ಇದೆಂತಹ ನ್ಯಾಯ: ಪ್ರೇಯಸಿಯನ್ನು ಅತ್ಯಾಚಾರ ಮಾಡಿ 111 ಬಾರಿ ಇರಿದು ಕೊಂದ ವಿಕೃತಕಾಮಿಗೆ ಕ್ಷಮದಾನ ನೀಡಿದ ರಷ್ಯಾದ ಅಧ್ಯಕ್ಷ..!
ಮಾಜಿ ಪ್ರೇಯಸಿಯನ್ನು ಅತ್ಯಾಚಾರ ಮಾಡಿದ್ದಲ್ಲದೇ ಬರೋಬ್ಬರಿ 111 ಬಾರಿ ಚಾಕುವಿನಿಂದ ಇರಿದು ಮತ್ತು ಮೂರುವರೆ ಗಂಟೆಗಳ ಕಾಲ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ ವಿಕೃತ ಕಾಮಿಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಕ್ಷಮಾದಾನ ನೀಡಿದ ವಿಚಿತ್ರ ಘಟನೆ ಬೆಳಕಿಗೆ ಬಂದಿದೆ.
ಈ ಸ್ಯಾಡಿಸ್ಟ್ ವ್ಯಕ್ತಿಯನ್ನು 27 ವರ್ಷದ ವ್ಲಾಡಿಸ್ಲಾವ್ ಕಾನ್ಯುಸ್ ಎಂದು ಗುರುತಿಸಲಾಗಿದೆ. ಈತ 23 ವರ್ಷದ ವೆರಾ ಪೆಖ್ಟೆಲೆವಾ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಿ ಜೈಲುಪಾಲಾಗಿದ್ದ. ಆದರೆ ಇದೀಗ ಈ ಆರೋಪಿಯು ಉಕ್ರೇನ್‌ನಲ್ಲಿ ರಷ್ಯಾ ಪರವಾಗಿ ಹೋರಾಡಿದ್ದಾನೆ ಎಂಬ ಏಕೈಕ ಕಾರಣಕ್ಕೆ ಆತನ ಅಪರಾಧವನ್ನು ಪುಟಿನ್ ಅವರು ಮನ್ನಿಸಿದ್ದಾರೆ ಎನ್ನಲಾಗಿದೆ.
ಪುಟಿನ್ ನಡೆಗೆ ಸಂತ್ರಸ್ತೆಯ ತಾಯಿಯಾಗಿರುವ 49 ವರ್ಷದ ಒಕ್ಸಾನಾ ಅವರು ಖಂಡನೆ ವ್ಯಕ್ತಪಡಿಸಿದ್ದಾರೆ. ಅಲ್ಲದೇ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ. ಕಾನ್ಯುಸ್ ಮತ್ತು ವೆರಾ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯಾವುದೋ ಕಾರಣದಿಂದ ಅವರಿಬ್ಬರ ಸಂಬಂಧಿ ಮುರಿದುಬಿದ್ದಿತ್ತು. ಸಂಬಂಧ ಮುರಿದು ಬಿದ್ದ ಬಳಿಕ ತನ್ನ ವಸ್ತುಗಳನ್ನು ಹಿಂಪಡೆಯಲು ಬಂದ ವೆರಾಳ ಮೇಲೆ ಕಾನ್ಯುಸ್ ಈ ಹೇಯ ಕೃತ್ಯವನ್ನು ನಡೆಸಿದ್ದ ಎಂದು ಆರೋಪಿಸಲಾಗಿದೆ.