ವೃತ್ತಿಧರ್ಮವನ್ನೂ ನಾಶ ಮಾಡುವ ದ್ವೇಷ ರಾಜಕಾರಣ-ನಾ ದಿವಾಕರ - Mahanayaka
7:00 AM Thursday 19 - September 2024

ವೃತ್ತಿಧರ್ಮವನ್ನೂ ನಾಶ ಮಾಡುವ ದ್ವೇಷ ರಾಜಕಾರಣ-ನಾ ದಿವಾಕರ

08/02/2021

ಭಾರತದ ಪ್ರಜಾತಂತ್ರ ವ್ಯವಸ್ಥೆ ನಾಲ್ಕೂ ದಿಕ್ಕುಗಳಿಂದ ಸವಾಲುಗಳನ್ನು ಎದುರಿಸುತ್ತಿದೆ. ಆಡಳಿತ ವ್ಯವಸ್ಥೆಯ ನಾಲ್ಕೂ ಸ್ತಂಭಗಳು ಶಿಥಿಲವಾಗುತ್ತಿರುವಂತೆ ಭಾಸವಾಗುತ್ತಿದೆ. ನ್ಯಾಯಾಂಗದ ಮೂಲಕ ಈ ದೇಶದ ಸಾಮಾನ್ಯ ಪ್ರಜೆಗಳು ಕೊಂಚ ಉಸಿರಾಡುತ್ತಿದ್ದರೂ ಕೆಲವು ಸಂದರ್ಭಗಳಲ್ಲಿ ನ್ಯಾಯಾಂಗವೂ ಮುಂಚಿನಂತಿಲ್ಲ ಎಂದೆನಿಸಿದರೆ ಅಚ್ಚರಿಯೇನಿಲ್ಲ. ಇದು ಇಂದಿನ ಸಮಸ್ಯೆಯೂ ಅಲ್ಲ. ಅಧಿಕಾರ ರಾಜಕಾರಣದ ಒತ್ತಡಗಳು ನ್ಯಾಯಾಂಗದ ಮೇಲೆ ಪ್ರಭಾವ ಬೀರುವ ಪರಂಪರೆಗೆ ಐದು ದಶಕಗಳ ಇತಿಹಾಸವಿದೆ. ಒಂದೇ ವ್ಯತ್ಯಾಸ ಎಂದರೆ ಮೂರು ನಾಲ್ಕು ದಶಕಗಳ ಹಿಂದೆ ಇದ್ದಂತಹ ದಕ್ಷ, ನಿಷ್ಪಕ್ಷಪಾತ, ದಿಟ್ಟ ನ್ಯಾಯಮೂರ್ತಿಗಳನ್ನು ಇಂದು ಕಾಣುವುದು ವಿರಳ. ಶಾಸಕಾಂಗ ಮತ್ತು ಕಾರ್ಯಾಂಗಗಳು ಭ್ರಷ್ಟ ಹಾದಿ ಹಿಡಿದಿರುವ ಒಂದು ಶಿಥಿಲವಾಗುತ್ತಿರುವ ವ್ಯವಸ್ಥೆಯಲ್ಲಿ ಇದು ಸಹಜ ಪ್ರಕ್ರಿಯೆಯೇನೋ ಎನಿಸುತ್ತದೆ.

ಪ್ರಜಾತಂತ್ರ ವ್ಯವಸ್ಥೆ ಶಿಥಿಲವಾಗುತ್ತಿರುವ ಸಂದರ್ಭದಲ್ಲಿ, ಸಂವಿಧಾನ ಮತ್ತು ಪ್ರಜಾತಂತ್ರ ಮೌಲ್ಯಗಳ ಉಲ್ಲಂಘನೆಯಾಗುತ್ತಿರುವ ಹೊತ್ತಿನಲ್ಲಿ ಪ್ರಜೆಗಳಲ್ಲಿ ಜಾಗೃತಿ ಮೂಡಿಸುವ ಹೊಣೆಗಾರಿಕೆ ಮೂಲತಃ ಮಾಧ್ಯಮಗಳ ಮೇಲಿರುತ್ತದೆ. 1970ರ ದಶಕದಲ್ಲಿ ಮತ್ತು ಸ್ವತಂತ್ರ ಭಾರತದ ಆರಂಭದ ದಿನಗಳಲ್ಲೂ ಸಹ ಭಾರತದ ಸುದ್ದಿ ಮಾಧ್ಯಮಗಳು ಈ ಜವಾಬ್ದಾರಿಯನ್ನು ನಿಭಾಯಿಸಿವೆ. ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಸಂವಹನ ಮಾಧ್ಯಮದ ವ್ಯಾಪ್ತಿ ಸೀಮಿತವಾಗಿದ್ದ ಸಂದರ್ಭದಲ್ಲೂ ಮಾಧ್ಯಮಗಳು , ಪತ್ರಿಕೆಗಳು ತಮ್ಮ ಸಾಂವಿಧಾನಿಕ ಕರ್ತವ್ಯವನ್ನು ಸಮರ್ಥವಾಗಿ ನಿರ್ವಹಿಸಿದ್ದನ್ನು ಸ್ಮರಿಸಬಹುದು. ಆಗಲೂ ಭಾರತದ ಸುದ್ದಿಮನೆಗಳು ಉದ್ಯಮಿಗಳ, ಪ್ರಬಲ ಮೇಲ್ಜಾತಿಗಳ ಮತ್ತು ಕೆಲವು ರಾಜಕೀಯ ನಾಯಕರ ಒಡೆತನದಲ್ಲೇ ಇದ್ದವು. ಆದರೆ ವೃತ್ತಿ ಧರ್ಮದ ಬಗ್ಗೆ ಪ್ರಜ್ಞೆಯೂ ಇತ್ತು. ಹಾಗಾಗಿ ಆಡಳಿತ ವ್ಯವಸ್ಥೆಯ ಓರೆಕೋರೆಗಳನ್ನು ತಿದ್ದುವ ಕೆಲಸವನ್ನು ಮಾಡುತ್ತಿದ್ದವು. ಇದಕ್ಕೆ ಮೂಲ ಕಾರಣ ಪತ್ರಿಕಾ ಸಂಪಾದಕರಿಗೆ ವೃತ್ತಿ ನಿಷ್ಠೆಯಷ್ಟೇ ಸಂವಿಧಾನ ನಿಷ್ಠೆಯೂ ಇತ್ತು. ಇಂದು ಇದು ಮರೆಯಾಗುತ್ತಿದೆ.

ಇಂದು ಮಾಧ್ಯಮಗಳ ನಿಷ್ಠೆ ಅಧಿಕಾರ ಪೀಠಗಳತ್ತ ವಾಲುತ್ತಿರುವ ಸಂದರ್ಭದಲ್ಲೇ ಮಾಧ್ಯಮ ಸ್ವಾತಂತ್ರ್ಯದ ಹರಣವೂ ನಡೆಯುತ್ತಿದೆ. ಏಕೆಂದರೆ ಬಹುಪಾಲು ಮಾಧ್ಯಮ ಸಮೂಹಗಳು, ಸುದ್ದಿಮನೆಗಳು, ಮುದ್ರಣ ಮಾಧ್ಯಮಗಳು ತಮ್ಮ ಜನಪರ ಮುಖವಾಡವನ್ನು ಸಂಪೂರ್ಣವಾಗಿ ಕಳಚಿಹಾಕಿಬಿಟ್ಟಿವೆ. ಜಾಹೀರಾತಿನ ಪ್ರಲೋಭನೆ, ಅಧಿಕಾರ ಪೀಠಕ್ಕೆ ಹತ್ತಿರವಾಗುವ ಹಪಹಪಿ, ಸೌಲಭ್ಯ ಸವಲತ್ತುಗಳ ಆಮಿಷ ಮತ್ತು ಉದ್ದಿಮೆಯ ಅಳಿವು ಉಳಿವು ಇವೆಲ್ಲವೂ ಮಾಧ್ಯಮ ಸಂಹಿತೆಗಳನ್ನು ಬುಡಮೇಲು ಮಾಡುತ್ತಿವೆ. ಇದಾವುದರ ಗೊಡವೆಯೂ ಇಲ್ಲದೆ ಉಳಿಯಲು ಪ್ರಯತ್ನಿಸುವ ಮಾಧ್ಯಮಗಳ ವ್ಯಾಪ್ತಿ ಸಂಕುಚಿತವಾಗುತ್ತಲೇ ಹೋಗುತ್ತದೆ. ಹೊಂದಾಣಿಕೆಯ ಸೂತ್ರ, ರಾಜಿ ಸೂತ್ರ ಮತ್ತು ಎಲ್ಲರನ್ನೂ ಮೆಚ್ಚಿಸುವ ಸೂತ್ರಗಳು ಪತ್ರಿಕೆಗಳ ಸ್ವರೂಪವನ್ನೇ ವಿರೂಪಗೊಳಿಸಿರುವುದನ್ನೂ ನೋಡಿದ್ದೇವೆ. ಈ ಹಂತದಿಂದ ಇನ್ನು ಒಂದು ಹೆಜ್ಜೆ ಮುಂದೆ ಹೋಗಿರುವ ಮಾಧ್ಯಮ ಲೋಕ ಇಂದು ಸಂಪೂರ್ಣವಾಗಿ ರಾಜಕೀಯ ಬಂದಿಯಾಗಿದೆ. ಔದ್ಯಮಿಕ ಹಿತಾಸಕ್ತಿಯ ನೆಲೆಯಲ್ಲಿ ರಾಜಕೀಯ ಗುಂಪುಗಳೊಡನೆ ಬೆರೆತುಹೋಗಿದೆ.


Provided by

ಈ ವಿಷಮ ಸ್ಥಿತಿಯಲ್ಲಿಯೇ ಸಾಂಸ್ಕೃತಿಕ ರಾಷ್ಟ್ರೀಯತೆ ಪೋಷಿಸುತ್ತಿರುವ ದ್ವೇಷ ರಾಜಕಾರಣ ಎಲ್ಲ ಕ್ಷೇತ್ರಗಳನ್ನು, ಎಲ್ಲ ಹಂತಗಳಲ್ಲೂ ಆವರಿಸುತ್ತಿದೆ. ಬಹುಪಕ್ಷೀಯ ಪ್ರಜಾತಂತ್ರ ವ್ಯವಸ್ಥೆಯಲ್ಲಿ ರಾಜಕೀಯ ದ್ವೇಷ ಸಹಜ. ಸ್ವತಂತ್ರ ಭಾರತದ ಮೊದಲ ನಾಲ್ಕು ದಶಕಗಳಲ್ಲಿ ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳಿದ್ದವು, ಭಿನ್ನಮತ ಇತ್ತು, ಪರ ವಿರೋಧದ ನೆಲೆಗಳಿದ್ದವು. ಆದರೆ ರಾಜಕೀಯ ದ್ವೇಷ ಹೆಚ್ಚಾಗಿ ಇರಲಿಲ್ಲ. ಅಧಿಕಾರ ರಾಜಕಾರಣದ ಚೌಕಟ್ಟಿನಲ್ಲೇ ಇದ್ದ ಸೈದ್ಧಾಂತಿಕ ಭಿನ್ನಮತಗಳನ್ನೂ ಸೌಹಾರ್ದಯುತವಾಗಿ ಪರಿಹರಿಸಿಕೊಳ್ಳುವ ಒಂದು ಸ್ವಸ್ಥ ಆಡಳಿತ ವ್ಯವಸ್ಥೆಯನ್ನೂ ನಾವು ಕಂಡಿದ್ದೇವೆ. ಶಾಸನ ಸಭೆಗಳಲ್ಲಿ ನಡೆಯುತ್ತಿದ್ದ ಚರ್ಚೆಗಳು, ವಿರೋಧ ಪಕ್ಷಗಳ ವಾಗ್ದಾಳಿ ಮತ್ತು ಆಡಳಿತಾರೂಢ ಪಕ್ಷದ ಸಂಯಮ ಇವೆಲ್ಲವೂ ಒಂದು ಸ್ವಸ್ಥ ರಾಜಕೀಯ ವ್ಯವಸ್ಥೆಯನ್ನು ನಿರ್ಮಿಸಿದ್ದವು.

ಆದರೆ ನವ ಉದಾರವಾದ ಮತ್ತು ಬಲಪಂಥೀಯ ರಾಜಕಾರಣದ ಆಕ್ರಮಣದ ನಂತರ ಭಾರತದ ರಾಜಕೀಯ ನಕ್ಷೆಯೇ ಬದಲಾಗಿದೆ. ಜಾತಿ ಆಧಾರಿತ, ಮತಧರ್ಮ ಆಧಾರಿತ ರಾಜಕಾರಣ ಹೆಚ್ಚು ಪ್ರಬಲವಾಗುತ್ತಿರುವಂತೆಲ್ಲಾ ರಾಜಕೀಯ ದ್ವೇಷವೂ ಹೆಚ್ಚಾಗುತ್ತಿದೆ. ಮತ್ತೊಂದೆಡೆ ಬಲಪಂಥೀಯ ರಾಜಕಾರಣ ಪೋಷಿಸುತ್ತಿರುವ ಸಾಂಸ್ಕೃತಿಕ ರಾಜಕಾರಣ ದ್ವೇಷ ರಾಜಕಾರಣವನ್ನೂ ಪೋಷಿಸುತ್ತಿದೆ. ಬಹುತ್ವ ಮತ್ತು ಬಹುಸಂಸ್ಕೃತಿಯನ್ನೇ ಮೈಗೂಡಿಸಿಕೊಂಡು ಒಂದು ಬೃಹತ್ ದೇಶವಾಗಿ ರೂಪುಗೊಂಡಿರುವ ಭಾರತದಲ್ಲಿ ಇಂದು ಸಾಂಸ್ಕೃತಿಕ ವೈವಿಧ್ಯತೆಯೇ ನಿರಂತರ ಹಲ್ಲೆಗೊಳಗಾಗಿದೆ. ಒಂದು ರಾಷ್ಟ್ರ, ಒಂದು ಭಾಷೆ, ಒಂದು ಧರ್ಮ, ಒಂದು ಸಂಸ್ಕೃತಿಯ ವಿಕೃತ ಚಿಂತನೆ ಈಗ ಒಂದು ರಾಜಕೀಯ ಪಕ್ಷ, ಒಂದೇ ಚುನಾವಣೆಯವರೆಗೂ ವಿಸ್ತರಿಸಿದೆ.

ಈ ಸಂದರ್ಭದಲ್ಲೇ ಭಾರತದ ಸಾಂವಿಧಾನಿಕ ಸಾಂಸ್ಥಿಕ ನೆಲೆಗಳು ತಮ್ಮ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತಿವೆ. ಅಪರಾಧದ ನಿಷ್ಕರ್ಷೆ ಇಂದು ಈ ಸಾಂಸ್ಥಿಕ ನೆಲೆಗಳಿಂದ ಹೊರತಾಗಿ, ರಾಜಕೀಯ ಅಧಿಕಾರ ಕೇಂದ್ರಗಳಲ್ಲಿ ನಡೆಯುತ್ತಿದೆ. ಅಪರಾಧಿಗಳಿಗೆ ನೀಡುವ ಶಿಕ್ಷೆಯೂ ಸಹ ಈ ಅಧಿಕಾರ ಕೇಂದ್ರಗಳ ಅಣತಿಯಂತೆ ನಿರ್ಧಾರವಾಗುತ್ತಿದೆ. ಭ್ರಷ್ಟಾಚಾರ ಮುಕ್ತ ಭಾರತ, ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಪರಿಕಲ್ಪನೆಗಳನ್ನು ವೈಭವೀಕರಿಸುತ್ತಲೇ ಏಕಪಕ್ಷ ಆಡಳಿತವನ್ನು ಗಟ್ಟಿಗೊಳಿಸುವ ಪ್ರಯತ್ನಗಳ ನಡುವೆಯೇ ವ್ಯವಸ್ಥೆ ಇನ್ನೂ ಭ್ರಷ್ಟವಾಗುತ್ತಿದ್ದರೆ ಅದಕ್ಕೆ ಕಾರಣವನ್ನು ಇಲ್ಲಿ ಗುರುತಿಸಬಹುದು. ಇಂದು ಎಂತಹುದೇ ಭ್ರಷ್ಟ ರಾಜಕಾರಣಿ ಆಡಳಿತಾರೂಢ ಪಕ್ಷದೊಡನೆ ಗುರುತಿಸಿಕೊಳ್ಳುವುದರ ಮೂಲಕ ನಿರಪರಾಧಿಯಾಗಿ ಮುಕ್ತಿಪಡೆಯುವ ಸಾಧ್ಯತೆಗಳು ಹೆಚ್ಚಾಗಿವೆ.

ಇದರ ನಡುವೆಯೇ ಅಪರಾಧ ಮುಕ್ತ ರಾಜಕಾರಣದ ಬಗ್ಗೆ ಯಾವುದೇ ಪಕ್ಷವೂ ಮಾತನಾಡದಿರುವುದನ್ನೂ ಗಮನಿಸಬೇಕಿದೆ. ವಿರೋಧಿ ದನಿಗಳನ್ನು ದಮನಿಸಲು ರಾಜಕೀಯ ಪಕ್ಷಗಳು ಮತ್ತು ಸಂಘಟನೆಗಳು ಬಳಸುತ್ತಿರುವ ಕ್ರೂರ ಮಾರ್ಗಗಳಿಗೆ ಈಗಾಗಲೇ ಹಲವು ಚಿಂತಕರು ಬಲಿಯಾಗಿದ್ದಾರೆ. ನೂರಾರು ಜನರು ಯಾವುದೇ ಅಪರಾಧ ಎಸಗದೆ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಮತ್ತೊಂದೆಡೆ ಗುರುತರ ಅಪರಾಧಗಳನ್ನು ಎಸಗಿರುವಂತಹ ವ್ಯಕ್ತಿಗಳು ಅಧಿಕಾರ ಪೀಠಗಳನ್ನು ಅಲಂಕರಿಸಿದ್ದಾರೆ. ಈ ವಿಡಂಬನೆಯ ನಡುವೆಯೇ ರಾಜಕೀಯೇತರ ಶಕ್ತಿಗಳು, ಸಂವಿಧಾನೇತರ ಸಂಸ್ಥೆಗಳು ಮತ್ತು ಸಂಘಟನೆಗಳು ಈ ದೇಶದ ಜನಸಾಮಾನ್ಯರ ಅಭಿಪ್ರಾಯ/ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಆಕ್ರಮಣ ನಡೆಸುತ್ತಿವೆ. ಇತ್ತೀಚೆಗೆ ಖ್ಯಾತ ಸಾಹಿತಿ, ವಿಚಾರವಾದಿ, ಚಿಂತಕ ಪ್ರೊ ಕೆ ಎಸ್ ಭಗವಾನ್ ಅವರ ಮೇಲೆ ವಕೀಲೆಯೊಬ್ಬರು ಹೈಕೋರ್ಟ್ ಆವರಣದಲ್ಲೇ ಹಲ್ಲೆ ನಡೆಸಿ ಮಸಿ ಎಸೆದಿರುವುದನ್ನು ಈ ಹಿನ್ನೆಲೆಯಲ್ಲೇ ನೋಡಬೇಕಾಗುತ್ತದೆ.

ಇದು ಅಭಿಪ್ರಾಯ ಸ್ವಾತಂತ್ತ್ಯವನ್ನು ಹತ್ತಿಕ್ಕುವ ಮತ್ತೊಂದು ಕ್ರೂರ ವಿಧಾನ. ಇತ್ತೀಚಗೆ ಇಂತಹ ಪ್ರಕರಣಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಪ್ರೊ ಭಗವಾನ್ ತಮ್ಮ ರಾಮ ಮಂದಿರ ಏಕೆ ಬೇಡ ಎಂಬ ಕೃತಿಯಲ್ಲಿ ಮೂಲ ವಾಲ್ಮೀಕಿ ರಾಮಾಯಣದ ಕೆಲವು ಸಾಲುಗಳನ್ನು ಉದ್ಧರಿಸಿದ್ದಾರೆ. ವಾಲ್ಮೀಕಿ ರಾಮಾಯಣದ ರಾಮನ್ನು ಕುರಿತಂತೆ ವ್ಯಾಖ್ಯಾನ ಮಾಡಿದ್ದಾರೆ. ಒಬ್ಬ ಸಂಶೋಧಕರಾಗಿ, ಸಾಹಿತಿಯಾಗಿ  ಪ್ರೊ ಭಗವಾನ್ ಅವರಿಗೆ ಈ ಅಭಿವ್ಯಕ್ತಿ ಸ್ವಾತಂತ್ರ್ಯ ಇದ್ದೇ ಇರುತ್ತದೆ. ಇದು ಸಾಂವಿಧಾನಿಕ ಹಕ್ಕು ಸಹ ಹೌದು. ಪ್ರೊ ಭಗವಾನ್ ಅವರ ಉಲ್ಲೇಖಗಳು ಮತ್ತು ಅಭಿಪ್ರಾಯಗಳು ಪ್ರಶ್ನಾರ್ಹ ಎನಿಸಿದರೆ ಅದನ್ನು ನ್ಯಾಯಾಲಯದ ಮೂಲಕ ಪ್ರಶ್ನಿಸಬಹುದು. ಅವರ ವಿರುದ್ಧ ಮೊಕದ್ದಮೆಯನ್ನೂ ದಾಖಲಿಸಲಾಗಿದೆ.

ಈ ಮೊಕದ್ದಮೆಯ ವಿಚಾರಣೆ ಸಂದರ್ಭದಲ್ಲೇ ವಕೀಲೆ ಮೀರ ರಾಘವೇಂದ್ರ ಭಗವಾನ್ ಅವರ ಮೇಲೆ ಮಸಿ ಎರಚಿ ಹಲ್ಲೆ ನಡೆಸಿದ್ದಾರೆ. ನ್ಯಾಯಾಲಯದ ಅವರಣದಲ್ಲಿ, ಪೊಲೀಸ್ ಸುರಕ್ಷತೆಯನ್ನು ಹೊಂದಿದ್ದ ಒಬ್ಬ ವ್ಯಕ್ತಿಯ ಮೇಲೆ ಈ ರೀತಿ ಹಲ್ಲೆ ನಡೆಯುವುದು ನಮ್ಮ ಕಾನೂನು ವ್ಯವಸ್ಥೆಯ ದೌರ್ಬಲ್ಯವನ್ನು ತೋರುತ್ತದೆ. ಈ ಹಿಂದೆ ದೆಹಲಿಯ ಕೋರ್ಟ್ ಆವರಣದಲ್ಲಿ ಕನ್ಹಯ್ಯ ಕುಮಾರ್ ಅವರ ಮೇಲೆ ವಕೀಲರು ಹಲ್ಲೆ ನಡೆಸಿದ್ದರು. ಆ ಪ್ರಕರಣದಲ್ಲಿ ವಕೀಲರಿಗೆ ಶಿಕ್ಷೆಯಾಗಬೇಕಿತ್ತು. ಈವರೆಗೂ ಯಾರಿಗೂ ಶಿಕ್ಷೆಯಾಗಿಲ್ಲ. ನ್ಯಾಯಾಲಯಗಳ ಆವರಣದಲ್ಲಿ ಈ ರೀತಿಯ ಘಟನೆಗಳು ಸಂಭವಿಸುವುದು, ನ್ಯಾಯ ವ್ಯವಸ್ಥೆಯನ್ನು ಕಾಪಾಡಬೇಕಾದ ವಕೀಲರೇ ಇಂತಹ ಪುಂಡಾಟಿಕೆಯಲ್ಲಿ ತೊಡಗುವುದು ಶಿಕ್ಷಾರ್ಹ ಅಪರಾಧ ಎಂದು ಕಾನೂನು ರೂಪಿಸಬೇಕಿತ್ತು. ಆದರೆ ಇಂತಹ ಪ್ರಕರಣಗಳು ನಡೆಯುತ್ತಲೇ ಇದ್ದರೂ ಭಾರತದ ನ್ಯಾಯ ವ್ಯವಸ್ಥೆ ಮೌನ ಪ್ರೇಕ್ಷಕನಂತಾಗಿರುವುದು ದುರಂತ.

ವಕೀಲೆ ಮೀರ ರಾಘವೇಂದ್ರ ಅವರನ್ನು ಓರ್ವ ವ್ಯಕ್ತಿಯನ್ನಾಗಿ ನೋಡಲಾಗದು. ಇದು ಸಾಂಸ್ಥಿಕ ದಬ್ಬಾಳಿಕೆಯ ವ್ಯಕ್ತಿ ಸ್ವರೂಪವಷ್ಟೇ. ಇಂದು ವೈಚಾರಿಕತೆಯೇ ವ್ಯವಸ್ಥಿತವಾಗಿ ಹಲ್ಲೆಗೊಳಗಾಗುತ್ತಿದೆ. ಸಾಹಿತಿ, ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯ ಅಧಿಕಾರ ರಾಜಕಾರಣದ ಸಾಂಸ್ಥಿಕ ಒತ್ತಡಗಳಿಗೆ ಮಣಿಯಬೇಕಾದ ಸನ್ನಿವೇಶ ಎದುರಾಗಿದೆ. ಮತ್ತೊಂದೆಡೆ ಯಾವುದೇ ಕಾನೂನು ಭೀತಿ ಇಲ್ಲದೆ ಭಿನ್ನ ಅಭಿಪ್ರಾಯವನ್ನು ವ್ಯಕ್ತಪಡಿಸುವ ವ್ಯಕ್ತಿಗಳ ಮೇಲೆ ದೈಹಿಕವಾಗಿ ಹಲ್ಲೆ ನಡೆಸುವುದು ನಡೆಯುತ್ತಲೇ ಇದೆ. ಕಳೆದ ಮೂರು ದಶಕಗಳಲ್ಲಿ ದೇಶದಲ್ಲಿ ವ್ಯವಸ್ಥಿತವಾಗಿ ಬೇರೂರಿರುವ ಮತಾಂಧತೆ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ ಈ ಧೋರಣೆಗೆ ಮತ್ತಷ್ಟು ಪುಷ್ಟಿ ನೀಡುತ್ತದೆ. ಹಾಸ್ಯ ಕಲಾವಿದನ ಒಂದು ಜೋಕ್, ಒಂದು ಕಲಾಕೃತಿ, ಒಂದು ಸಿನಿಮಾ, ಒಂದು ಹಾಡು ಎಲ್ಲವೂ ಯಾವುದೋ ಒಂದು ಸಂಘಟನೆಯಿಂದ ನಿಬಂಧನೆಗೆ ಒಳಗಾಗುತ್ತಿದೆ. ಮೀರ ರಾಘವೇಂದ್ರ ಇಂತಹ ಒಂದು ಸಾಂಸ್ಥಿಕ/ಸಂಘಟಿತ ಸಂಸ್ಕೃತಿಯನ್ನು ಪ್ರತಿನಿಧಿಸುತ್ತಾರೆ.

ಪ್ರೊ ಭಗವಾನ್ ಅವರ ಮೇಲೆ ನ್ಯಾಯಾಲಯದ ಆವರಣದಲ್ಲೇ ಹಲ್ಲೆ ನಡೆಸಿರುವ ಮೀರ ರಾಘವೇಂದ್ರ ಅವರ ವಿರುದ್ಧ ಹೈಕೋರ್ಟ್ ಸ್ವಪ್ರೇರಣೆಯಿಂದ ಮೊಕದ್ದಮೆ ದಾಖಲಿಸಬಹುದಿತ್ತು. ಆದರೆ ಇತ್ತೀಚೆಗೆ ನ್ಯಾಯ ವ್ಯವಸ್ಥೆ ಇಂತಹ ಘಟನೆಗಳ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದೆ. ಸಂಸ್ಕೃತಿ ರಕ್ಷಣೆಯ ಹೆಸರಿನಲ್ಲಿ, ಧರ್ಮ ರಕ್ಷಣೆಯ ಹೆಸರಿನಲ್ಲಿ ಸಾಹಿತಿ ಕಲಾವಿದರ ಮೇಲೆ ನಡೆಯುವ ಈ ರೀತಿಯ ಹಲ್ಲೆಗಳು ಸೃಜನಶೀಲತೆಯನ್ನೇ ಹಾಳುಮಾಡುತ್ತವೆ. ವಾಲ್ಮೀಕಿಯ ರಾಮನನ್ನು ಡಾ ಬಿ ಆರ್ ಅಂಬೇಡ್ಕರ್ ಸೇರಿದಂತೆ ಹಲವು ಚಿಂತಕರು ತಮ್ಮದೇ ಆದ ರೀತಿಯಲ್ಲಿ ವ್ಯಾಖ್ಯಾನಿಸಿದ್ದಾರೆ. ಈ ರೀತಿಯ ವಿಮರ್ಶಾತ್ಮಕ ಸಾಹಿತ್ಯದ ಮೂಲಕವೇ ರಾಮಾಯಣ ಮತ್ತು ಮಹಾಭಾರತದಂತಹ ಮಹಾಕಾವ್ಯಗಳು ಇಂದಿಗೂ ತಮ್ಮ ಅಂತಃಸತ್ವವನ್ನು ಉಳಿಸಿಕೊಂಡುಬಂದಿವೆ. ಸಾಂಸ್ಕೃತಿಕ ರಾಜಕಾರಣವನ್ನು ಪ್ರತಿನಿಧಿಸುವವರಿಗೆ ಈ ಸಾಹಿತ್ಯಕ ಆಯಾಮದ ಪರಿಜ್ಞಾನವೂ ಇರುವುದಿಲ್ಲ. ಏಕೆಂದರೆ ಈ ಪಕ್ಷ ಸಂಘಟನೆಗಳಿಗೆ ಮಹಾಕಾವ್ಯ ಮತ್ತು ಪೌರಾಣಿಕ ವ್ಯಕ್ತಿಗಳು ರಾಜಕೀಯ ಬಂಡವಾಳವಾಗಿ ಮಾತ್ರವೇ ಕಾಣಲು ಸಾಧ್ಯ.

ಈ ಘಟನೆಯನ್ನು ಖಂಡಿಸಬೇಕಾದ ರಾಜಕೀಯ ನಾಯಕರು ಮೌನ ವಹಿಸುತ್ತಾರೆ. ಭಗವಾನ್ ಪಾಕಿಸ್ತಾನದಲ್ಲಿದ್ದಿದ್ದರೆ ತಲೆ ಕಡಿಯಲಾಗುತ್ತಿತ್ತು ಎಂದು ಹೇಳುವ ಸಿ ಟಿ ರವಿ ಅವರಂತಹ ರಾಜಕೀಯ ನಾಯಕರು ಯಾವ ರೀತಿಯ ಮಾರ್ಗದರ್ಶನ ನೀಡಬಲ್ಲರು ಎಂದು ಯೋಚಿಸಬೇಕಿದೆ. ಇವರು ಕನ್ನಡ ಮತ್ತು ಸಂಸ್ಕೃತಿ ಸಚಿವರಾಗಿದ್ದವರು. ಅಭಿಪ್ರಾಯ ಸ್ವಾತಂತ್ರ್ಯವನ್ನು ಸಂವಿಧಾನ ನೀಡಿದೆ, ಭಿನ್ನ ಅಭಿಪ್ರಾಯವನ್ನು ಪ್ರಶ್ನಿಸುವ ಅಧಿಕಾರವನ್ನೂ ನೀಡಿದೆ. ಆದರೆ ದೈಹಿಕವಾಗಿ ಹಲ್ಲೆ ನಡೆಸುವ ಅಧಿಕಾರ ಯಾರಿಗೂ ಇರುವುದಿಲ್ಲ. ನ್ಯಾಯ ವ್ಯವಸ್ಥೆಯ ಮೌಲ್ಯಗಳನ್ನು ಕಾಪಾಡಬೇಕಾದ್ದು ವಕೀಲ ವೃತ್ತಿಯಲ್ಲಿರುವವರ ವೃತ್ತಿ ಧರ್ಮ. ಆದರೆ ಈ ವೃತ್ತಿ ಧರ್ಮ ಭ್ರಷ್ಟವಾಗಿರುವುದನ್ನು ಇತ್ತೀಚಿನ ದಿನಗಳಲ್ಲಿ ಕಾಣುತ್ತಿದ್ದೇವೆ.

ಮೈಸೂರಿನ ವಿಶ್ವವಿದ್ಯಾಲಯದ ಅವರಣದಲ್ಲಿ ಕಳೆದ ವರ್ಷ ನಡೆದ ಘಟನೆಗಳ ಸಂದರ್ಭದಲ್ಲಿ ಆರೋಪಿಯ ಪರ ವಕಾಲತ್ತು ವಹಿಸುವ ವಕೀಲರನ್ನು ಬಹಿಷ್ಕರಿಸುವ ಮಟ್ಟಿಗೆ ವಕೀಲರ ಸಂಘ ಬೌದ್ಧಿಕವಾಗಿ ದಿವಾಳಿಯಾಗಿದೆ. ವಕೀಲರು, ಪೊಲೀಸರು, ಸೈನಿಕರು ಮತ್ತು ಇತರ ವೃತ್ತಿಪರರಿಗೆ ಮೂಲತಃ ಸಾಂವಿಧಾನಿಕ ಮೌಲ್ಯಗಳ ಪರಿವೆ, ಪರಿಜ್ಞಾನ ಇರಬೇಕಾಗುತ್ತದೆ. ವಕೀಲರು ಧರಿಸುವ ಕರಿ ಕೋಟು, ಪೊಲೀಸರು ಧರಿಸುವ ಸಮವಸ್ತ್ರ ಮತ್ತು ಪದಕಗಳು, ಆಯಾ ವೃತ್ತಿಗೆ ಪ್ರವೇಶಿಸುವಾಗ ಮಾಡುವ ಪ್ರಮಾಣ ವಚನ ಇವೆಲ್ಲವೂ ಈ ದೇಶದ ಸಂವಿಧಾನ ರಕ್ಷಣೆಗೆ ಬದ್ಧವಾಗಿರುವುದಕ್ಕೆ ಸೂಚಕಗಳು. ಆದರೆ ಅಧಿಕಾರ ರಾಜಕಾರಣದ ಭ್ರಷ್ಟ ಮಾರ್ಗಗಳು ಈ ಸಾಂಸ್ಥಿಕ ನೆಲೆಗಳನ್ನೂ ಶಿಥಿಲಗೊಳಿಸುತ್ತಿರುವುದನ್ನು ಕಳೆದ ಐದಾರು ವರ್ಷಗಳಲ್ಲಿ ನೋಡುತ್ತಲೇ ಬಂದಿದ್ದೇವೆ.

ನಾಳೆ ಮೀರ ರಾಘವೇಂದ್ರ ಅವರಿಗೆ ಶಿಕ್ಷೆಯಾಗಬಹುದು ಅಥವಾ ಈಗಾಗಲೇ ಸನ್ಮಾನ, ಹಾರ ತುರಾಯಿಗಳ ನಡುವೆ ಮೆರೆಯುತ್ತಿರುವ ಆಕೆ ಅಧಿಕಾರ ರಾಜಕಾರಣದ ಫಲಾನುಭವಿಯೂ ಆಗಬಹುದು. ಆದರೆ ಆಕೆಯ ಮನಸ್ಥಿತಿ ಇಂದು ಎಲ್ಲ ಸಾಂಸ್ಥಿಕ ನೆಲೆಗಳನ್ನೂ ಪ್ರವೇಶಿಸಿದೆ, ಈ ಮನಸ್ಥಿತಿಯ ಹಿಂದೆ ಒಂದು ಸಾಂಸ್ಥಿಕ ಶಕ್ತಿ ಇದೆ, ಸಂಘಟನಾತ್ಮಕ ಒಳಹರಿವು ಇದೆ. ಈ ಸಾಂಸ್ಥಿಕ ಶಕ್ತಿಯನ್ನು ಜನಸಾಮಾನ್ಯರ ನಡುವೆ ಪರಿಚಯಿಸಿ, ಜೀವಂತಿಕೆಯೊಂದಿಗೆ ಉಳಿಸಲು ನಮ್ಮ ವಿದ್ಯುನ್ಮಾನ ಮಾಧ್ಯಮಗಳು ತುದಿಗಾಲಲ್ಲಿ ನಿಂತಿವೆ. ಇದು ನಮ್ಮ ಮುಂದಿರುವ ದುರಂತ ಮತ್ತು ನಾವು ಎದುರಿಸುತ್ತಿರುವ ಸವಾಲು. ಸಾಂಸ್ಕೃತಿಕ ರಾಷ್ಟ್ರೀಯತೆಯ ಮತಾಂಧ ರಾಜಕಾರಣ ಬೇರೂರುತ್ತಾ ಹೋದಂತೆ ಭಾರತದ ಸಾಹಿತಿಗಳು ತಮ್ಮೊಳಗಿನ ಕಥೆಗಾರನನ್ನು, ಕವಿಯನ್ನು, ಕಾದಂಬರಿಕಾರನನ್ನು, ಕಲಾವಿದರು ತಮ್ಮೊಳಗಿನ ಕಲಾವಿದನನ್ನು, ಗಾಯಕರು ತಮ್ಮೊಳಗಿನ ಹಾಡುಗಾರರನ್ನು ಕೊಲ್ಲುತ್ತಲೇ ಹೋಗಬೇಕಾದ ಸನ್ನಿವೇಶ ಎದುರಾಗುತ್ತದೆ.  ಈ ನಿಟ್ಟಿನಲ್ಲಿ ಪೆರುಮಾಳ್ ಮುರುಗನ್ ನಮ್ಮ ನಡುವೆ ಜೀವಂತ ಸಾಕ್ಷಿಯಾಗಿದ್ದಾರೆ.

ನ್ಯಾಯಾಂಗ, ಕಾನೂನು ಪಾಲನೆ, ಮತ್ತು ಮಾಧ್ಯಮ ಈ ಮೂರೂ ಕ್ಷೇತ್ರಗಳಲ್ಲಿ ವೃತ್ತಿಧರ್ಮದ ಪರಿಕಲ್ಪನೆಯೇ ಕ್ಷೀಣಿಸುತ್ತಿರುವ ಈ ಸಂದರ್ಭದಲ್ಲಿ, ಇಂತಹ ಬೆಳವಣಿಗೆಯ ವಿರುದ್ಧ ದನಿ ಎತ್ತದಿದ್ದರೆ ಬಹುಶಃ ಭಾರತದ ಪ್ರಜಾತಂತ್ರ ವ್ಯವಸ್ಥೆ ಮತ್ತು ಬಹುಸಂಸ್ಕೃತಿಯ ನೆಲೆಗಳು ಶಾಶ್ವತವಾಗಿ ವಿನಾಶದತ್ತ ಸಾಗುವ ಸಾಧ್ಯತೆಗಳೇ ಹೆಚ್ಚು. ಈ ಸಂದರ್ಭದಲ್ಲಿ ಭಗವಾನ್ ಏಕಾಂಗಿಯಲ್ಲ ಎನ್ನುವ ಸಂದೇಶವನ್ನು ಸಾರುತ್ತಲೇ, ಮತ್ತೊಬ್ಬ ಪೆರುಮಾಳ್ ಮುರುಗನ್ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕಿದೆ. ಗೌರಿ, ಕಲಬುರ್ಗಿ, ಪನ್ಸಾರೆ, ಧಬೋಲ್ಕರ್  ಅವರಂತೆ ಮತ್ತಷ್ಟು ಬೌದ್ಧಿಕ ಚೇತನಗಳು ನಿರ್ಗಮಿಸದಂತೆ ಎಚ್ಚರವಹಿಸಬೇಕಿದೆ. ಬದಲಾಗುತ್ತಿರುವ ಭಾರತದಲ್ಲಿ, ಆತ್ಮನಿರ್ಭರ ಭಾರತದಲ್ಲಿ ಪ್ರಜಾತಂತ್ರ ಮತ್ತು ಸಂವಿಧಾನವನ್ನು ಪ್ರೀತಿಸುವ, ಗೌರವಿಸುವ ಮನಸುಗಳ ಮುಂದಿರುವ ಮುಖ್ಯ ಸವಾಲು ಇದು.

ಇತ್ತೀಚಿನ ಸುದ್ದಿ