ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆ | ಬಿಸಿಎಂ ಅಧಿಕಾರಿಯ ವಿಕೃತ ಬುದ್ಧಿಗೆ ಗತಿ ಕಾಣಿಸಿದ ಜಿ.ಪಂ. ಸದಸ್ಯೆ - Mahanayaka
4:19 PM Wednesday 11 - December 2024

ವಿದ್ಯಾರ್ಥಿನಿಯರ ಜೊತೆಗೆ ಅಸಭ್ಯ ವರ್ತನೆ | ಬಿಸಿಎಂ ಅಧಿಕಾರಿಯ ವಿಕೃತ ಬುದ್ಧಿಗೆ ಗತಿ ಕಾಣಿಸಿದ ಜಿ.ಪಂ. ಸದಸ್ಯೆ

mallikarjuna ponnampete
09/04/2021

ಮಡಿಕೇರಿ: ಮೆಟ್ರಿಕ್ ನಂತರದ ಬಾಲಕಿಯರ ವೃತ್ತಿಪರ ವಿದ್ಯಾರ್ಥಿನಿಲಯದ ವಿದ್ಯಾರ್ಥಿನಿಯರ ಜೊತೆಗೆ  ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಎಸ್.ಟಿ. ಮಲ್ಲಿಕಾರ್ಜುನ್ ಅಸಭ್ಯವಾಗಿ ವರ್ತಿಸುತ್ತಿದ್ದಾರೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ.

ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಆಗಾಗ್ಗೆ ಭೇಟಿ ನೀಡಿ, ನಿಲಯದ ಶೌಚಾಲಯಗಳನ್ನು ಬಳಸುವುದಲ್ಲದೆ, ವಿದ್ಯಾರ್ಥಿನಿಯರು ಮಲಗಿರುವ ವೇಳೆ ದಿಢೀರಾಗಿ ಕೋಣೆಗೆ ಭೇಟಿ ನೀಡಿ, ವಿದ್ಯಾರ್ಥಿನಿಯರು ಬಟ್ಟೆ ಬದಲಾಯಿಸುವ ಬಗ್ಗೆ ಟೀಕೆ ವ್ಯಕ್ತಪಡಿಸಿ ಅಸಭ್ಯ ಹಾಗೂ ಅನುಚಿತವಾಗಿ ವರ್ತಿಸುತ್ತಿದ್ದರು ಎಂದು ಆರೋಪಿಸಲಾಗಿದೆ.

ಇಷ್ಟೊಂದು ಗಂಭೀರ ಸಮಸ್ಯೆ ಇದ್ದರೂ ಇಲಾಖೆಯ ಹಿರಿಯ ಅಧಿಕಾರಿಗಳು ಮಲ್ಲಿಕಾರ್ಜುನ್ ವಿರುದ್ಧ ಕ್ರಮಕೈಗೊಳ್ಳದೇ ಬುದ್ಧಿ ಹೇಳುತ್ತಾ ಕುಳಿತುಕೊಂಡಿದ್ದರು. ಇದರಿಂದ ಬೇಸತ್ತ ವಿದ್ಯಾರ್ಥಿನಿಯರು  ಪೊನ್ನಂಪೇಟೆ ಜಿಲ್ಲಾ ಪಂಚಾಯಿತಿ ಸದಸ್ಯೆ ಶ್ರೀಜಾ ಸಾಜಿ ಅಚ್ಚುತ್ತನ್ ಬಳಿ ತೋಡಿಕೊಂಡಿದ್ದರು. ಅಲ್ಲದೆ ವಿದ್ಯಾರ್ಥಿನಿಯರು ಲಿಖಿತವಾಗಿ ಪತ್ರ ನೀಡಿದ್ದರು. ಪತ್ರದ ಆಧಾರದ ಮೇಲೆ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿದ ವೇಳೆ ಸಮಸ್ಯೆಯ ಗಂಭೀರತೆ ಜಿಲ್ಲಾ ಪಂಚಾಯಿತಿ ಸದಸ್ಯರ ಗಮನಕ್ಕೆ ಬಂದಿದೆ.

ಕೊಡಗು ಜಿ.ಪಂ ಸದಸ್ಯರು ಬಿಸಿಎಂ ಅಧಿಕಾರಿಗೆ ತಕ್ಕ ಪಾಠ ಕಲಿಸಲು ಮುಂದಾಗಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಬೆಂಗಳೂರಿನ ಆಯುಕ್ತರಿಗೆ ಪತ್ರ ಬರೆದು ನಡೆಯುತ್ತಿರುವ ಘಟನೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ಪತ್ರಕ್ಕೆ ಪ್ರತಿಕ್ರಿಯೆ ನೀಡಿದ ಅಧಿಕಾರಿಗಳು, ಅಧಿಕಾರಿಯ ಕಾರ್ಯವೈಖರಿಯ ಬಗ್ಗೆ ಪರಿಶೀಲಿಸಿ ವರದಿ ನೀಡುವಂತೆ ಹಿರಿಯ ಅಧಿಕಾರಿಗಳನ್ನು ಕಳುಹಿಸಿಕೊಟ್ಟಿದ್ದಾರೆ. ಅಧಿಕಾರಿಗಳ ವರದಿಯ ಹಿನ್ನೆಲೆಯಲ್ಲಿ ಆಯುಕ್ತರು ಕರ್ತವ್ಯ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ, ನಿಲಯಗಳ ಸುಗಮ ನಿರ್ವಹಣೆಯಲ್ಲಿ ವಿಫಲತೆ, ವಿದ್ಯಾರ್ಥಿ ನಿಲಯದಲ್ಲಿ ಅಸಭ್ಯ ವರ್ತನೆ, ಹಿನ್ನೆಲೆಯಲ್ಲಿ ತಾಲೂಕು ಅಧಿಕಾರಿ ಮಲ್ಲಿಕಾರ್ಜುನ ಇವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ನೀಡಿದ್ದಾರೆ.

ಇತ್ತೀಚಿನ ಸುದ್ದಿ