿದೆ.