ಮುಂಡಾಜೆ ಮಿತ್ತೊಟ್ಟು ನಿವಾಸಿಗಳಿಂದ ಮತದಾನ ಬಹಿಷ್ಕಾರ: ಇತ್ತ ಬರಲೇ ಬೇಡಿ ಎಂದು ಬ್ಯಾನರ್ ಹಾಕಿದ ಗ್ರಾಮಸ್ಥರು - Mahanayaka

ಮುಂಡಾಜೆ ಮಿತ್ತೊಟ್ಟು ನಿವಾಸಿಗಳಿಂದ ಮತದಾನ ಬಹಿಷ್ಕಾರ: ಇತ್ತ ಬರಲೇ ಬೇಡಿ ಎಂದು ಬ್ಯಾನರ್ ಹಾಕಿದ ಗ್ರಾಮಸ್ಥರು

mundajje
28/02/2023

ಬೆಳ್ತಂಗಡಿ: ಮುಂಡಾಜೆ ಗ್ರಾ.ಪಂ.ನ 2ನೇ ವಾರ್ಡ್ನ ಒಳಪಟ್ಟ ಮಿತ್ತೊಟ್ಟು ಪ್ರದೇಶದ ಜನರು ತಮ್ಮ ರಸ್ತೆಯ ದುರಸ್ತಿಗಾಗಿ ಒತ್ತಾಯಿಸಿ ಜನ ಪ್ರತಿನಿಧಿಗಳಿಗೆ ಮನವಿ ಸಲ್ಲಿಸಿ ಕಾದು ಬಸವಳಿದು ಇದೀಗ ಚುನಾವಣಾ ಬಹಿಷ್ಕಾರದ ನಿರ್ಧಾರಕ್ಕೆ ಬಂದಿದ್ದು, ಗ್ರಾಮಸ್ಥರು ಚುನಾವಣೆ ಬಹಿಷ್ಕಾರದ ಬ್ಯಾನರ್ ಅನ್ನು ಅಳವಡಿಸಿದ್ದು ತಮ್ಮ ಬೇಡಿಕೆ ಈಡೇರದಿದ್ದರೆ ಚುನಾವಣೆ ಬಹಿಷ್ಕರಿಸುವುದಾಗಿ ಪ್ರಕಟಿಸಿದ್ದಾರೆ.

ರಾಷ್ಟ್ರೀಯ ಹೆದ್ದಾರಿ ಅಂಚಿನಲ್ಲೇ ಬರುವ ಮುಂಡಾಜೆ ಗ್ರಾಮದ ಸೀಟು ಎಂಬಲ್ಲಿಂದ ಕೊಡಂಗೆ, ಮಿತ್ತೊಟ್ಟು, ಮೂಲಾರು ಹಾಗೂ ಕಲ್ಮಂಜ ಗ್ರಾಮದ ಕುಡೆಂಜಿಗೂ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದ್ದು ಸಂಪೂರ್ಣವಾಗಿ ಹದಗೆಟ್ಟು ಹೋಗಿದೆ. ಈ ಪ್ರದೇಶದಲ್ಲಿ ಮಳೆಗಾಲದಲ್ಲಿ ದ್ವಿಚಕ್ರ ಬಿಡಿ, ನಾಲ್ಕು ಚಕ್ರದ ವಾಹನ ಸಂಚರಿಸದಷ್ಟು ಕೆಸರುಮಯ. 200ಕ್ಕೂ ಅಧಿಕ ಮನೆಗಳು ಇರುವ ಊರಿದು. ಮಿತ್ತೊಟ್ಟು ಒಂದರಲ್ಲೇ 70ಕ್ಕೂ ಅಧಿಕ ಮನೆಗಳಿವೆ.

ಇಲ್ಲಿ ಸುಮಾರು ಏಳು ಕಿ.ಮೀ. ಉದ್ದದ ರಸ್ತೆಯಿದ್ದು ಇದರಲ್ಲಿ ಒಂದು ಕಿ.ಮೀ. ರಸ್ತೆಗೆ ಯಾವುದೋ ಕಾಲದಲ್ಲಿ ಡಾಮರು ಹಾಕಿತ್ತು ಇದೀಗ ಅದು ಹೇಗಿದೆಯೆಂದರೆ ಇದು ಡಾಮರು ರಸ್ತೆಯೋ ಮಣ್ಣಿನ ರಸ್ತೆಯೋ ಎಂದು ಗುರುತಿಸಲು ಸಾಧ್ಯವಿಲ್ಲದ ಸ್ಥಿತಿಯಲ್ಲಿದೆ. ಏಳು ಕಿ.ಮೀ ರಸ್ತೆಯಲ್ಲಿ 700ಮೀಟರದ ರಸ್ತೆಯನ್ನು ಕಾಂಕ್ರೀಟ್ ಮಾಡಲಾಗಿದೆ ಇದೆ ಈರಸ್ತೆಗಾಗಿ ಜನ ಪ್ರತಿನಿಧಿಗಳು ಮಾಡಿರುವ ಕಾರ್ಯ ಎಂದು ಇಲ್ಲಿನ ಜನರು ಇದೀಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಉಳಿದಂತೆ ಸಂಪೂರ್ಣ ರಸ್ತೆ ಕಚ್ಚಾ ರಸ್ತೆಯಾಗಿದ್ದು ಮಳೆಗಾಲದಲ್ಲಂತೂ ವಾಹನ ಸಂಚಾರವಿರಲಿ ಜನರು ನಡೆದುಕೊಂಡು ಹೋಗುವುದು ಕಷ್ಟಸಾಧ್ಯ ವಿಚಾರವಾಗಿದೆ.

ಇಲ್ಲಿಗೆ ನಾಲ್ವರು ಗ್ರಾ.ಪಂ. ಸದಸ್ಯರಿದ್ದಾರೆ. ಎಲ್ಲರೂ ಬಿಜೆಪಿ ಪಕ್ಷದ ಬೆಂಬಲದಿಂದಲೇ ಗೆದ್ದುಬಂದವರು. ಇತ್ತ 11 ಸದಸ್ಯರುಳ್ಳ ಮುಂಡಾಜೆ ಗ್ರಾ.ಪಂ. 11ರಲ್ಲೂ ಬಿಜೆಪಿ ಬೆಂಬಲಿತ ಸದಸ್ಯರದೇ ಪಾರಮ್ಯ. ಕಳೆದ 20 ವರ್ಷದಿಂದ ಇಟ್ಟ ಬೇಡಿಕೆ ಈಡೇರಿಲ್ಲ ಎಂದು ಬಿಜೆಪಿಗೆ ಮತ ನೀಡಿದ್ದೇವೆ. ಕಳೆದ ಬಾರಿ ಶಾಸಕರು ಸೀಟು ರಸ್ತೆ ಜನವರಿ ಒಳಗಾಗಿ ಶಿಲಾನ್ಯಾಸ ಮಾಡುವುದಾಗಿ ಹೇಳಿದ್ದರು. ಆದರೆ ನಮಗೆ ರಸ್ತೆಯ ಅಭಿವೃದ್ಧಿಗೆ ನ್ಯಾಯ ಸಿಕ್ಕಿಲ್ಲ ಎಂದು ನಿವಾಸಿಗಳು ಆಕ್ರೋಶ ಹೊರಹಾಕಿದ್ದಾರೆ.

ಹಾಗಾಗಿ ಕಾದು ನೋಡುವ ತಾಳ್ಮೆ ಕಳೆದುಕೊಂಡ ಮಿತ್ತೊಟ್ಟು ನಿವಾಸಿಗಳು ಚುನಾವಣಾ ಬಹಿಷ್ಕಾರದ ಬ್ಯಾನರ್ ಅಳವಡಿಸಿದ್ದಾರೆ. ಈಬಾರಿಯಂತು ರಸ್ತೆಯಾಗದೆ ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಮತ ಬೇಕಾದರೆ ಮುಂದಿನ ಚುನಾವಣೆಗೆ ಮುನ್ನ ರಸ್ತೆ ನಿರ್ಮಿಸಿ, ಇಲ್ಲವೇ ಇತ್ತ ಮತ ಕೇಳಲು ಬರಲೇ ಬೇಡಿ ಎಂಬ ಹಟಕ್ಕೆ ಬಿದ್ದಿದ್ದಾರೆ.

ಪಂಚಾಯತ್ ಸದಸ್ಯರ ನಿರ್ಲಕ್ಷ್ಯ ಧೋರಣೆ ನಮಗೆ ಅನುಮಾನಕ್ಕೆ ಎಡೆಮಾಡಿದೆ. ಆದುದರಿಂದ ಮುಂದಿನ ಚುನಾವಣೆ ನಡೆಯುವ ಸಂದಭದಲ್ಲಿ ನಮ್ಮ ಬಯಲಿನಲ್ಲಿ ಯಾವುದೇ ರೀತಿಯ ಚುನವಣಾ ಪ್ರಚಾರ ನಡೆಸಬಾರದು. ಚುನವಣಾ ಕಾರಣದಲ್ಲಿ ರಾಜಕೀಯ ಕಾರ್ಯಕ್ರಮ ಮಾಡಬಾರದು. ರಸ್ತೆ ಸಂಪೂರ್ಣ ದುರಸ್ತಿಯಾಗುವವರೆಗೆ ಯಾವುದೇ ಮನವೊಲಿಕೆ, ರಾಜಿ ಸಂಧಾನಗಳಿಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಬ್ಯಾನರ್‌ನಲ್ಲಿ ತಿಳಿಸಲಾಗಿದೆ.

ಶಿಲಾನ್ಯಾಸ ನೆರವೇರಿಸಿದರೂ ಕಾಮಗಾರಿ ನಡೆದಿಲ್ಲ:
ಇದೇ ರಸ್ತೆಯ ಭಾಗವಾಗಿರುವ ಮೂಲಾರು-ಕುಡೆಂಚಿ ರಸ್ತೆಗೆ 20ಲಕ್ಷ ಅನುದಾನದಲ್ಲಿ ಶಾಸಕ ಹರೀಶ್ ಪೂಂಜ ಅವರು ಶಿಲಾನ್ಯಾಸವನ್ನೂ ವರ್ಷದ ಹಿಂದೆ ನೆರವೇರಿಸಿದ್ದರು 20 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ಮಾಡುವುದಾಗಿ ಬ್ಯಾನರ್ ಗಳನ್ನು ಹಾಕಲಾಗಿತ್ತು ಆದರೆ ಆ ರಸ್ತೆಯ ಸ್ಥಿತಿ ಇನ್ನೂ ಶೋಚನೀಯವಾಗಿಯೇ ಇದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ