ಮಳೆ, ಗುಡ್ಡ ಕುಸಿತ, ಪ್ರವಾಹ ಸಂಭವಿಸಿದಾಗ ಅಧಿಕಾರಿಗಳಲ್ಲಿ ಸಮನ್ವಯತೆ ಅಗತ್ಯ: ಡಾ.ರಾಜೇಂದ್ರ
ಮಂಗಳೂರು: ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ತಂಡವಾಗಿ ಕಾರ್ಯತಂತ್ರ ರೂಪಿಸಿ, ಸಮರ್ಪಕವಾಗಿ ಅನುಷ್ಠಾನಗೊಳಿಸಿದರೆ ಯಾವುದೇ ರೀತಿಯ ವಿಕೋಪಗಳು ಎದುರಾದರೂ ಯಶಸ್ವಿಯಾಗಿ ನಿಭಾಯಿಸಬಹುದು ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಅಭಿಪ್ರಾಯಪಟ್ಟರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜು.21ರ ಗುರುವಾರ ಜಿಲ್ಲಾಡಳಿತ, ಮೈಸೂರಿನ ಆಡಳಿತ ತರಬೇತಿ ಸಂಸ್ಥೆ ಹಾಗೂ ಜಿಲ್ಲಾ ತರಬೇತಿ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ `ಎ’ ಮತ್ತು `ಬಿ’ ವೃಂದದ ಅಧಿಕಾರಿಗಳಿಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ವಿಪತ್ತು ನಿರ್ವಹಣೆ ಯೋಜನೆ ಪರಿಷ್ಕರಣೆ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯಾವುದೇ ವಿಕೋಪಗಳನ್ನು ಏಕಾಂಗಿಯಾಗಿ ಎದುರಿಸಲು ಸಾಧ್ಯವಿಲ್ಲ. ವಿಕೋಪಗಳ ಸಂದರ್ಭದಲ್ಲಿ ಅಗತ್ಯ ಇಲಾಖೆಗಳು ತಂಡದಂತೆ ಯೋಜನೆ ರೂಪಿಸಿದರೆ ಅದರಂತೆ ಕಾರ್ಯಪ್ರವೃತ್ತರಾದಾಗ ಮಾತ್ರ ಯಶಸ್ವಿಯಾಗಿ ಎದುರಿಸಲು ಸಾಧ್ಯ ಎಂದ ಅವರು, ಕಾರ್ಯಾಗಾರಕ್ಕೆ ನಿಜವಾದ ಅರ್ಥ ಬರಬೇಕೆಂದರೆ ಅಧಿಕಾರಿಗಳು ಕ್ರಿಯಾಶೀಲರಾಗಿ ಪಾಲ್ಗೊಳ್ಳಬೇಕು. ತಮ್ಮಲ್ಲಿನ ಉಪಯುಕ್ತ ವಿಚಾರ, ಮಾರ್ಗಸೂಚಿ ಹಾಗೂ ಯೋಜನೆಗಳನ್ನು ಇತರರೊಂದಿಗೆ ಹಂಚಿಕೊಂಡು, ಅವರಲ್ಲಿನ ಹೊಸ ವಿಚಾರಗಳನ್ನು ಕಲಿತುಕೊಳ್ಳಬೇಕು, ಆ ಮೂಲಕ ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಒಗ್ಗಟ್ಟಿನ ಪ್ರದರ್ಶನ ನೀಡಬೇಕು ಎಂದರು.
ಮಳೆ, ಗುಡ್ಡ ಕುಸಿತ, ಪ್ರವಾಹದಂತದ ಪ್ರಕೃತಿ ವಿಕೋಪಗಳು ಸಂಭವಿಸಿದ ಸಂದರ್ಭದಲ್ಲಿ ಪ್ರಾಣ ಹಾನಿಯಾಗದಂತೆ ಯಾವ ರೀತಿ ಎದುರಿಸಬಹುದು. ಜತೆಗೆ ಸಾರ್ವಜನಿಕರು ವಹಿಸಬೇಕಾದ ಮುನ್ನೇಚ್ಚರಿಕಾ ಕ್ರಮಗಳು ಹಾಗೂ ಆ ಕ್ರಮಗಳನ್ನು ಜನರಿಗೆ ತಲುಪಿಸುವ ಮಾರ್ಗಗಳನ್ನು ಕಂಡುಕೊಳ್ಳಬೇಕೆಂದರು.
ಪ್ರತಿಯೊಂದು ಇಲಾಖೆಗಳು ತಮ್ಮ-ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿರ್ವಹಿಸಿದರೆ ಅತ್ಯುತ್ತಮ ಆಡಳಿತ ರೂಪುಗೊಳ್ಳುತ್ತದೆ. ಒಟ್ಟಾರೆಯಾಗಿ ಈ ಕಾರ್ಯಾಗಾರದಿಂದ ಅಧಿಕಾರಿಗಳಿಗೆ ಹಾಗೂ ಮುಂದಿನ ದಿನಗಳಲ್ಲಿ ಇದರಿಂದ ಸಾರ್ವಜನಿಕರಿಗೂ ಉಪಯೋಗವಾಗಲಿ ಎಂದರು.
ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಮೈಸೂರು ಆಡಳಿತ ತರಬೇತಿ ಸಂಸ್ಥೆಯ ನಿರ್ದೇಶಕ ಚಂದ್ರನಾಯಕ್, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ವೆಂಕಟೇಶ್ ವೇದಿಕೆಯಲ್ಲಿದ್ದರು. ಜಿಲ್ಲಾ ಮಟ್ಟದ ಅಧಿಕಾರಿಗಳು, ಮಂಗಳೂರು ಉಪ ತಹಶೀಲ್ದಾರ್ ಜಯಂತ್ ಸೇರಿದಂತೆ ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka