ತವರು ಬಿಟ್ಟು ಗಂಡನ ಮನೆಗೆ ಹೋಗಲಾಗದೇ ವಿಪರೀತವಾಗಿ ಅತ್ತ ವಧು ಹೃದಯಾಘಾತದಿಂದ ಸಾವು!
ಒಡಿಶಾ: ಗಂಡನ ಮನೆಗೆ ಹೋಗುವಾಗ ತನ್ನ ಕುಟುಂಬವನ್ನು ಬಿಟ್ಟು ಹೋಗಲು ಸಾಧ್ಯವಾಗದೇ ವಧುವೊಬ್ಬಳು ತೀವ್ರವಾಗಿ ದುಃಖಿಸಿದ್ದು, ಈ ವೇಳೆ ಆಕೆ ಹೃದಯಾಘಾತದಿಂದ ಮೃತಪಟ್ಟ ಘಟನೆ ಒಡಿಶಾದ ಸುಬ್ರನಪುರ್ ಜಿಲ್ಲೆಯ ಜುಲುಂದ ಗ್ರಾಮದಲ್ಲಿ ನಡೆದಿದೆ.
ರೋಸಿ ಸಾ ಎಂಬ ವಧು ಟೆಂಟುಲು ಗ್ರಾಮದ ಬಿಸಿಕೇಶನ್ ಪಧಾನ್ ಜೊತೆ ಮಂಗಳವಾರ ವಿವಾಹವಾಗಿದ್ದಾರೆ. ಶುಕ್ರವಾರ ತನ್ನ ತವರಿನಿಂದ ಗಂಡನ ಮನೆಗೆ ಕಳುಹಿಸುವ ಕಾರ್ಯಕ್ರಮದ ವೇಳೆ ಕುಟುಂಬಸ್ಥರನ್ನು ಬಿಟ್ಟು ಹೋಗಲು ಸಾಧ್ಯವಾಗದೇ ವಧು ತೀವ್ರವಾಗಿ ಅತ್ತಿದ್ದು, ಈ ವೇಳೆ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದಾಳೆ.
ತಕ್ಷಣವೇ ಸಂಬಂಧಿಕರು ದುಂಗರಿಪಲ್ಲಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ವಧುವನ್ನು ಕೊಂಡೊಯ್ದರಾದರೂ ಅಷ್ಟರಲ್ಲಿ ವಧು ಮೃತಪಟ್ಟಿದ್ದಾಳೆ. ವಧು ವಿಪರೀತವಾಗಿ ಅತ್ತ ಪರಿಣಾಮ ಹೃದಯಾಘಾತವಾಗಿದೆ ಎಂದು ವೈದ್ಯರು ಹೇಳಿದ್ದಾರೆ.
ಸಂಭ್ರಮದಲ್ಲಿ ತುಂಬಿ ತುಳುಕುತ್ತಿದ್ದ ಎರಡು ಮನೆಗಳು ಇದೀಗ ಶೋಕ ಸಾಗರದಲ್ಲಿ ಮುಳುಗಿದೆ. ಮನೆಯನ್ನು ಬಿಟ್ಟು ಹೋಗಲು ಸಾಧ್ಯವಾಗದ ವಧು ಇದೀಗ ಪ್ರಪಂಚವನ್ನೇ ಬಿಟ್ಟು ಹೋಗಿದ್ದಾಳೆ. ವಧುವಿನ ಸಾವಿನಿಂದ ಇತ್ತ ವರನ ಕುಟುಂಸ್ಥರು ಕೂಡ ಕಂಗಾಲಾಗಿದ್ದಾರೆ.