ದೇಸಿಗೋತಳಿಯ ಸಗಣಿ ಬಳಸಿ ಮಣ್ಣಿನಲ್ಲಿ ಜೀವಾಣುಗಳನ್ನು ಸೃಷ್ಟಿಸಿ: ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಸ್ವೀಕರಿಸಿದ ಚಂದ್ರಶೇಖರ ನಾರಾಣಾಪುರ - Mahanayaka
2:04 AM Thursday 12 - December 2024

ದೇಸಿಗೋತಳಿಯ ಸಗಣಿ ಬಳಸಿ ಮಣ್ಣಿನಲ್ಲಿ ಜೀವಾಣುಗಳನ್ನು ಸೃಷ್ಟಿಸಿ: ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಸ್ವೀಕರಿಸಿದ ಚಂದ್ರಶೇಖರ ನಾರಾಣಾಪುರ

vijaya karnataka
11/01/2023

ರೈತರು ರಾಸಾಯನಿಕಗಳ ಬೆನ್ನತ್ತಿ ಹೋಗುವುದಕ್ಕಿಂತ ದೇಸಿಗೋತಳಿ ಹಿಂದೆಹೋಗಿ, ದೇಸಿಗೋತಳಿಯ ಸಗಣಿ ಬಳಸಿ ಮಣ್ಣಿನಲ್ಲಿ ಜೀವಾಣುಗಳನ್ನು ಸೃಷ್ಟಿಸಿ, ತೋಟದಲ್ಲಿಕಳೆ ಬೆಳೆಯಲು ಬಿಟ್ಟು ಸಮರ್ಥ ನಿರ್ವಹಣೆಮಾಡಿ. ಎರೆಹುಳು ಬೆಳವಣಿಗೆಗೆ ಪೂರಕ ವಾತಾವರಣ ಸೃಷ್ಟಿಸಿ ನಿಮ್ಮ ತೋಟ, ಗದ್ದೆ, ಹೊಲವನ್ನು ಶ್ರೀಮಂತವಾಗಿಸಿ.

ಇದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರಗತಿಪರ ಕೃಷಿಕ ಚಂದ್ರಶೇಖರ ನಾರಾಣಾಪುರ ಅವರ ಕಿವಿಮಾತು.

ಮೂಡಿಗೆರೆ ತಾಲೂಕು ಬಿ.ಹೊಸಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭಾರತಿಬೈಲು ಗ್ರಾಮದ ಮಲ್ಲಿಗೆ ಭವನದಲ್ಲಿ ಮಂಗಳವಾರ ‘ವಿಜಯ ಕರ್ನಾಟಕ’ ದಿನ ಪತ್ರಿಕೆ ಆಯೋಜಿಸಿದ್ದ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿಲಾಭದಾಯಕ ಕೃಷಿ ಉಪನ್ಯಾಸ ಮತ್ತು ಸಂವಾದದಲ್ಲಿಅವರು ಮಾತನಾಡಿದರು.

ಅತಿಯಾದ ರಾಸಾಯನಿಕಗಳ ಬಳಕೆಯಿಂದ ಜೀವಾಣುಗಳು ಮೃತಪಟ್ಟು ಮಣ್ಣು ಬರಡಾಗಿಹೋಗಿದೆ. ಮಣ್ಣಿನ ಆರೋಗ್ಯಕಾಪಾಡಲು ಬೇಕಾದಜೀವಾಣುಗಳಿಲ್ಲದೆ ಬೆಳೆಗಳಿಗೆ ಹೊಸ ಕಾಯಿಲೆಗಳು ಅಮರಿಕೊಳ್ಳುತ್ತಿವೆ. ಮಣ್ಣಿನಲ್ಲಿ ಜೀವಾಣುಗಳು ಹುಟ್ಟುವಂತೆ ಮಾಡದ ಹೊರತು ಕೃಷಿ ಮತ್ತು ರೈತರು ಉಳಿಯಲು ಸಾಧ್ಯವಿಲ್ಲ. ಒಂದುಮಲೆನಾಡುಗಿಡ್ಡಗೋತಳಿಯ ಆಕಳ ಮೂತ್ರಮತ್ತು ಸಗಣಿಯು ಮೂವತ್ತು ಎಕರೆ ಭೂಮಿಗೆ ಶಕ್ತಿ ನೀಡುತ್ತದೆ. ಅದಕ್ಕಾಗಿ ದೇಸಿಗೋವುಗಳನ್ನು ಸಾಕಬೇಕುಎಂದರು.

ನಮ್ಮ ಪರಿಸರಕ್ಕೆ ಪೂರಕವಾದಕೃಷಿ ಪದ್ಧತಿಯನ್ನು ರೂಢಿಸಿಕೊಳ್ಳಬೇಕು. ವಿದೇಶಿಕೃಷಿ ಪದ್ಧತಿಯನ್ನು ಅಳವಡಿಸಿಕೊಂಡು ಹಸಿರು ಕ್ರಾಂತಿ ಹೆಸರಲ್ಲಿ ರಾಸಾಯನಿಕಗಳನ್ನು ಮನಬಂದಂತೆ ಬಳಸಿ ಭೂಮಿಯ ಶಕ್ತಿ ಹೀನವಾದರೆ, ಕ್ಷೀರಕ್ರಾಂತಿಯಲ್ಲಿ ನಮ್ಮ ದೇಸಿಗೋವು ತಳಿಗಳನ್ನೇ ಸರ್ವನಾಶ ಮಾಡಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಧಕ ರೈತರಿಗೆ ವಿಕ ಸೂಪರ್ ಸ್ಟಾರ್ ರೈತ ಪ್ರಶಸ್ತಿ ಪ್ರದಾನ ಮಾಡಿದ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಅರಣ್ಯ ಭೂಮಿಯನ್ನು ಒತ್ತುವರಿ ಮಾಡಿಕೊಂಡ ರೈತರನ್ನು ಭೂಗಳ್ಳರೆಂಬ ಪಟ್ಟಕಟ್ಟುತ್ತಿದ್ದ ಕಾಯಿದೆಗೆ ರಾಜ್ಯ ಸರಕಾರ ತಿದ್ದುಪಡಿತಂದಿದೆ. ಯಾವುದೇ ರೈತರ ಮೇಲೆ ಮೊಕದ್ದಮೆ ದಾಖಲಿಸದಂತೆ ಸರಕಾರ ಕ್ರಮಕೈಗೊಂಡಿದೆ. 20 ವರ್ಷಕ್ಕೂ ಹಿಂದೆ ದೊಡ್ಡ ಪ್ರಮಾಣದಲ್ಲಿ ಭೂಮಿ ಒತ್ತುವರಿಮಾಡಿಕೊಂಡ ರೈತರಿಗೆ ಎಕರೆಗೆ 2 ಸಾವಿರದಂತೆ 30 ವರ್ಷಕ್ಕೆಲೀಸ್‌ ಗೆ ನೀಡುವ ಹೊಸಕಾಯಿದೆಯನ್ನು ಜಾರಿಗೊಳಿಸುತ್ತಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಕಾರಿ ಕೆ.ಎನ್.ರಮೇಶ್ ಮಾತನಾಡಿ, ಅತಿವೃಷ್ಠಿ, ಅನಾವೃಷ್ಠಿ, ಫಲವತ್ತತೆಕಳೆದುಕೊಳ್ಳುತ್ತಿರುವ ಮಣ್ಣುಮತ್ತು ಹವಾಮಾನ ವೈಪರಿತ್ಯಗಳ ನಡುವೆ ಏರುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಆಹಾರ ಬೆಳೆಗಳ ಉತ್ಪಾದನೆ ಹೆಚ್ಚಳ ಮಾಡಬೇಕಾದ ದೊಡ್ಡಸವಾಲು ದೇಶದ ರೈತರ ಮುಂದಿದೆ. ಹೀಗಾಗಿ ರೈತರು ಸಮಗ್ರ ಕೃಷಿ ಪದ್ಧತಿ, ಹೊಸತನವನ್ನು ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ದೇಶದ ಆಹಾರದ ಕೊರತೆಯನ್ನು ನೀಗಿಸುವುದರ ಜತೆಗೆ ರೈತನ ಆದಾಯವನ್ನು ವೃದ್ಧಿಸುತ್ತದೆ ಎಂದರು.

ಮೂಡಿಗೆರೆ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ನಾರಾಯಣ ಎಸ್.ಮಾವರ್ಕರ್ ಮಾತನಾಡಿ, ಗಡಿಯಲ್ಲಿ ಯೋಧರು ಹಗಲು ರಾತ್ರಿ ದೇಶರಕ್ಷಣೆ ಮಾಡಿದರೆ, ನಾಡಿನೊಳಗೆ ರೈತರು ಆಹಾರ ಉತ್ಪನ್ನಗಳನ್ನು ಬೆಳೆದು ದೇಶದ ಹಸಿವು ನೀಗಿಸುವ ಕೆಲಸ ಮಾಡುತ್ತಿದ್ದಾರೆ. ಯಾವುದೇ ಕಾರ್ಖಾನೆಗಳು ನಿಲ್ಲಬಹುದು. ಆದರೆ, ರೈತನ ಕೃಷಿ ಕಾರ್ಖಾನೆಯು ಯಾವುದೇ ವಿಪತ್ತು ಸಂಭವಿಸಿದರೂ ಬಂದ್ ಆಗುವುದಿಲ್ಲ. ಅಂತಹ ರೈತರನ್ನು ಗುರುತಿಸಿ ಪ್ರಶಸ್ತಿ ನೀಡುವ ಪವಿತ್ರವಾದ ಕಾರ್ಯವನ್ನು ವಿಜಯ ಕರ್ನಾಟಕ ಮಾಡುತ್ತಿದೆ ಎಂದರು.

ಆರೋಗ್ಯ ತಪಾಸಣೆ ಶಿಬಿರ:

ಕಾರ್ಯಕ್ರಮ ಹಿನ್ನೆಲೆಯಲ್ಲಿಉಚಿತ ಆರೋಗ್ಯತಪಾಸಣೆ ಶಿಬಿರ ನಡೆಸಲಾಯಿತು. ಶಿಬಿರದಲ್ಲಿ ಕಣ್ಣಿನ ಪರೀಕ್ಷೆ ಮಾಡಿ ಹಲವರಿಗೆ ಉಚಿತವಾಗಿ ಕನ್ನಡಕಗಳನ್ನು ವಿತರಿಸಲಾಯಿತು. ಅರಣ್ಯ ಇಲಾಖೆಯಿಂದ ರೈತರಿಗೆ ಉಚಿತವಾಗಿ ಹಣ್ಣಿನ ಸಸಿಗಳನ್ನು ವಿತರಿಸಲಾಯಿತು.

ಆರೋಗ್ಯಇಲಾಖೆ, ಹಿಂದುಳಿದವರ್ಗಗಳಇಲಾಖೆ, ಅರಣ್ಯ ಇಲಾಖೆ, ಕೃಷಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ವಸ್ತುಪ್ರದರ್ಶನ ಹಾಗೂ ವನ್ಯಜೀವಿ ಛಾಯಾಗ್ರಾಹಕರಾದ ಎಚ್.ಎಸ್.ಶಿವಕುಮಾರ್, ನಂದೀಶ್ ಬಂಕೇನಹಳ್ಳಿ, ಸುದೀಶ್ ಕಳಸ ಅವರ ಅಪರೂಪದ ಛಾಯಾಚಿತ್ರಗಳನ್ನು ಪ್ರದರ್ಶಿಸಲಾಯಿತು. ಬಕ್ಕಿ ಮಂಜುನಾಥ್ ಮತ್ತು ಸಂಗಡಿಗರು ಗೀತಗಾಯನ ನಡೆಸಿಕೊಟ್ಟರು. ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ನಾರಾಯಣ ಎಸ್.ಮಾವರ್ಕರ್‌ಹಣ್ಣಿನ ಗಿಡಗಳನ್ನು ರೈತರಿಗೆ ವಿತರಿಸುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

ಜಿಲ್ಲಾ ಉಪ ಕೃಷಿ ನಿರ್ದೇಶಕಮುನೇಗೌಡ, ಗ್ರಾಮಪಂಚಾಯಿತಿ ಅಧ್ಯಕ್ಷೆ ಬಿ.ಸಿ.ಸುನೀತಾ, ಕಾಫಿ ಬೆಳೆಗಾರರಾದ ನಾರ್ಬರ್ಟ್ ಸಾಲ್ಡಾನ, ಸಾವಿತ್ರಮ್ಮ ಮಂಜುನಾಥ್, ಎಚ್.ಎನ್.ಶರತ್ ಇದ್ದರು. ವಿಜಯಕರ್ನಾಟಕ ಸ್ಥಾನಿಕ ಸಂಪಾದಕ ಆರಗ ರವಿ ಪ್ರಾಸ್ತಾವಿಕ ಮಾತನಾಡಿದರು. ಜಿಲ್ಲಾ ವರದಿಗಾರ ಚೇತನ್ ಬೇಲೇನಹಳ್ಳಿ ಸ್ವಾಗತಿಸಿ, ಕಾಫಿ ಬೆಳೆಗಾರರವಿಶಂಕರ್ ವಂದಿಸಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ