ವಕ್ಫ್ ತಿದ್ದುಪಡಿ ವಿಧೇಯಕ–2025ಕ್ಕೆ ರಾಷ್ಟ್ರಪತಿ ಅಂಕಿತ

ಹೊಸದಿಲ್ಲಿ: ಸಂಸತ್ ನಲ್ಲಿ ಎರಡು ದಿನಗಳ ಹಿಂದಷ್ಟೇ ಅನುಮೋದನೆ ಪಡೆದ ವಕ್ಫ್ ತಿದ್ದುಪಡಿ ವಿಧೇಯಕ-2025ಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು ಶನಿವಾರ ಅಂಕಿತ ಹಾಕಿದ್ದು, ಈ ಮೂಲಕ ವಿಧೇಯಕವು ಅಧಿಕೃತವಾಗಿ ಕಾಯ್ದೆಯಾಗಿ ಜಾರಿಯಾಗಿದೆ.
ಈಗಾಗಲೇ ವಿಧೇಯಕದ ಸಿಂಧುತ್ವ ಪ್ರಶ್ನಿಸಿ ಕಾಂಗ್ರೆಸ್, ಎಐಎಂಐಎಂ, ಆಪ್ ಪ್ರತ್ಯೇಕವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿವೆ. ವಕ್ಫ್ ಆಸ್ತಿಗಳ ನಿರ್ವಹಣೆ, ಮೇಲ್ವಿಚಾರಣೆ, ಸುಧಾರಣೆ ಮತ್ತು ಮಹಿಳೆಯರಿಗೆ ಪ್ರಾತಿನಿಧ್ಯ ನೀಡುವ ಜತೆಗೆ ಹಳೆಯ ಕಾಯ್ದೆಯಲ್ಲಿದ್ದ ಕೆಲವು ಅಂಶಗಳನ್ನು ತಿದ್ದುಪಡಿ ವಿಧೇಯಕದಲ್ಲಿ ತೆಗೆದುಹಾಕಲಾಗಿದೆ.
ಸಂಸತ್ತಿನಲ್ಲಿ ವಿಸ್ತೃತ ಚರ್ಚೆಗಳ ನಂತರ ಈ ವಿವಾದಾತ್ಮಕ ಮಸೂದೆಯನ್ನು ಅಂಗೀಕರಿಸಲಾಗಿತ್ತು. ರಾಜ್ಯಸಭೆಯು ಶುಕ್ರವಾರ ಮುಂಜಾನೆ 128 ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಿತು. 95 ಸದಸ್ಯರು ವಿರೋಧಿಸಿದರು. ಸುಮಾರು 17 ಗಂಟೆಗಳ ಕಾಲ ಚರ್ಚೆ ನಡೆಯಿತು. ಲೋಕಸಭೆಯು 13 ಗಂಟೆಗಳ ಚರ್ಚೆಯ ನಂತರ ಮಸೂದೆಯನ್ನು ಅಂಗೀಕರಿಸಿತ್ತು.
ಈ ಮಸೂದೆಯು ವಕ್ಫ್ ಆಸ್ತಿಗಳ ಆಡಳಿತವನ್ನು ಸುಧಾರಿಸುವ ಗುರಿಯನ್ನು ಹೊಂದಿದ್ದು. ವ್ಯವಹಾರಗಳಲ್ಲಿ ಪಾರದರ್ಶಕತೆಯನ್ನು ಹೆಚ್ಚಿಸುತ್ತದೆ. ವಕ್ಫ್ ಮಂಡಳಿಗಳಲ್ಲಿ ವಿವಿಧ ಮುಸ್ಲಿಂ ಪಂಗಡಗಳ ಪ್ರಾತಿನಿಧ್ಯವನ್ನು ಖಚಿತಪಡಿಸುತ್ತದೆ. ಪರಂಪರೆಯ ತಾಣಗಳನ್ನು ರಕ್ಷಿಸಲು, ಸಾಮಾಜಿಕ ಕಲ್ಯಾಣವನ್ನು ಸುಧಾರಿಸಲು ಮತ್ತು ಮುಸ್ಲಿಂ ವಿಧವೆಯರು ಮತ್ತು ವಿಚ್ಛೇದಿತರು ಸೇರಿದಂತೆ ಅಂಚಿನಲ್ಲಿರುವ ಗುಂಪುಗಳ ಆರ್ಥಿಕ ಸೇರ್ಪಡೆಗೆ ಬೆಂಬಲ ನೀಡಲು ಇದು ಅವಕಾಶಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: